ಚಿರನಿದ್ರೆಗೆ ಜಾರಿದ ಮಾಜಿ ಪಿಎಂ | ಎಐಸಿಸಿ ಕೇಂದ್ರ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ | ಪಾರ್ಥಿವ ಶರೀರಕ್ಕೆ ಪಕ್ಷ ಬೇಧ ಮರೆತು ನಾಯಕರ ಅಂತಿಮ ಗೌರವ
ನವದೆಹಲಿ: ಗುರುವಾರ ನಿಧನರಾದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಅವರ ನಿವಾಸದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ಶುಕ್ರವಾರ ಅಂತಿಮ ನಮನ ಸಲ್ಲಿಸಿದರು.
ತ್ರಿವರ್ಣ ಧ್ವಜ ಹೊದಿಸಿದ ಪಾರ್ಥಿವ ಶರೀರಕ್ಕೆ ಪಕ್ಷ ಬೇಧ ಮರೆತು ನಾಯಕರು ಅಂತಿಮ ಗೌರವ ಸಲ್ಲಿಸಿದರು. ಈ ವೇಳೆ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಮತ್ತಿತರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಅಮೆರಿಕದಲ್ಲಿರುವ ಮನ ಮೋಹನ್ ಸಿಂಗ್ ಅವರ ಮಗಳಿಗಾಗಿ ಕುಟುಂಬ ಕಾಯುತ್ತಿದ್ದು, ಅವರು ಬಂದ ನಂತರ ನಾಳೆ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಅಲ್ಲಿಯವರೆಗೂ ಅವರ ನವದೆಹಲಿಯ ನಿವಾಸದಲ್ಲಿಯೇ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಶನಿವಾರ ಬೆಳಗ್ಗೆ 8 ಗಂಟೆಗೆ ಕಾಂಗ್ರೆಸ್ ಕೇಂದ್ರ ಕಚೇರಿಗೆ ಪಾರ್ಥಿವ ಶರೀರವನ್ನು ತರಲಾಗುತ್ತಿದೆ. ಅಲ್ಲಿ ಬೆಳಗ್ಗೆ 8-30 ರಿಂದ 9-30ರವರೆಗೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಬೆಳಗ್ಗೆ 9-30ಕ್ಕೆ ಅಂತಿಮ ಯಾತ್ರೆ ಶುರುವಾಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಶುಕ್ರವಾರ ಸಂಜೆ 5.30ಕ್ಕೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸಿಡಬ್ಲ್ಯುಸಿ ಸದಸ್ಯರು, ಖಾಯಂ ಮತ್ತು ವಿಶೇಷ ಆಹ್ವಾನಿತರನ್ನು ಒಳಗೊಂಡ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮನಮೋಹನ್ ಸಿಂಗ್ ಅವರ ನಿಧನಕ್ಕೆ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ದೇಶದ ಜನತೆ ಹಾಗೂ ಅಭಿವೃದ್ಧಿಗಾಗಿ ಅವರ ಕೊಡುಗೆ ಯಾವಾಗಲೂ ಗೌರವಯುತವಾದದ್ದು.”
– ಕೆ. ಸಿ. ವೇಣುಗೋಪಾಲ್
ಎಐಸಿಸಿ ಪ್ರಧಾನ ಕಾರ್ಯದರ್ಶಿ

ಚಿರನಿದ್ರೆಗೆ ಜಾರಿದ ಮಾಜಿ ಪಿಎಂ
92 ವರ್ಷದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಗುರುವಾರ ತಡರಾತ್ರಿ ವಯೋಸಹಜ ಕಾಯಿಲೆಯಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ರದ್ದು
ಬೆಳಗಾವಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಮುಂದಿನ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
1924 ರಲ್ಲಿ ಗಾಂಧಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಇದರ ಶತಮಾನೋತ್ಸವದ ಅಂಗವಾಗಿ ಕಾಂಗ್ರೆಸ್ ಡಿ.26-27 ರಂದು “ಗಾಂಧಿ ಭಾರತ”, ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಕಾಂಗ್ರೆಸ್ ನ ಹೈಕಮಾಂಡ್ ನಾಯಕರು ಬೆಳಗಾವಿಗೆ ಆಗಮಿಸಿದ್ದರು.
ಆದರೆ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಎಐಸಿಸಿ ಅಧಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ. ಕಾರ್ಯಕ್ರಮ ರದ್ದುಗೊಂಡಿದ್ದು, ಸಿಎಂ ಸಿದ್ದರಾಮಯ್ಯ ಸಹ ದೆಹಲಿಗೆ ತೆರಳಿ ಮನಮೋಹನ್ ಸಿಂಗ್ ಅವರಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

