ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಉತ್ತರಪ್ರದೇಶದ ವಾರಣಾಸಿ ಬನಾರಸ ಹಿಂದೂ ವಿಶ್ವವಿದ್ಯಾಲಯದ ಹಿಂದಿ ವಿಭಾಗ ಹಾಗೂ ಯುಗದರ್ಶಿನಿ ಸಂಸ್ಥೆ ಆಯೋಜಿಸಿದ ಅಖಿಲ ಭಾರತ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಪುಸ್ತಕ ಪ್ರಕಟಣೆಯಲ್ಲಿ ಬೆರಗು ಪ್ರಕಾಶನದ ಸೇವೆಯನ್ನು ಗುರುತಿಸಿ ಯುಗದರ್ಶಿನಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕನ್ನಡದ ಖ್ಯಾತನಟಿ ಪ್ರೇಮಾ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ರೇಣು ದೇವಿ ಅವರು ಕಡಣ ಗ್ರಾಮದ ಬೆರಗು ಪ್ರಕಾಶನದ ಪರವಾಗಿ ಪ್ರಕಾಶಕಿ ವಿಜಯಲಕ್ಷ್ಮಿ ಆರ್. ಕತ್ತಿ ಅವರಿಗೆ ಪ್ರಶಸ್ತಿ ಫಲಕ, ನಗದು ನೀಡಿ ಪ್ರಶಸ್ತಿ ಪ್ರದಾನ ಮಾಡಿದರು.
ಕರ್ನಾಟಕದ ಮಾಜಿಸಚಿವೆ ಲೀಲಾದೇವಿ ಆರ್ ಪ್ರಸಾದ, ಸಮ್ಮೇಳನದ ಪ್ರಧಾನ ಸಂಚಾಲಕಿ ಡಾ.ಸರಸ್ವತಿ ಚಿಮ್ಮಲಗಿ ಬನಾರಸ ವಿವಿಯ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ವಿಶ್ವನಾಥ ದ್ವಿವೇದಿ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಬದಲ್ಲಿ ಬೆರಗು ಪ್ರಕಾಶನ ಪ್ರಕಟಿಸಿದ ಡಾ.ಸರಸ್ವತಿ ಚಿಮ್ಮಲಗಿ, ಗಾಯತ್ರಿ ಪತ್ತಾರ ಸಂಪಾದಿಸಿದ ‘ಮಹಿಳಾ ಮೀಸಲಾತಿ: ಪ್ರಸ್ತುತತೆ’ ಸಂಪುಟವನ್ನು ಲೇಖಕಿ ಲೀಲಾದೇವಿ ಆರ್. ಪ್ರಸಾದ ಬಿಡುಗಡೆ ಮಾಡಿ ಮಾತನಾಡಿದರು.
ಬೆರಗು ಪ್ರಕಾಶನವು ಕಳೆದ ೮ ವರ್ಷಗಳಲ್ಲಿ ೧೫೬ ಪುಸ್ತಕಗಳನ್ನು ಹೊರತಂದಿದೆ. ಜನವರಿಯಲ್ಲಿ ಮತ್ತೆ ೨೦ಪುಸ್ತಕಗಳು ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಚಾಲಕ ಡಾ.ರಮೇಶ ಕತ್ತಿ ತಿಳಿಸಿದ್ದಾರೆ.

