47 ಸೆಕೆಂಡುಗಳಲ್ಲಿ ಸಂವಿಧಾನ ಪೀಠಿಕೆ ಹೇಳಿದ ಮಕ್ಕಳು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಒಂದು ಉತ್ತಮ ಹವ್ಯಾಸವು ಮಗುವಿಗೆ ಆತ್ಮವಿಶ್ವಾಸ, ಸ್ವಾವಲಂಬಿ ಮತ್ತು ಸ್ವತಂತ್ರವಾಗಲು ಸಹಾಯ ಮಾಡುವ ಮೂಲಕ ಅವರ ವ್ಯಕ್ತಿತ್ವವನ್ನು ಧನಾತ್ಮಕವಾಗಿ ರೂಪಿಸುತ್ತದೆ. ಜತೆಗೆ ಮಕ್ಕಳ ಆಲೋಚನಾ ಕೌಶಲ್ಯವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಈ ಅವಳಿ ಹೆಣ್ಣು ಮಕ್ಕಳೇ ನಿದರ್ಶನ.
ಆಟವಾಡುವ ವಯಸ್ಸಿನಲ್ಲೇ ತಮ್ಮ ಜ್ಞಾಪಕಶಕ್ತಿಯಿಂದ ಕೇವಲ 47 ಸೆಕೆಂಡುಗಳಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಕನ್ನಡದಲ್ಲಿ ಹೇಳಿ ವಿಶೇಷ ಸಾಧನೆ ಮಾಡಿದ ತಾಲೂಕಿನ ನಾಗಠಾಣ ಗ್ರಾಮದ ಅವಳಿ ಹೆಣ್ಣು ಮಕ್ಕಳಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ‘ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ‘ನ್ಯಾಷನಲ್ ರೆಕಾರ್ಡ್’ ದಾಖಲಿಸಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
‘ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು’ ಎಂಬ ಮಾತಿನಂತೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಎಲ್ಲರಿಂದ ಆಗಬೇಕು. ಆಗ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಮಕ್ಕಳ ತಂದೆ ಸಂತೋಷ ಬಂಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಯುಕೆಜಿ ವರ್ಗದಲ್ಲಿ ಓದುತ್ತಿರುವ ಅವರು ಜ್ಞಾಪಕಶಕ್ತಿ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ ಎಂದು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ನವರು ‘ನ್ಯಾಷನಲ್ ರೆಕಾರ್ಡ್’ ಸರ್ಟಿಫಿಕೇಟ್ ನೀಡಿ ಗೌರವಿಸಿದ್ದಾರೆ.
ಮಕ್ಕಳ ಈ ಸಾಧನೆಗೆ ಕುಟುಂಬಸ್ಥರು, ಗ್ರಾಮಸ್ಥರು, ಶಿಕ್ಷಕರು ಹೆಮ್ಮೆ ಪಟ್ಟಿದ್ದಾರೆ.

