ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಕೊಲ್ಹಾರ ತಾಲ್ಲೂಕಿನ ಮುಳವಾಡ ಗ್ರಾಮದ ಬಳಿ ಹೊಸದಾಗಿ ಸ್ಥಾಪಿಸಿರುವ ಟೋಲ್ ನಾಕಾದಲ್ಲಿ ಹೆದ್ದಾರಿ ಇತರೆ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಈಗಾಗಲೇ ಹೆದ್ದಾರಿ ಶುಲ್ಕ ವಸೂಲಾತಿ ಆರಂಭಿಸಲಾಗಿದೆ. ಈ ಹಿಂದೆ ಮನವಿ ಮಾಡಿದಂತೆ ಹೆದ್ದಾರಿಯಲ್ಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸುತ್ತಮುತ್ತಲಿನ ಗ್ರಾಮಸ್ಥರ, ರೈತರ ಸಭೆ ಮಾಡುವವರೆಗೂ ಟೋಲ್ ಶುಲ್ಕ ವಸೂಲಾತಿ ಬಂದ್ ಮಾಡಬೇಕೆಂದು ವಿಜಯಪುರ ಜಿಲ್ಲಾ ಅನ್ನದಾತ ಯುವ ರೈತ ಸಂಘದಿಂದ ಸೋಮವಾರ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ ಗರಸಂಗಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 218 ರ ಮುಳವಾಡ ಬಳಿ ಟೋಲ್ ನಾಕಾ ಸ್ಥಾಪಿಸಿ, ಪ್ರತಿ ವಾಹನಗಳಿಂದ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ಮುಳವಾಡ ಟೋಲ್ ಸಮೀಪದ ಹೊನಗನಹಳ್ಳಿ ರೈಲ್ವೆ ಗೇಟ್ ಬಳಿ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ, ಅಲ್ಲದೇ ಅಲ್ಲಿನ ರಸ್ತೆ ಕಾಮಗಾರಿ ಸಹ ಕಳಪೆಮಟ್ಟದಾಗಿದೆ. ಜೊತೆಗೆ ಟೂಲ್‌ಗೇಟ್ ಬಳಿ ನಿಯಮದಂತೆ ಅವಶ್ಯವಾದ ಮೂಲಭೂತ ಸೌಲಭ್ಯಗಳು, ಸರ್ವಿಸ್ ರಸ್ತೆ ನಿರ್ಮೀಸಬೇಕು.
ಈ ಹಿಂದೆ ಈ ವಿಚಾರದ ಕುರಿತು ಆಗಸ್ಟ್ 06 ಹಾಗೂ ಸೆಪ್ಟೆಂಬರ್ 30 ರಂದು ಎರಡು ಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಮನವಿ ನಿರ್ಲಕ್ಷಿಸಿ ಟೋಲ್ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ಹಾಗಾಗಿ ಹೆದ್ದಾರಿ ಮೇಲಿನ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿ, ಕಳಪೆ ರಸ್ತೆ ದುರಸ್ತಿ ಹಾಗೂ ಟೂಲ್ ನಾಕಾ ಬಳಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಸುತ್ತಮುತ್ತಲಿನ ಗ್ರಾಮಸ್ಥರ, ರೈತರ ಸಭೆ ಮಾಡಿದ ಬಳಿಕವೇ ಟೂಲ್ ಸಂಗ್ರಹಿಸಬೇಕು. ಅಲ್ಲಿವರೆಗೂ ಟೂಲ್ ವಸೂಲಾತಿ ಬಂದ್ ಮಾಡಬೇಕು. ನಿರ್ಲಕ್ಷಿಸಿದರೆ ಸುತ್ತಲಿನ ಗ್ರಾಮಸ್ಥರು, ಸಂಘಸಂಸ್ಥೆಗಳೊಡಗೂಡಿ ರೈತ ಸಂಘದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ರೈತ ಮುಖಂಡರಾದ ಕುಮಾರ್ ಕಿಳೆಗಾವಿ, ಪಾಂಡು ದಳವಾಯಿ ಹಾಗೂ ಭರತೇಶ್ ಹಿಪ್ಪರಗಿ ಉಪಸ್ಥಿತರಿದ್ದರು.

