ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯಿಂದ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಕಾರ್ಮಿಕರು ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಕಾಲೇಜಿನ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಮ್ಮಿಕೊಂಡ ಟೂಲ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕಿಟ್ ವಿತರಣೆ ಮಾಡಿ ಮಾತನಾಡಿದರು.
ಕಾರ್ಮಿಕ ಇಲಾಖೆ ಅಧಿಕಾರಿಗಳು ಸರಕಾರದ ಸೌಲಭ್ಯಗಳ ಮಾಹಿತಿಯನ್ನು ಕಾರ್ಮಿಕರಿಗೆ ನೀಡಿದಲ್ಲಿ ಮಾತ್ರ ಸೌಲಭ್ಯಗಳು ಅರ್ಹ ಕಾರ್ಮಿಕರಿಗೆ ದೊರೆಯಲು ಸಾಧ್ಯವಾಗುತ್ತದೆ. ಕಟ್ಟಡ ನಿರ್ಮಾಣದಲ್ಲಿ ಮೇಸ್ತ್ರಿಗಳು, ಟೈಲ್ಸ್ ಕೆಲಸಗಾರರು, ಎಲೆಕ್ಟ್ರಿಷಿಯನ್, ವೇಲ್ಡರ್ ಸೇರಿದಂತೆ ಇತರ ಕಾರ್ಮಿಕರಿಗೆ ಕೆಲಸ ಮಾಡುವುದಕ್ಕೆ ಅಗತ್ಯವಿರುವ ಎಲ್ಲ ಕೌಶಲ್ಯ ಆಧಾರಿತ ಟೂಲ್ ಕಿಟ್‌ಗಳನ್ನು ಕಾರ್ಮಿಕ ಇಲಾಖೆ ಮೂಲಕ ನೀಡುತ್ತಿದೆ. ಕಾರ್ಮಿಕರೆಲ್ಲರೂ ಸರಕಾರ ಸೌಲಭ್ಯಗಳ ಸದುಪಯೋಗವನ್ನು ಪಡದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಜಿಲ್ಲಾ ಕೆಡಿಪಿ ಸದಸ್ಯ ನೂರಅಹ್ಮದ ಅತ್ತಾರ, ಕಾರ್ಮಿಕ ನೀರಿಕ್ಷಕ ಮಲ್ಲಿಕಾರ್ಜುನ ಬಗಲಿ, ವಿಜಯಪುರ ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ಸಾವಳಗೆಪ್ಪ ಉಪ್ಪಿನ, ಕಟ್ಟಡ ಕಾರ್ಮಿಕ ಸಂಘದ ತಾಲೂಕಾಧ್ಯಕ್ಷ ರಮೇಶ ಬಮ್ಮನಜೋಗಿ, ಸಿಬ್ಬಂದಿಗಳಾದ ಶರಣಪ್ಪ ದಬಕಿ, ಶ್ರೀಶೈಲ ಬಿಸಿರೊಟ್ಟಿ, ರಾಜು ದಂಡವತಿ ಸೇರಿದಂತೆ ಕಟ್ಟಡ ಕಾರ್ಮಿಕರು ಇದ್ದರು.

