ಅಪ್ರತಿಮ ಮಹಿಳೆ
ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ
ಉದಯರಶ್ಮಿ ದಿನಪತ್ರಿಕೆ
ಮದರ್ ತೆರೇಸಾ ಅವರು ಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ಬಡವರ, ರೋಗಿಗಳ, ಅನಾಥರ ಮತ್ತು ಮರಣ ಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.1970ರ ವೇಳೆಗೆ ಇವರು ಒಬ್ಬ ಮಾನವತಾವಾದಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದರು. ಅವರಿಗೆ ಬಡವರ, ನಿರ್ಗತಿಕರ, ರೋಗಿಗಳ, ಅನಾಥರ ,ವೃದ್ಧರ, ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮದರ್ ತೆರೇಸಾ ಅವರು ಅಲ್ಬೇನಿಯಾದವರು. ಭಾರತದ ಪೌರತ್ವವನ್ನು ಸಹ ಪಡೆದಿದ್ದರು. ಇವರು 1950 ರಲ್ಲಿ ಮಿಷನರೀಸ್ ಆಫ್ ಚಾರಿಟಿ ಎಂಬ ಸ್ವಯಂ ಸೇವಾ ಸಂಘವನ್ನು ಭಾರತದ ಕಲ್ಕತ್ತಾದಲ್ಲಿ ಸ್ಥಾಪಿಸಿದರು. ಈ ಸಂಸ್ಥೆಯನ್ನು ಮೊದಲು ಭಾರತದಾದ್ಯoತ ವಿಸ್ತರಿಸಲು ಮಾರ್ಗದರ್ಶಿಯಾಗಿ, ನಂತರ ವಿಶ್ವದ ಇತರ ರಾಷ್ಟ್ರಗಳಿಗೂ ಸಂಸ್ಥೆಯ ಕಾರ್ಯಾಚರಣೆಯನ್ನು ವ್ಯಾಪಿಸುವಂತೆ ಮೇಲ್ವಿಚಾರಣೆ ನಡೆಸಿದರು.
ಮದರ್ ತೆರೇಸಾ ಅವರ ಬಗ್ಗೆ ಮ್ಯಾಲ್ಕಮ್ ಮುಗ್ಗರಿಜ್ ಸಮ್ ಥಿಂಗ್ ಬ್ಯೂಟಿಫುಲ್ ಫಾರ್ ಗಾಡ್ ಕೃತಿಯನ್ನು ರಚಿಸಲಾಗಿದೆ. ಮತ್ತು ಇದೇ ಕೃತಿಯನ್ನು ಆಧರಿಸಿ ಸಾಕ್ಷ ಚಿತ್ರ ಒಂದನ್ನು ನಿರ್ಮಿಸಿದ್ದಾರೆ. ಭಾರತ ಸರ್ಕಾರವು ಕೂಡ ಈ ಮಹಾಮಾತೆಗೆ ದೇಶದ ಅತ್ಯುನ್ನತ ಪೌರ ಪ್ರಶಸ್ತಿಯಾದ ಭಾರತರತ್ನ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದೆ. ಮದರ್ ತೆರೇಸಾ ಸ್ಥಾಪಿಸಿದ ಮಿಷನರೀಸ್ ಆಫ್ ಚಾರಿಟಿ ಸಂಸ್ಥೆ ತನ್ನ ಸೇವೆಯನ್ನು ವಿಸ್ತರಿಸುತ್ತಾ ಹೋಯಿತು.ಇದು ಧರ್ಮಶಾಲೆಗಳು, ಎಚ್ಐವಿ, ಏಡ್ಸ್ ಪೀಡಿತರ ಸೇವೆ, ಕುಷ್ಟರೋಗಿಗಳ ಆರೈಕೆ, ಕ್ಷಯ ರೋಗಿಗಳ ಶುಶ್ರೂಶೆಯಲ್ಲಿ ತೊಡಗಿತ್ತು.
ಇದರ ಜೊತೆಗೆ ಸಾಲು ಸಾಲು ಅರವಟ್ಟಿಗೆಗಳು, ಮಕ್ಕಳ ಮತ್ತು ಕೌಟುಂಬಿಕ ಆಪ್ತ ಸಲಹೆ , ಅನಾಥಾಶ್ರಮಗಳು, ಮುಂತಾದ ವಿವಿಧ ಸೇವಾ ಸೌಲಭ್ಯಗಳನ್ನು ಇಲ್ಲದವರ ಪಾಲಿಗೆ ಉಂಟಾಗಿಸಿದರು. ಮದರ್ ತೆರೇಸಾ ನಿಧನದ ಹೊತ್ತಿಗೆ 123 ದೇಶಗಳಲ್ಲಿ 610 ಮಿಷನರಿಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಹಲವಾರು ಸರ್ಕಾರ, ಸಂಘ ಸಂಸ್ಥೆ ಹಾಗೂ ವ್ಯಕ್ತಿಗಳಿಂದ ಹೊಗಳಿಕೆಗೆ ಪಾತ್ರರಾಗಿದ್ದ ಇವರು ನಾನಾ ಬಗೆಯ ಟೀಕೆಗಳಿಗೂ ಗುರಿಯಾಗಿದ್ದರು. ಸಾವಿನ ದವಡೆಯಲ್ಲಿರುವವರಿಗಾಗಿ ಚರ್ಚ್ಗೆ ಸೇರಿಸಿಕೊಳ್ಳುವಾಗ ಮಾಡಿಸಲಾಗುವ ಶುದ್ದಿ ಸ್ನಾನ ಅಥವಾ ದೀಕ್ಷಾ ವಿಧಿ ಗರ್ಭಪಾತದ ವಿರುದ್ಧದ ಇವರ ಬಲವಾದ ನಿಲುವು ಮೊದಲಾದವುಗಳ ಮೇಲೆ ಬೆಳಕು ಚೆಲ್ಲಿದ ಕೆಲವರು ಇವೆಲ್ಲ ಮತಾಂತರಕ್ಕೆ ಪ್ರೇರೇಪಿಸುವ ಕೃತ್ಯಗಳೆಂದು ಖಂಡಿಸಿದರು.
ಇವರ ಅನಾಥಾಲಯಗಳಲ್ಲಿನ ವೈದ್ಯಕೀಯ ಚಿಕಿತ್ಸೆಯ ಗುಣಮಟ್ಟವನ್ನು ವೈದ್ಯಕೀಯ ನಿಯತಕಾಲಿಕೆಗಳು ಟೀಕಿಸಿದ್ದವು. ಮತ್ತು ಸಂಸ್ಥೆಗೆ ದಾನವಾಗಿ ಬಂದ ಹಣವನ್ನು ವ್ಯಯ ಮಾಡುವ ವಿಚಾರದಲ್ಲಿ ಅಪಾರದರ್ಶಕತೆ ವಿರುದ್ಧ ಕಳವಳ ವ್ಯಕ್ತ ಮಾಡಿದ್ದವು. 1996ರಲ್ಲಿ ಮದರ್ ತೆರೇಸಾ ಅವರನ್ನು ಯುನೈಟೆಡ್ ಸ್ಟೇಟ್ಸ್ ನ ಗೌರವ ಪ್ರಜೆಯಾಗಿ ನೇರವಾಗಿ ಆಕ್ಟ್ ಆಫ್ ಕಾಂಗ್ರೆಸ್ ಮೂಲಕ ಅಧಿಕೃತವಾಗಿ ಪ್ರಕಟಿಸಲಾಯಿತು. ಇವರ ಸಾವಿನ ನಂತರ ಪೋಪ್ ಜಾನ್ ಪಾಲ್ ತೆರೆಸಾಗೆ ಕಲ್ಕತ್ತಾದ ಪೂಜ್ಯ ತೆರೇಸಾ ಎಂಬ ಬಿರುದನ್ನಿತ್ತು ಪರಮಪದ ಪ್ರಾಪ್ತಿಯನ್ನು ನೀಡಿದರು.
ಮದರ್ ತೆರೇಸಾ ಅವರು 1910 ರ ಆಗಸ್ಟ್ 26ರಂದು ಒಟ್ಟೊಮನ್ ಎಂಪೈರ್ ನ ಉಸ್ಕುಬ್ ನಗರದಲ್ಲಿ ಜನಿಸಿದರು. ಆಗಸ್ಟ್ 26ರಂದು ಜನಿಸಿದ್ದರೂ ಸಹ ಇವರು ತಾವು ದೀಕ್ಷಾ ವಿಧಿ ಸ್ವೀಕರಿಸಿದ ಆಗಸ್ಟ್ 27ರ ದಿನಾಂಕವನ್ನೇ ತಮ್ಮ ನೈಜ ಜನ್ಮ ದಿನಾಂಕ ಎಂದು ಪರಿಗಣಿಸಿದ್ದರು. ತೆರೇಸಾ ಅಲ್ವೇನಿಯಾದ ಸ್ಕೋಡರ್ ನಗರ ವಾಸಿಗಳಾದ ನಿಕೋಲ್ಲೇ ಮತ್ತು ಡ್ರಾನ್ ಭೋಜಕ್ಸಿ ಯ ದಂಪತಿಗಳಿಗೆ ಜನಿಸಿದ ಮಕ್ಕಳಲ್ಲಿ ಅತೀ ಕಿರಿಯಳು. ಅಲ್ಬೇನಿಯಾದ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಈಕೆಯ ತಂದೆ 1919 ರಲ್ಲಿ ತೀರಿಕೊಂಡಾಗ ಅವಳಿನ್ನೂ ಎಂಟು ವರ್ಷದ ಹುಡುಗಿ. ತಂದೆ ನಿಧನ ನಂತರ ತಾಯಿಯು ಆಕೆಯನ್ನು ರೋಮನ್ ಕ್ಯಾಥೋಲಿಕ್ ಚರ್ಚಿನ ಅನುಯಾಯಿಯಾಗಿ ಬೆಳೆಸಿದರು. ಮಿಷನರಿಗಳು ಮತ್ತು ಅವುಗಳ ಸೇವಾ ಕಾರ್ಯಗಳ ಕುರಿತು ತೆರೇಸಾ ಆಕರ್ಷಿತರಾಗಿದ್ದಳೆಂದು ತೆರೇಸಾ ಜೀವನ ಚರಿತ್ರೆಯನ್ನು ರಚಿಸಿರುವ ಗ್ರಾಫ್ಲುಕಾಸ್ ಬರೆಯುತ್ತಾರೆ. ಜೊತೆಗೆ ಅವಳು ತನ್ನ 12ನೇ ವಯಸ್ಸಿಗಾಗಲೇ ತನ್ನ ಉಳಿದ ಬದುಕನ್ನು ಧಾರ್ಮಿಕ ಸೇವೆಗೆ ಮುಡಿಪಾಗಿಡಬೇಕೆಂದು ತೀರ್ಮಾನಿಸಿದ್ದಳು. ತಮ್ಮ18ನೇ ವಯಸ್ಸಿಗೆ ಮನೆತನ ತೊರೆದ ತೆರೇಸಾ ಸಿಸ್ಟರ್ಸ್ ಆಫ್ ಲೊರೇಟೊ ಮಿಶನರಿಯನ್ನು ಸೇರಿಕೊಂಡರು. ಮತ್ತೆ ಅವರ ತಾಯಿಯನ್ನಾಗಲಿ ಸಹೋದರಿಯನ್ನಾಗಲಿ ಇವರು ಹಿಂತಿರುಗಿ ನೋಡಲೇ ಇಲ್ಲ.
ಇಂಗ್ಲಿಷ್ ಕಲಿಯುವ ಸಲುವಾಗಿ ತೆರೇಸಾ ಆರಂಭದಲ್ಲಿ ರಾಥ್ ಫರ್ನ ಹ್ಯಾಮ್ ನಲ್ಲಿರುವ ಲೋರೆಟೊ ಆಬ್ಬಿ ಶಾಲೆಗೆ ಸೇರಿಕೊಂಡರು. ಸಿಸ್ಟರ್ಸ್ ಆಫ್ ಲೋರೆಟೊ ಮಿಷನರಿ ಭಾರತದಲ್ಲಿ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ನೀಡುತ್ತಿತ್ತು. ಇವರು 1929 ರಲ್ಲಿ ಭಾರತಕ್ಕೆ ಆಗಮಿಸಿ ಹಿಮಾಲಯದ ತಪ್ಪಲಿನಲ್ಲಿರುವ ಡಾರ್ಜಿಲಿಂಗನಲ್ಲಿ ತಮ್ಮ ದೀಕ್ಷಾ ತರಬೇತಿ ಅವಧಿಯನ್ನು ಆರಂಭಿಸಿದರು. ಮೊದಲ ಕ್ರೈಸ್ತ ನನ್ ಆಗಿ ತಮ್ಮ ಮೊದಲ ಧಾರ್ಮಿಕ ದೀಕ್ಷಾ ಪ್ರತಿಜ್ಞೆಯನ್ನು ಇವರು 1931ರ ಮೇ 24ರಂದು ಸ್ವೀಕರಿಸಿದರು. ಕ್ರೈಸ್ತ ವಿಷಯಗಳ ಪೋಷಕರಾಗಿದ್ದ ಥೇರೇಸೆ ಡಿ ಲಿಸಿಯುಕ್ಸ ಅವರ ಗೌರವಾರ್ಥ ಈ ಸಮಯದಲ್ಲಿ ತಮ್ಮ ಹೆಸರನ್ನು ತೆರೇಸಾ ಎಂದು ಬದಲಾಯಿಸಿಕೊಂಡರು. ಪೂರ್ವ ಕಲ್ಕತ್ತಾದ ದಿ ಲೋ ರೇಟು ಕಾನ್ವೆಂಟ್ ನಲ್ಲಿ ಶಿಕ್ಷಕಿಯಾಗಿ ಸೇರಿ ಸಲ್ಲಿಸುತ್ತಿದ್ದ ಸಮಯದಲ್ಲಿ ಇವರು 1937ರ ಮೇ 14ರಂದು ವಿಧಿವತ್ತಾಗಿ ತಮ್ಮ ದೀಕ್ಷಾ ಪ್ರತಿಜ್ಞೆ ಸ್ವೀಕರಿಸಿದರು.
ತೆರೇಸಾ ತಮ್ಮ ಶಿಕ್ಷಕ ವೃತ್ತಿಯಲ್ಲಿ ಸಂತೋಷದಿಂದ ಇದ್ದರೂ ಸಹ ಕಲ್ಕತ್ತಾದಲ್ಲಿ ತಮ್ಮ ಸುತ್ತಮುತ್ತ ಇದ್ದ ಬಡತನವನ್ನು ಕಂಡು ತೀವ್ರವಾಗಿ ವಿಚಲಿತರಾದರು. 1943ರಲ್ಲಿ ಉಂಟಾದ ಕ್ಷಾಮ ಕಲ್ಕತ್ತಾ ನಗರವನ್ನು ದುಸ್ಥಿತಿಗೆ ತಳ್ಳಿತಲ್ಲದೆ ಸಾಕಷ್ಟು ಸಾವು ನೋವುಗಳನ್ನು ತಂದೊಡ್ಡಿತು. ಇದರ ಜೊತೆಗೆ ಅದೇ ಸಮಯದಲ್ಲಿ ಎಂದರೆ ಆಗಸ್ಟ್ 1946ರಲ್ಲಿ ಭುಗಿಲೆದ್ದ ಹಿಂದೂ ಮುಸ್ಲಿಂ ಗಲಭೆ, ನಗರದ ಜನತೆಯನ್ನು ಹತಾಶೆ ಮತ್ತು ಭೀತಿಯಲ್ಲಿ ಮುಳುಗಿಸಿತು.
ಅವರ ಮಿಷನರೀಸ್ ಆಫ್ ಚಾರಿಟಿ ಮತ್ತು ಅಂತರಾಷ್ಟ್ರೀಯ ದತ್ತಿ ಕಾರ್ಯಕ್ರಮದ ಅಡಿಯಲ್ಲಿ ಲೆಕ್ಕವಿಲ್ಲದಷ್ಟು ಕೆಲಸಗಳು ಇಡೀ ಜಗತ್ತಿನಾದ್ಯoತ ನಡೆದವು. ಮದರ್ ತೆರೇಸಾ ಅವರಿಗೆ 1962ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಭಾರತ ಸರ್ಕಾರ ತನ್ನ ಗೌರವ ಸಲ್ಲಿಸಿತು. ಮುಂದಿನ ದಶಕಗಳಲ್ಲಿ ಪ್ರಮುಖ ಭಾರತೀಯ ಪುರಸ್ಕಾರಗಳನ್ನು ಇವರು ಪಡೆಯುತ್ತಲೇ ಬಂದರು. ಅಂತರಾಷ್ಟ್ರೀಯ ಸಂವೇದನಾಶೀಲತೆಗೆ 1972 ರಲ್ಲಿ ಜವಾಹರಲಾಲ್ ನೆಹರು ಪ್ರಶಸ್ತಿ, 1980 ರಲ್ಲಿ ಭಾರತದ ಅತ್ಯುನ್ನತ ಪೌರ ಪ್ರಶಸ್ತಿಯಾದ ಭಾರತರತ್ನ ಇವರ ಪಾಲಾದವು.
1992ರಲ್ಲಿ ಇವರ ಅಧಿಕೃತ ಜೀವನ ಚರಿತ್ರೆಯನ್ನು ನವೀನ ಚಾವ್ಲಾ ಅವರು ಬರೆದು ಪ್ರಕಟಿಸಿದರು. ಇವರು ಭಾರತೀಯ ನಾಗರಿಕ ಸೇವೆಯಲ್ಲಿದ್ದರು.

ಜಗತ್ತಿನ ಉಳಿದೆಡೆಯಿಂದಲೂ ಹಲವಾರು ಪ್ರಶಸ್ತಿಗಳು ಇವರಿಗೆ ಹರಿದು ಬಂದವು. 1985ರಲ್ಲಿ ಶ್ವೇತ ಭವನದ ಸಮಾರಂಭದಲ್ಲಿ ಪ್ರೆಸಿಡೆಂಟ್ ರೋನಾಲ್ಡ್ ರೇಗನ್ ಮದರ್ ತೆರೇಸಾ ಅವರಿಗೆ ಪ್ರೆಸಿಡೆನ್ಸಿಯಲ್ ಮೆಡಲ್ ಆಫ್ ಫ್ರೀಡಂ ಪ್ರಶಸ್ತಿಯನ್ನು ನೀಡಿದರು. ಯುನೈಟೆಡ್ ಸ್ಟೇಟ್ಸ್ 1996ರ ನವೆಂಬರ್ 16ರಂದು ಇವರಿಗೆ ಗೌರವ ಪೌರತ್ವ ನೀಡಿತು. ಮದರ್ ತೆರೇಸಾ ಅವರ ಮಾತೃಭೂಮಿ ಯಾದ ಅಲ್ಬೇನಿಯ ಇವರಿಗೆ 1994ರಲ್ಲಿ ಗೋಲ್ಡನ್ ಆನರ್ ಆಫ್ ದಿ ನೇಷನ್ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿತು. 1971ರಲ್ಲಿ ಆರನೆಯ ಪಾಲ್ ಇವರಿಗೆ ಮೊದಲ ಬಾರಿಗೆ ಶಾಂತಿ ಪ್ರಶಸ್ತಿ ನೀಡಿ ಗೌರವಿಸಿದರು. ಬಡವರಿಗಾಗಿ ಇವರು ಸಲ್ಲಿಸಿದ ಸೇವೆ, ಕ್ರಿಸ್ಚಿಯನ್ ಧರ್ಮದ ದಾನಗುಣದ ಪ್ರದರ್ಶನ ಮತ್ತು ಶಾಂತಿಗಾಗಿ ಪಟ್ಟ ಶ್ರಮ ಎಂದು ಇವರನ್ನು ಪ್ರಶಂಶಿಸಿದರು. 1976 ರಲ್ಲಿ ಪೇಸೆಮ್ ಇನ್ ಟೆರಿಸ್ ಅವಾರ್ಡ್ ದೊರೆಯಿತು. ಪಶ್ಚಿಮ ದೇಶಗಳ ಮತ್ತು ಭಾರತದ ವಿಶ್ವವಿದ್ಯಾಲಯಗಳೆರಡು ಇವರಿಗೆ ಗೌರವ ಪದವಿ ನೀಡಿದೆ ಇವರಿಗೆ ಸಂದಿರುವ ಇತರ ಪೌರ ಪ್ರಶಸ್ತಿಗಳೆಂದರೆ ಜನರ ನಡುವೆ ಭಾತೃತ್ವ ಶಾಂತಿ ಮಾನವೀಯ ಮೌಲ್ಯಗಳ ಪ್ರತಿಪಾದನೆಗಾಗಿ ಪಾಲ್ ಝಾನ್ ಪ್ರೈಸ್ ( 1978) ಮತ್ತು ಆಲ್ಬರ್ಟ್ ಸ್ಕ್ವಿಟ್ಜ್ ರ್ ಅಂತರಾಷ್ಟ್ರೀಯ ಪ್ರಶಸ್ತಿ ( 1975) ಸಂದಿವೆ. ವಿಶ್ವಸಂಸ್ಥೆ ಎಂದರೆ ಅವರು ಅವರೇ ಜಗತ್ತಿನ ಶಾಂತಿ ಅವರ ಜೀವಿತಾವಧಿಯಲ್ಲಿ ಮತ್ತು ಸಾವಿನ ನಂತರ ಮದರ್ ತೆರೇಸಾ ಗ್ಯಾಲಾಕ್ ಸಂಘಟನೆ ನಡೆಸಿದ ಸಮೀಕ್ಷೆಯಲ್ಲಿ ಧೃಢ ವಾಗಿ ಯುಸ್ ನಲ್ಲಿ ಅತ್ಯಂತ ಮೆಚ್ಚುಗೆಗೆ ಪಾತ್ರವಾದ ಏಕೈಕ ವ್ಯಕ್ತಿಯಾಗಿ ಹೊರಹೊಮ್ಮಿದರು. ಅಲ್ಲದೆ 1999 ರಲ್ಲಿ ಯುಎಸ್ ನಲ್ಲಿ ನಡೆದ ಮತದಾನದಲ್ಲಿ 20ನೇ ಶತಮಾನದ ಅತ್ಯಂತ ಪ್ರಶಂಸನೀಯ ವ್ಯಕ್ತಿಯಾಗಿ ಮೊದಲ ಸ್ಥಾನವನ್ನು ಪಡೆದಿದ್ದರು.
ಇತರರ ಸೇವೆಯಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಳ್ಳುವ ಶಕ್ತಿ ಮತ್ತು ದೃಢ ನಿಷ್ಠೆಯನ್ನು ಮದರ್ ತೆರೇಸಾ ಎಲ್ಲಿ ಕಂಡುಕೊಂಡರು, ದೇವರ ಪ್ರಾರ್ಥನೆಯಲ್ಲಿ ಮತ್ತು ಜೀಸಸ್ ಕ್ರೈಸ್ತ ನ ಮೌನ ಧ್ಯಾನ ಅವನ ಪವಿತ್ರ ಮುಖದರ್ಶನ ಅವನ ನಿರ್ಮಲ ಹೃದಯದಲ್ಲಿ ಅದನ್ನು ಅವರು ಕಂಡುಕೊಂಡಿದ್ದರು ಎಂದು ಅವರ ಕಾರ್ಯ ಮತ್ತು ಸಾಧನೆಗಳನ್ನು ವಿಶ್ಲೇಷಣೆ ಮಾಡುತ್ತ ಎರಡನೆಯ ಜಾನ್ ಪಾಲ್ ಹೇಳಿದ್ದರು. ಇವರ ಅಂತರಾಷ್ಟ್ರೀಯ ಅರಿವು ಮತ್ತು ದಕ್ಷಿಣ ಮತ್ತು ಪೂರ್ವ ಏಷ್ಯಾದಲ್ಲಿ ಸಲ್ಲಿಸಿದ ಸೇವೆಗೆ ಫಿಲಿಫೈನ್ಸ್ ಮೂಲದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ 1962 ರಲ್ಲಿ ಅವರ ಮುಡಿಗೇರಿತು. ಮದರ್ ತೆರೇಸಾ 1997ರ ಸೆಪ್ಟೆಂಬರ್ 5 ರಂದು ಇಹಲೋಕ ತ್ಯಜಿ ಸಿದರು. ಜೆಕ್ ಗಣರಾಜ್ಯದ ಒಳ ಮೌಂಟ್ ನ ವೆನ್ಸ್ಲಾಸ್ ಸ್ಕ್ವೇರ್ ನಲ್ಲಿರುವ ಕಟ್ಟಡವನ್ನು ಮದರ್ ತೆರೆಸಾರ ನೆನಪಿಗಾಗಿ ಸಮರ್ಪಿಸಲಾಗಿದೆ. ತೆರೆಸ ಒಂದು ಸ್ಪೂರ್ತಿಯ ನೆಲೆ ಹಲವು ವಸ್ತು ಸಂಗ್ರಹಾಲಯಗಳ ಮೂಲಕ ಅವರ ನೆನಪನ್ನು ಚಿರಸ್ಥಾಯಿ ಆಗಿಸಲಾಗಿದೆ. ಹಲವು ಚರ್ಚ್ ಗಳಿಗೆ, ಕಟ್ಟಡಗಳಿಗೆ, ರಸ್ತೆಗಳಿಗೆ ಇವರ ಹೆಸರಿಡಲಾಗಿದೆ. ಜೀವನ ಚರಿತ್ರಕಾರ ನವೀನ್ ಚಾವ್ಲಾ ತೆರೇಸಾ ಬಗ್ಗೆ ಬರೆದಿರುವ ಹಲವು ನುಡಿ ನಮನಗಳು ಭಾರತದ ಹಲವು ಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.


