ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಾಗದೇ ಆಡಳಿತ ಯಂತ್ರ ಕುಸಿದಿದ್ದು, ಕೂಡಲೇ ಜಿ.ಪಂ, ತಾ.ಪಂ ಚುನಾವಣೆ ನಡೆಸಲು ಕೋರಿ ರಾಜ್ಯ ಸರ್ಕಾರಕ್ಕೆ, ಚುನಾವಣಾ ಆಯೋಗ ಪತ್ರ ಬರೆಯಬೇಕೆಂದು ವಿಜಯಪುರ ಜಿಲ್ಲಾ ಅನ್ನದಾತ ಯುವ ರೈತ ಸಂಘ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ ಗರಸಂಗಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಾಗಿಲ್ಲ. ಇದರಿಂದ ಸರಿಯಾಗಿ ಜನಸ್ಪಂದನೆ, ಕೆಡಿಪಿ ಸಭೆಗಳಾಗದೇ ಜನಸಾಮಾನ್ಯರ ಕೆಲಸಗಳಾಗುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಲ್ಲದ ಪರಿಣಾಮ ಕೆಲವು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಹಾಗಾಗಿ ಕೂಡಲೇ ಜಿ.ಪಂ, ತಾ.ಪಂ ಚುನಾವಣೆಗಳನ್ನು ನಡೆಸುವುದು ಅತಿ ಅವಶ್ಯವಾಗಿದೆ. ಅಲ್ಲದೇ ವಿವಿಧ ಇಲಾಖೆಗಳಲ್ಲಿ ಬಹುವರ್ಷಗಳಿಂದ ಒಂದೇ ಜಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ
ಕುಮಾರ್ ಕಿಳೆಗಾವಿ, ಪಾಂಡು ದಳವಾಯಿ ಹಾಗೂ
ಭರತೇಶ್ ಹಿಪ್ಪರಗಿ ಉಪಸ್ಥಿತರಿದ್ದರು.

