ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸುಸ್ಥಿರ ಅಭಿವೃದ್ಧಿಯ ಎಲ್ಲ ಪ್ರಕಾರಗಳಲ್ಲಿ ತಳಪಾಯವಾಗಿ ನಿಂತು ಪ್ರತಿ ಮಜಲಿನಲ್ಲಿ ಮುಖ್ಯ ಪಾತ್ರ ವಹಿಸುವ ರೈತನನ್ನು ದೇಶದ ಅಸ್ಮಿತೆಯನ್ನಾಗಿಸುವ ಸಂಕಲ್ಪ ದೀವಿಗೆ ಹಚ್ಚಿ ಎಂದು ಚಿಂತಕ ಅರವಿಂದ ಕೊಪ್ಪ ಕರೆ ನೀಡಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಮಾದರಿ ಪರಿಶಿಷ್ಠ ಜಾತಿ – ಪರಿಶಿಷ್ಠ ಪಂಗಡಗಳ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ, ಮನೋಹರ ಮುಕ್ಕಣ್ಣಪ್ಪ ಕೋರಿ ರೈತ ಕೌಶಲ್ಯ ಅಭಿವೃದ್ಧಿ ಕೇಂದ್ರ, ಬಸರಕೋಡ, ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ, ಹಾಗೂ ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆ, ಕೃಷಿಗಾಗಿ ಯುವಕರು – ಯುವಕರಿಗಾಗಿ ಕೃಷಿ ಅಭಿಯಾನ ಉದ್ಘಾಟನೆ ಹಾಗೂ ರೈತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತನ ಬಗ್ಗೆ ದೇಶದಲ್ಲಿ ಹೆಚ್ಚುತ್ತಿರುವ ಅಸಡ್ಡೆ ಭಾವನೆ ಹೀಗೆಯೇ ಮುಂದುವರೆದಲ್ಲಿ ದೇಶದ ಆಹಾರ ಚಕ್ರವೇ ಕುಸಿದು ಬೀಳುವ ಆತಂಕ ದೇಶವನ್ನು ಕಾಡಲಿದ್ದು ಕೂಡಲೇ ಸರ್ಕಾರ ಮತ್ತು ಸಮಾಜ ಎಚ್ಚೆತ್ತುಕೊಂಡು ರೈತನ ಘನತೆಯನ್ನು ಎತ್ತಿ ಹಿಡಿದು ಗೌರವಿಸುವಂತಾಗಬೇಕು ಎಂದರು.
ಕಾಯಕ ಮತ್ತು ದಾಸೋಹ ಎಂಬ ತತ್ವಾಧಾರದ ಮೇಲೆ ತಾನು ಹಸಿದು ಇತರರನ್ನು ಬದುಕಿಸುವ ಪವಿತ್ರ ಕಾರ್ಯದಲ್ಲಿ ನಿಸ್ವಾರ್ಥತನದಿಂದ ಏಕಾಂಗಿ ಹೋರಾಟ ನಡೆಸುತ್ತಿರುವ ರೈತನ ಬದುಕನ್ನು ಮುಂದಿನ ಪೀಳಿಗೆಗೆ ಆದರ್ಶ ಪರಂಪರೆಯನ್ನಾಗಿ ವರ್ಗಾಯಿಸುವ ಜವಾಬ್ದಾರಿಯನ್ನು ಪ್ರಜ್ಞಾವಂತ ಸಮಾಜ ಹೊರಬೇಕಿದೆ ಎಂದರು.
ಪ್ರಗತಿಪರ ರೈತ ಮಹಿಳೆ ಕಾಶಿಬಾಯಿ ರಾಂಪೂರ ಮಾತನಾಡಿ, ಹೇರಳವಾಗಿ ಹಣ ತಂದು ಕೊಡುವ ಉದ್ಯೋಗದ ಮೇಲಿನ ಆಶೆಯಿಂದ ನಾವು ಮಕ್ಕಳಿಂದ ಕೃಷಿ ಕಸಿಯುವ ದುಸ್ಸಾಹಸ ಮೆರೆಯುತ್ತಿರುವ ಕಾರಣ ಸುಖ, ಶಾಂತಿ, ನೆಮ್ಮದಿ, ಆರೋಗ್ಯವನ್ನು ಹಣ ಕೊಟ್ಟು ಖರೀದಿಸುವ ಕೃತಕ ವ್ಯವಸ್ಥೆಯ ಜೋತು ಬೀಳುವ ಅನಿವಾರ್ಯತೆ ಬಂದೊದಗಿದೆ. ಬಾಲ್ಯದಿಂದಲೇ ಮಕ್ಕಳಿಗೆ ಕೃಷಿ ಪರಿಚಯಿಸುವ ನಮ್ಮ ಹಿರಿಯರ ಪದ್ಧತಿಯನ್ನು ಮರು ಪರಿಚಯಿಸುವ ದೃಢ ನಿರ್ಧಾರ ನಮ್ಮದಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್. ಎನ್ ಪಾಟೀಲ ಮಾತನಾಡಿದರು.
ಪರಪ್ಪ ಮಾಸ್ತರ ಸಾವಯವ ಪ್ರಗತಿಪರ ರೈತರಾದ ಬಸನಗೌಡ ಬ್ಯಾಲ್ಯಾಳ, ಅಲ್ಲೀಸಾಬ ಸುರಪೂರ, ಹುಚ್ಚೇಶ ಗೌಡರ, ಪರಸಪ್ಪ ಮೇಟಿ, ಗುಂಡಪ್ಪ ಬಿರಾದಾರ, ತಿಮ್ಮಣ್ಣ ವಡ್ಡರ ಇವರುಗಳಿಗೆ ಕೃಷಿ ವಿದ್ಯಾಪೀಠದಿಂದ ಕೊಡಮಾಡುವ ರೈತಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಗತಿಪರ ರೈತರಾದ ಸೋಮಲಿಂಗಪ್ಪ ಗಸ್ತಿಗಾರ, ಬಸವರಾಜ ಕುಂಟೋಜಿ, ಗೋಲಪ್ಪ ಗಂಗನಗೌಡ್ರ ಉಪಸ್ಥಿತರಿದ್ದರು.
ಅರುಣಾ ಬಿದರಿ ಸ್ವಾಗತಿಸಿದರು. ಉದಯ ರಾಯಚೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಧ್ಯಾಪಕ ರೇವಣಸಿದ್ದಪ್ಪ ಅಮನ್ನಿ ನಿರೂಪಿಸಿದರು. ಶಿವಕುಮಾರ ಉಣ್ಣಿಭಾವಿ ವಂದಿಸಿದರು.

