ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಹೊರವಲಯದ ಇಬ್ರಾಹಿಂಪುರ ಪೇಠದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ನಂದಬಸವೇಶ್ವರ ಜಾತ್ರಾ ಮಹೋತ್ಸವವು ಇದೇ ದಿ. ೨೩ ರಿಂದ ೨೫ ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಜಾತ್ರೆಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಜಾತ್ರೆಯ ಹಿನ್ನೆಲೆಯಲ್ಲಿ ನಂದಬಸವೇಶ್ವರ ದೇವಸ್ಥಾನ ಕಟ್ಟಡಕ್ಕೆ ಸುಣ್ಣ ಬಣ್ಣ ಹಚ್ಚಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಅಲಂಕೃತ ನಂದಿಕೋಲ ಮೆರವಣಿಗೆ ಈ ಜಾತ್ರೆಯ ಒಂದು ಪ್ರಮುಖ ಆಕರ್ಷಣೆ. ಜಾತ್ರೆ ಎಂದಮೇಲೆ ನಾಟಕ ಪ್ರದರ್ಶನವಿದ್ದದ್ದೇ. ಸ್ಥಳೀಯ ಯುವಕರೇ ನಾಟಕ ಕಲಿತು ಈ ಜಾತ್ರೆಯಲ್ಲಿ ಅಭಿನಯಿಸಲಿದ್ದಾರೆ.
ಜಾತ್ರೆಯ ಮೊದಲ ದಿನವೇ
ಅಂದರೆ ದಿ. ೨೩ ರಂದು ರಾತ್ರಿ ೧೦.೩೦ಕ್ಕೆ ಸ್ಥಳೀಯ ಯುವ ಕಲಾವಿದರನ್ನೊಳಗೊಂಡ ಶ್ರೀ ನಂದಬಸವೇಶ್ವರ ನಾಟ್ಯ ಸಂಘದಿಂದ “ಹುಚ್ಚ ಹಚ್ಚಿದ ಕಿಚ್ಚು” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವುದು.
ದಿ.೨೪ ರಂದು ಬೆಳಿಗ್ಗೆ ೬ಕ್ಕೆ ಅಭಿಷೇಕ, ೯ಕ್ಕೆ ನಂದಿಕೋಲ ಮೆರವಣಿಗೆ ನಡೆಯುವುದು. ಶ್ರೀ ನಂದಬಸವೇಶ್ವರ ದೇವಸ್ಥಾನದಿಂದ ಹೊರಡುವ ನಂದಿಕೋಲ ಮೆರವಣಿಗೆ ಗ್ರಾಮದ ಎಲ್ಲ ಭಕ್ತಾದಿಗಳ ಮನೆಗಳಿಗೆ ಭೇಟಿಕೊಟ್ಟು ಮರಳಿ ಮಧ್ಯಾಹ್ನ ೧ ಗಂಟೆಗೆ ನಂದಬಸವೇಶ್ವರ ದೇವಸ್ಥಾನ ತಲುಪುವುದು. ನಂತರ ಮಧ್ಯಾಹ್ನ ೧.೩೦ ರಿಂದ ರಾತ್ರಿ ೯.೩೦ ರವರೆಗೆ ಮಹಾಪ್ರಸಾದ ನಡೆಯುವುದು.
೨೫ ರಂದು ಮಧ್ಯಾಹ್ನ ೧ ಕ್ಕೆ ನಂದಬಸವೇಶ್ವರ ದೇವಸ್ಥಾನದಿಂದ ನಂದಿಕೋಲ ಮೆರವಣಿಗೆ ಪ್ರಾರಂಭವಾಗಿ ಇಬ್ರಾಹಿಂಪುರದ ಎಲ್ಲ ಭಕ್ತಾದಿಗಳ ಮನೆಗಳಿಗೆ ಭೇಟಿಕೊಟ್ಟು ಸಂಜೆ ೪.೩೦ಕ್ಕೆ ಕನಕದಾಸ ಬಡಾವಣೆ, ಅಲ್ಲಾಪುರ ಓಣಿ ಮಾರ್ಗವಾಗಿ ಸಂಚರಿಸಿ ಭಕ್ತರ ಮನೆಗಳಿಗೆ ಭೇಟಿ ಕೊಡುತ್ತ ಸಂಜೆ ೬ಕ್ಕೆ ರೇಲ್ವೆ ಸ್ಟೇಷನ್ ಮುಂದಿರುವ ಕರ್ನಾಟಕ ಜಿನ್ನಿಂಗ್ ಫ್ಯಾಕ್ಟರಿ ಎದುರಿಗೆ ಶ್ರೀ ನಂದಬಸವೇಶ್ವರ ಹಾಗೂ ಶ್ರೀ ಪವಾಡಬಸವೇಶ್ವರ ದೇವರು ಎದುರುಗೊಳ್ಳುವುದು. ನಂತರ ಶ್ರೀ ಸವಳಿಯವರ ತೋಟದ ಬಾವಿಯಲ್ಲಿ ಅಣ್ಣ-ತಮ್ಮಂದಿರ ಗಂಗಾಭಿಷೇಕ, ರಾತ್ರಿ ೮ ಕ್ಕೆ ಮೆರವಣಿಗೆ ಮರಳಿ ಅಲ್ಲಾಪುರ ಅಗಸಿ, ಜುಮ್ಮಾಮಸೀದಿ, ದಿವಟಗೇರಿ ಗಲ್ಲಿ ಮಾರ್ಗವಾಗಿ ಹಾಯ್ದು ಬಡಿಕಮಾನ ಹತ್ತಿರದ ಕಸಬಾ ಚಾವಡಿಗೆ ಆಗಮಿಸುವುದು.ಅಲ್ಲಿ ಮಂಗಳಾರತಿ ಕಾಕಡಾರತಿ ನಡೆಯುವುದು. ನಂತರ ಶ್ರೀ ಪವಾಡ ಬಸವೇಶ್ವರರನ್ನು ಬೀಳ್ಕೊಟ್ಟು ಕಮಾನಖಾನ ಬಜಾರ ಮಾರ್ಗವಾಗಿ ಭಕ್ತಾದಿಗಳ ಮನೆಗೆ ಭೇಟಿ ಕೊಟ್ಟು ರಾತ್ರಿ ೧೦ಕ್ಕೆ ಶ್ರೀ ನಂದಬಸವೇಶ್ವರ ದೇವಸ್ಥಾನಕ್ಕೆ ಬಂದು ಗದ್ದುಗೆಗೊಳ್ಳುವುದು.
ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಂದಬಸವೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ನಂದಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಹಾಗೂ ಶ್ರೀ ನಂದಬಸವೇಶ್ವರ ಜಾತ್ರಾ ಕಮೀಟಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ.