ಪ್ರೇರಣಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಮಕ್ಕಳ ಬಳಗದ ೪೮ನೇ ಚಿಣ್ಣರ ನುಡಿಸಿರಿ ಸಮಾರಂಭ | ಪುಸ್ತಕ ಮಿತ್ರ ಪ್ರಶಸ್ತಿ ಪ್ರದಾನ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಮಕ್ಕಳ ಬಳಗ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿದೆ. ಇದರ ಸಂಸ್ಥಾಪಕರಾದ ಮಕ್ಕಳ ಸಾಹಿತಿ ಹ.ಮ.ಪೂಜಾರ ತಮ್ಮ ಬದುಕಿನ ೫೦ವರ್ಷದ ಅವಧಿ ಮಕ್ಕಳ ಏಳ್ಗೆಗಾಗಿ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲು ಸವೆಸಿದ್ದಾರೆ. ಇವರು ಇಷ್ಟು ವರ್ಷಗಳು ಯಾವುದೇ ಪ್ರಾಯೋಜಿತ ಸಹಕಾರದಿಂದ ಸಾಹಿತ್ಯ ಕಾರ್ಯಕ್ರಮಗಳನ್ನು ಮಾಡಿಲ್ಲ. ತಮ್ಮ ಪಿಂಚಣಿ ಹಣದಿಂದ ಮಕ್ಕಳಿಗೆ ಸಾಹಿತ್ಯ ರಸದೌತಣ ಉಣಬಡಿಸುತ್ತಿದ್ದಾರೆ ಎಂದು ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಪ್ರಶಂಸಿದರು.
ಪಟ್ಟಣದ ಹೊರವಲಯದ ರಾಂಪೂರ ರಸ್ತೆಯಲ್ಲಿನ ಪ್ರೇರಣಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಮಕ್ಕಳ ಬಳಗ ಹಮ್ಮಿಕೊಂಡಿದ್ದ ೪೮ನೇ ಚಿಣ್ಣರ ನುಡಿಸಿರಿ ಸಮಾರಂಭದ ಹಳೆಬೇರು ಹೊಸ ಚಿಗುರು ಗೋಷ್ಠಿ-೨ರಲ್ಲಿ ವಿದ್ಯಾರ್ಥಿನಿ ನಂದಿನಿ ಚವ್ಹಾಣ ಇವರಿಗೆ ಪುಸ್ತಕ ಮಿತ್ರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಪ್ರತಿ ವರ್ಷ ಕೊಡಮಾಡುವ ಪುಸ್ತಕ ಮಿತ್ರ ಪ್ರಶಸ್ತಿ ಮಕ್ಕಳಿಗೆ ಪ್ರೇರಣೆಯಾಗಿ ಓದುವ ಅಭಿರುಚಿ ಹೆಚ್ಚಿಸಿಕೊಳ್ಳುವ ಸದುದ್ದೇಶವಾಗಿದೆ ಎಂದರು.
ಮಕ್ಕಳು ಮೊಬೈಲ್ ಗಳಿಂದ ದೂರಿವಿದ್ದು ಉತ್ತಮ ಪುಸ್ತಕಗಳನ್ನು ಸಂಗ್ರಹಿಸಿ ಅಧ್ಯಯನಶೀಲರಾಗಬೇಕು. ಮನೆಗೊಂದು ಗ್ರಂಥಾಲಯ ಇರಬೇಕು. ಮಕ್ಕಳು ಮಸ್ತಕವನ್ನು ತಣಿಸುವ ಪುಸ್ತಕಗಳನ್ನು ಸದಾ ಓದುತ್ತಿರಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿನಿ ನಂದಿನಿ ಚವ್ಹಾಣ ಚಿಣ್ಣರ ನುಡಿಸಿರಿ ಉದ್ಘಾಟಿಸಿ, ವ್ಯಕ್ತಿಗೆ ಸಾಹಿತ್ಯ ಜೀವನಾನುಭವ ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆ ಸಾಹಿತ್ಯ ಅಧ್ಯಯನ ಮಾಡುವಂತೆ ಸಲಹೆ ನೀಡಿದರು. ಮುಖ್ಯ ಅತಿಥಿಗಳಾದ ಮಲಘಾಣ ಗ್ರಾಮದ ವಿದ್ಯಾರ್ಥಿನಿ ಸಾಕ್ಷಿ ಬಂದಾಳ ಮಾತನಾಡಿ, ಸರ್ಕಾರ ಜಾರಿಗೆ ತಂದ ಮಕ್ಕಳ ಹಕ್ಕುಗಳು ಅಕ್ಷರಷಃ ಜಾರಿಗೆ ಬರಬೇಕಿದೆ. ಹೆಣ್ಣು-ಗಂಡು ತಾರತಮ್ಯ ದೂರಾಗಬೇಕು ಎಂದರು. ವಿದ್ಯಾರ್ಥಿನಿ ವಿದ್ಯಾಶ್ರೀ ನಾಯಕ ಅಧ್ಯಕ್ಷೀಯ ಭಾಷಣ ಮಾಡಿದರು.
ಈ ವೇಳೆ ಮಕ್ಕಳ ಸಾಹಿತಿ, ಮಕ್ಕಳ ಬಳಗದ ಸಂಸ್ಥಾಪಕ ಅಧ್ಯಕ್ಷ ಹ.ಮ.ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾವಿತ್ರಿ ಅಸ್ಕಿ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಎಸ್.ಎಂ.ಮಠಪತಿ, ಕೌಸ್ತುಂಬ ಕುಲಕರ್ಣಿ, ಸ್ವಾತಿ ಪತ್ತಾರ, ಅನೀಶ ಹಿರೇಮಠ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರೇರಣಾ ಸಮೂಹ ಸಂಸ್ಥೆ ಅಧ್ಯಕ್ಷ ಆರ್.ಡಿ. ಕುಲಕರ್ಣಿ, ನಿರ್ದೇಶಕ ಪ್ರಕಾಶ ಕುಲಕರ್ಣಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಂದ ಆಕರ್ಷಕ ಸಾಮೂಹಿಕ ನೃತ್ಯ ಪ್ರದರ್ಶನಗೊಂಡವು.