ಲೇಖನ
– ಜಯಶ್ರೀ ಕುಲಕರ್ಣಿ ✍️
ಉದಯರಶ್ಮಿ ದಿನಪತ್ರಿಕೆ
ಮಾತು ಎನ್ನುವುದು ದೇವರು ನಮಗೆ ನೀಡಿದ ಅತ್ಯುತ್ತಮ ವರ. ನಮ್ಮ ಮನಸಿನ ಭಾವನೆಗಳನ್ನು, ಪ್ರೀತಿ, ಕೋಪ, ಸ್ನೇಹ, ಕೃತಜ್ಞತೆ ಇತ್ಯಾದಿ ಭಾವನೆಗಳನ್ನು ನಾವು ಈ ಮಾತಿನ ಮೂಲಕ ಯಶಸ್ವಿಯಾಗಿ ವ್ಯಕ್ತ ಪಡಿಸುತ್ತೇವೆ. ಆದರೆ ನಾವು ನಮ್ಮ ಭಾವನೆಗಳನ್ನು ಸರಿಯಾದ ವ್ಯಕ್ತಿಗಳ ಮುಂದೆ ಸರಿಯಾದ ಸಮಯದಲ್ಲಿ ವ್ಯಕ್ತ ಪಡಿಸಬೇಕಾದದ್ದೂ ಸಹ ಅಷ್ಟೇ ಅವಶ್ಯಕ.
ನಾವು ಯಾವುದೇ ಕೆಲಸವನ್ನು ಮಾಡಿದಾಗ ಮತ್ತೊಬ್ಬರು ಅದನ್ನು ನೋಡಿ ಮೆಚ್ಚುಗೆ ಸೂಚಿಸಲಿ ಅಂತ ಬಯಸ್ತೀವಿ. ಅದೇ ಥರ ಇತರರು ಮಾಡಿದ ಒಳ್ಳೆಯ ಕೆಲಸಗಳನ್ನು ನಾವು ಮೆಚ್ಚುಗೆ ಮೂಲಕ ಪ್ರತಿಕ್ರಿಯಿಸಬೇಕು. ಅಂಥ ಹೊತ್ತಿನಲ್ಲಿ ಮಾತಾಡಲು, ಮೆಚ್ಚುಗೆಯ ಪ್ರತಿಕ್ರಿಯೆ ನೀಡಲು ಜಿಪುಣತನ ಮಾಡಬಾರದು.
ಇನ್ನೊಂದು ವಿಷಯ ಏನಂದ್ರ ಸಮಯ ಅನ್ನೂದು ಜಾರಿ ಹೋಗ್ತಾನೇ ಇರ್ತದ. ಅದು ಯಾರಿಗಾಗಿಯೂ ಕಾಯೂದಿಲ್ಲ. ನಾವು ಮಾಡಬೇಕಾದ ಕೆಲಸವನ್ನು, ಹೇಳಬೇಕಾದ ಮಾತುಗಳನ್ನು ಮುಂದ ಹಾಕಿದ್ರ, ಮತ್ತೆ ಅದೇ ಸಮಯ ನಮಗ ಸಿಗದೇ ಹೋಗಬಹುದು. ಅದಕ್ಕ ಮಾತಾಡೂ ಸಮಯದಾಗ ಮಾತಾಡಿ ಬಿಡಬೇಕು. ಇಂದ, ನಾಳೆ, ನಾಡಿದ್ದು, ಮತ್ತ ಯಾವಾಗರೇ ಅಂತ ಮುಹೂರ್ತ ನೋಡ್ತಾ ಕೂತರ, ಒಂದು ಒಳ್ಳೆಯ ಗಳಿಗೆ ಬರದೇ ಹೋಗಬಹುದು. ಅದಕ್ಕ ನಮ್ಮ ಕಡೆ ಒಂದು ಮಾತು ಹೇಳ್ತಾರ , ” ನಾಳೆ ಅಂದೋರ ಮನೆ ಹಾಳು” ಅಂತ. ಅಂದ್ರ ಮಾಡಬೇಕಾದ ಕೆಲಸವನ್ನು, ಹೇಳಬೇಕಾದ ಮಾತುಗಳನ್ನು ಆಗಲೇ ಮಾಡಿ, ಆಡಿ ಮುಗಿಸಬೇಕು.
ನಾವು ಯಾರಿಗಾದರೂ, ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸುವುದಿದ್ರ, ಅಥವ ಅವರು ನಮಗೆ ಮಾಡಿದ ಸಹಾಯಕ್ಕೆ ಧನ್ಯವಾದ ಹೇಳೂದಿದ್ರ ಅಥವ ಒಬ್ಬರು ಮಾಡಲು ಹೊರಟಿರುವ ಕೆಲಸ ತಪ್ಪು ಅಂತಾದ್ರ, ಅದನ್ನ ಆಗಿಂದಾಗ್ಗೇ ಹೇಳಿಬಿಡಬೇಕು. ಅವರ ಸಹಾಯ ಪಡೆದ ನಾವು ಅವರಿಗೆ ಧನ್ಯವಾದ ಹೇಳಲು ಆಮೇಲೆ ಅವರು ನಮಗೆ ಸಿಗದೇ ಇರಬಹುದು. ಒಬ್ಬ ವ್ಯಕ್ತಿ ತಪ್ಪು ಮಾಡ್ತಾ ಇದ್ದಾನ, ಅದು ತಪ್ಪು ಅಂತ ನಮಗ ಗೊತ್ತು, ಅಂದಾಗ ಅದನ್ನ ಆಗಲೇ ಅವರಿಗೆ ಹೇಳಿಬಿಡುವುದು ಉತ್ತಮ. ಇಲ್ಲಾಂದ್ರ ಅದು ಆಮೇಲೆ ಅನರ್ಥಕ್ಕೆ ಕಾರಣ ಆಗಬಹುದು.
ಇನ್ನು ಮನೆಯಲ್ಲಿರುವ ಹಿರಿಯರು, ವೃದ್ಧರು, ಇವರಿಗೆ ಸ್ವಲ್ಪ ಸಮಯ ಕೊಡಬೇಕಾದದ್ದೂ ಸಹ ನಮ್ಮ ಆದ್ಯ ಕರ್ತವ್ಯ. ಪ್ರತಿದಿನ ಒಂದ ಸ್ವಲ್ಪ ಸಮಯ ಆ ಹಿರಿಯ ಜೀವಗಳ ಜೊತೆ ಕಳೀಬೇಕು. ಆಮೇಲೆ ಅವರು ತೀರಿ ಹೋದ ಮೇಲೆ ಹಳಹಳಿ ಮಾಡಿಕೊಂಡ್ರ ಉಪಯೋಗ ಇಲ್ಲ.
ನಮ್ಮ ಉತ್ತರ ಕರ್ನಾಟಕದ ಕಡೆ ಒಂದು ಮಾತು ಅದ, ” ಮನಸಿನ್ಯಾಗ ಮಂಡಿಗಿ ತಿಂದ್ರ ಗೋಧಿ ಲೆಕ್ಕ ಕೊಡೋರು ಯಾರು?” ಅಂತ. ಅಂದ್ರ, ನಾವು ಹೇಳಬೇಕಾದ ಮಾತುಗಳನ್ನು ಮನಸಿನಾಗೇ ಇಟ್ಕೊಂಡು ಕೂತರ, ಎದುರಿಗಿರುವವರಿಗೇ ಅದು ಹೆಂಗ ಗೊತ್ತಾಗ್ತದ? ಅದಕ್ಕ ಮನಸು ಬಿಚ್ಚಿ ಮಾತಾಡೂದು ಅತೀ ಅವಶ್ಯ ಅದ.
ನೀವೇನಂತೀರಿ?