ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಹಾಗೂ ವಿಶ್ವಗುರು ಬಸವಣ್ಣನವರ ಜನ್ಮಸ್ಥಳವಾದ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ವಿಫುಲ ಅವಕಾಶಗಳಿದ್ದು, ಜಿಲ್ಲೆಯು ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ನಗರ-ಜಿಲ್ಲೆ ಸೌಂದರ್ಯಿಕರಣ-ಅಭಿವೃದ್ದಿಯಲ್ಲಿ ಸಾರ್ವಜನಿಕರ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಸಾರ್ವಜನಿಕರು ಜಿಲ್ಲೆಯ ಅಭಿವೃದಿಗೆ ಕೈ ಜೋಡಿಸಬೇಕು ಎಂದು ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
ಜಿಲ್ಲಾಡಳಿತ,ಪ್ರವಾಸೋದ್ಯಮ ಇಲಾಖೆ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ರಿನ್ಯೂ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಇವರ ಸಹಯೋಗದಲ್ಲಿ ಗೋಳಗುಮ್ಮಟ ಸ್ಮಾರಕಕ್ಕೆ ಸೌರಶಕ್ತಿ ವಿದ್ಯುತ್ ದೀಪಾಲಂಕರ ಲೋಕಾರ್ಪಣೆಗೊಳಿಸಿ ಮಾತಾನಾಡಿದ ಅವರು, ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿಸುವ ನಿಟ್ಟಿನಲ್ಲಿ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
೪೦೦ ವರ್ಷಗಳ ಐತಿಹಾಸಿಕ ಗೋಲಗುಮ್ಮಟಕ್ಕೆ ರಿನಿವೆಬಲ್ ಎನರ್ಜಿ ಸಿಎಸ್ ಅರ್ ಅನುದಾನದಡಿ ದೀಪಾಲಂಕಾರ ವ್ಯವಸ್ಥೆಗೆ ಇಂದು ಚಾಲನೆ ನೀಡಲಾಗಿದೆ. ವಿಜಯಪುರ ನಗರ-ಜಿಲ್ಲೆಯ ಆಕರ್ಷಣೀಯ ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದ್ದು, ಪ್ರವಾಸೋದ್ಯಮದಿಂದ ಜಿಲ್ಲೆಯ ವಾಪಾರ-ವಹಿವಾಟಿಗೆ ಉತ್ತೇಜನ ದೊರತು, ಉದ್ಯೋಗ ಸೃಷ್ಟಿಯೊಂದಿಗೆ ಆರ್ಥಿಕ ವ್ಯವಸ್ಥೆ ಸುಧಾರಣೆಯಾಗಲಿದೆ ಎಂದು ಅವರು ಹೇಳಿದರು.
ವ್ಯಾಟಿಕನ್ ಸಿಟಿಯಲ್ಲಿರುವ ಸೇಂಟ್ ಪೀರ‍್ಸ್ ಚರ್ಚ್ ನಂತರ ವಿಶ್ವದ ೨ನೇ ಅತಿ ದೊಡ್ಡ ಗೋಪುರ ಹೊಂದಿರುವ ಗೋಲಗುಮ್ಮಟ ವಿಜಯಪುರದಲ್ಲಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಐತಿಹಾಸಿಕ ಗೋಲಗುಮ್ಮಟಕ್ಕೆ ರೆನ್ಯೂ ಎನರ್ಜಿ ಪ್ರೈ.ಲಿ. ಸಿಎಸ್‌ಆರ್ ಅನುದಾನದಲ್ಲಿ ೪೦ ಲಕ್ಷ ರೂ. ವೆಚ್ಚದಲ್ಲಿ ಸೌರಶಕ್ತಿ ದೀಪಾಲಂಕಾರ ಅಳವಡಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಐತಿಹಾಸಿಕ ಸ್ಮಾರಕಗಳಾದ ಗೋಲಗುಂಬಜ್ ಹಾಗೂ ಇಬ್ರಾಹಿಂರೋಜಾ ಸ್ಮಾರಕಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸುವುದು ಬಹುಜನರ-ಬಹುದಿನಗಳ ಕನಸಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. ಬಾವಡಿಗಳ ಒತ್ತುವರಿ ತೆರವುಗೊಳಿಸಲು, ಸಂರಕ್ಷಣೆ ಸ್ವಚ್ಛತೆಗೆ ಭಾರತೀಯ ಸರ್ವೇಕ್ಷಣಾ ಇಲಾಖೆ ಆದ್ಯತೆ ನೀಡಬೇಕು. ಇದರೊಂದಿಗೆ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೂ ಒತ್ತು ನೀಡಲಾಗುತ್ತಿದೆ. ಬಾವಡಿಗಳ ನೀರನ್ನು ಇನ್ನಿತರ ಬಳಕೆ ಮಾಡುವ ನಿಟ್ಟಿನಲ್ಲಿ ಐತಿಹಾಸಿಕ ಬಾವಡಿಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಅರಣ್ಯೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ವೃಕ್ಷಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಪ್ರವಾಸೋದ್ಯಮ ಪ್ರವಾಸಿ ತಾಣಗಳಾದ ಕುಮಟ್ಮಗಿ ಬೇಸಿಗೆ ಅರಮನೆ, ಬಾರಾಕಮಾನ್, ಜಾಮಿಯಾ ಮಸೀದಿ, ಮಲಿಕ್ ಇ ಮೈದಾನ, ಶಿವಗಿರಿ, ಜೈನ ಬಸದಿ, ಬಸವನ ಬಾಗೇವಾಡಿ, ಜ್ಞಾನಯೋಗಾಶ್ರಮ, ಆಲಮಟ್ಟಿ ಡ್ಯಾಂ, ವ್ಯವಸಾಯ ವಿಜಯಪುರದ ಕುರಿತಾಗಿ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.
ಕ್ಯಾಲೆಂಡರ್ ಬಿಡುಗಡೆ : ೨೦೨೫ರ ಸಾಲಿನ ಪ್ರವಾಸೋದ್ಯಮ ಇಲಾಖೆ ಹೊರತಂದಿರುವ ದಿನದರ್ಶಿಕೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ ಮಾತನಾಡಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ, ಮೇಯರ್ ಮಹೇಜಬಿನ ಹೋರ್ತಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನಾನ ಮುಶ್ರೀಫ್, ಉಪ ಮೇಯರ್ ದಿನೇಶ ಹಳ್ಳಿ,ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸೌಮ್ಯಾ ಬಾಪಟ್, ರಿನ್ಯೂ ಎನರ್ಜಿ ಪ್ರೈ.ಲಿ. ರಾಜ್ಯ ಮುಖಸ್ಥ ಮಧುಸೂಧನ, ಪುರಾತತ್ವ ಇಲಾಖೆಯ ಅಧಿಕ್ಷಕ ರಮೇಶ ಮೂಲಿಮನಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವಶರಣಯ್ಯ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವೃಕ್ಷಥಾನ ಸ್ಪರ್ಧಿಗಳು ಉಪಸ್ಥಿತರಿದ್ದರು.
ವಿಜಯಪುರ: ನಗರದ ಪ್ರಮುಖ ಸ್ಥಳವಾದ ಗಗನ್ ಮಹಲ್‌ನ ಕಂದಕ ಸ್ವಚ್ಛಗೊಳಿಸಿ, ಅಭಿವೃದ್ದಿಪಡಿಸಿ ಗಗನ್ ಮಹಲ್ ವಾತಾವರಣ ಉನ್ನತೀಕರಣಕ್ಕೆ ಸರ್ಕಾರ ೧.೫ ಕೋಟಿ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ೫೦ ಲಕ್ಷ ರೂ. ವೆಚ್ಚದಲ್ಲಿ ಆನಂದ ಮಹಲ್ ಉದ್ಯಾನವನ ಸೇರಿದಂತೆೆ ಇತರೆ ಅಭಿವೃದ್ದಿ ಕಾಮಗಾರಿಗೆ ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದಿಂದ ಅನುಮತಿ ನೀಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.
ಬಸವನಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರದಿಂದ ವಿವಿಧ ತಾಣಗಳ ಅಭಿವೃದ್ದಿಪಡಿಸಲಾಗುತ್ತಿದೆ. ಆಲಮಟ್ಟಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳನ್ನು ನೀರಾವರಿ ಇಲಾಖೆ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ನಗರದಲ್ಲಿನ ಐತಿಹಾಸಿಕ ತಾಜ್‌ಬಾವಡಿ ೮ ಕೋಟಿ ವೆಚ್ಚದಲ್ಲಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಸಿ.ಎಸ್.ಆರ್. ಅನುದಾನದಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ಸಚಿವರ ಪ್ರಯತ್ನದಿಂದ ಕುಮಟಗಿ ಬೇಸಿಗೆ ಅರಮನೆಯನ್ನು ಇನ್ಫೋಸಿಸ್ ಫೌಂಡೇಶನ್ ಸಿ.ಎಸ್.ಆರ್. ಅನುದಾನದಲ್ಲಿ ೨ ಕೋಟಿ ವೆಚ್ಚದಲ್ಲಿ ಪುನಶ್ಚೇತನ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬಾಕ್ಸ್ ೨
ಶಹನಾಯಿ ವಾದನ
ಈ ಕಾರ್ಯಕ್ರಮದಲ್ಲಿ ಜಗತಪ್ರಸಿದ್ಧ ಗೋಳಗುಮ್ಮಟ ಆವರಣದಲ್ಲಿ ನಡೆದ ಈ ಕಾರ್ಯಕ್ರಮದ ಅಂಗವಾಗಿ ಕಲಾವಿದ ರುದ್ರೇಶ ಹಾಗೂ ಅವರ ತಂಡದಿಂದ ನಡೆಸಿಕೊಟ್ಟ ಶಹನಾಯಿ ವಾದನ ನೆರೆದವರ ಹಾಗೂ ಸಂಗೀತಾಸಕ್ತರನ್ನು ಮಂತ್ರ ಮುಗ್ಧಗೊಳಿಸಿತು.