ಜಿಲ್ಲಾ ಕಾಂಗ್ರೇಸ್ ಕಛೇರಿಗೆ ಮುತ್ತಿಗೆ ಹಾಕಿದ ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯಕರ್ತರು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾಂಗ್ರೆಸ್ ಪಕ್ಷವು ಅಮಿತ್ ಶಾ ರವರ ಹೇಳಿಕೆಯ ಸಂಪೂರ್ಣ ತುಣುಕನ್ನು ಹಾಕದೆ ತಮಗೆ ಬೇಕಾದಷ್ಟು ಭಾಗಶಃ ತುಣುಕನ್ನು ಬಳಸಿ, ಬೇರೆಯೇ ರೀತಿಯಲ್ಲಿ ಅರ್ಥೈಸುವಂತೆ ಸಾಮಾಜಿಕ ಜಾಲತಾಣದಲ್ಲಿ ವಿಸ್ತರಿಸಿ, ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿರುವದನ್ನು ಖಂಡಿಸಿ ಮತ್ತು ವಿಧಾನ ಪರಿಷತ್ ಸದಸ್ಯ ಸಿಟಿ ರವಿಯವರನ್ನು ಬಂಧಿಸಿರುವುದನ್ನು ಖಂಡಿಸಿ ಶುಕ್ರವಾರ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಯುವಮೋರ್ಚಾ ವತಿಯಿಂದ ಜಿಲ್ಲಾ ಕಾಂಗ್ರೇಸ್ ಕಛೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲೆಯ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ತುರ್ತು ಪರಿಸ್ಥಿತಿ ಹೇರಿದ ಕುಖ್ಯಾತಿಯ ಕಾಂಗ್ರೆಸ್, ಕರ್ನಾಟಕದಲ್ಲಿ ಇದೀಗ ಪರೋಕ್ಷ ತುರ್ತು ಪರಿಸ್ಥಿತಿ ಹೇರಲು ಹೊರಟಿದೆ. ಕಾಂಗ್ರೆಸ್ ಪಕ್ಷದ ಈ ಹತಾಶ ಮನೋಭಾವವನ್ನು ಬಿಜೆಪಿ ಖಂಡಿಸುತ್ತದೆ. ಇದು ಜನವಿರೋಧಿ ಮಾತ್ರವಲ್ಲ; ಪ್ರಜಾಪ್ರಭುತ್ವ ವಿರೋಧಿ ಕ್ರಮ. ‘ಪ್ರಜಾಪ್ರಭುತ್ವ ದೇಗುಲ’ವೆನಿಸಿರುವ ಸುವರ್ಣ ಸೌಧಕ್ಕೆ ಗೂಂಡಾಗಳನ್ನು ಛೂ ಬಿಟ್ಟು ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವ ದುಷ್ಕೃತ್ಯ ನಡೆಸಲು ಪ್ರಚೋದಿಸಿದ್ದಾರೆ. ಇದು ಅತ್ಯಂತ ಖಂಡನೀಯ. ಅಲ್ಲದೇ ಹಿರಿಯ ಶಾಸಕ ಸಿ.ಟಿ.ರವಿ ಅವರನ್ನೇ ಬಂಧಿಸಿದ್ದಾರೆ. ಈ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರವು ಪೊಲೀಸ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಗೂಂಡಾ ಸಾಮ್ರಾಜ್ಯವನ್ನು ನಿರ್ಮಿಸುತ್ತಿದೆ ಎಂದು ಆರೋಪಿಸಿದರು.
ಸಿ.ಟಿ. ರವಿ ಅವರನ್ನು ಬೇಷರತ್ ಬಿಡುಗಡೆ ಮಾಡಿ ಅವರ ಮೇಲೆ ದೌರ್ಜನ್ಯ ನಡೆಸಿದ ಕಾಂಗ್ರೆಸ್ ಗೂಂಡಾಗಳನ್ನು ಜೈಲಿಗೆ ಅಟ್ಟುವ ವರೆಗೂ ಬಿಜೆಪಿ ಹೋರಾಟ ನಿಲ್ಲದು. ಇದು ಬಿಜೆಪಿ ಪಂಥಾಹ್ವಾನ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಮುಳುಗೋಡ ಪಾಟೀಲ್ , ಮಹಾನಗರಪಾಲಿಕೆ ಸದಸ್ಯ ಪ್ರೇಮಾನಂದ್ ಬಿರಾದಾರ್, ಚಿದಾನಂದ ಚಲವಾದಿ, ರಾಜೇಶ್ ತಾವಸೆ, ಲಕ್ಷ್ಮಿ ಕನ್ನೊಳ್ಳಿ, ರಾಘವೇಂದ್ರ ಕಾಫ್ಸೆ, ನಗರ ಮಂಡಳ ಅಧ್ಯಕ್ಷ ಶಂಕರ ಹೂಗಾರ ಮಾತನಾಡಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ ರಾಠೋಡ, ನೇಬಗೇರಿ, ಶ್ರೀಹರಿ ಗೊಳಸಂಗಿ, ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ, ಲಕ್ಮಿ ಕನ್ನೊಳ್ಳಿ, ರಾಜಕುಮಾರ ಗೌಂಡಿ, ಆನಂದ ಮುಚ್ಚಂಡಿ, ಪರಶುರಾಮ ಹೊಸಪೇಟೆ, ಪ್ರೇಮಾನಂದ ಬಿರಾದಾರ, ಪ್ರವೀಣ ಒಂದಾಲಮಠ, ಅಪ್ಪು ದೇಸಾಯಿ, ರವಿ ಬಿರಾದಾರ, ರವಿಚಂದ್ರ ಉಪನದಿನ್ನಿ, ವಿಠ್ಠಲ ನಡುವಿನಕೆರೆ, ವಿನೋದ್ ಪತ್ತಾರ, ಸ್ವರೂಪ್ ಸಪ್ತಾಳೆ, ಅನಿಲ್ ಉಪ್ಪಾರ, ಕಿರಣ್ ರಾಥೋಡ, ರಾಹುಲ್ ಹಿರೇಮಠ, ವಿಟ್ಟಲ ಕಾಗರ, ಸುಚಿತ್ರ ಜಾಧವ, ಸುವರ್ಣ ಕುರ್ಲೆ, ರಾಜಲಕ್ಷ್ಮಿ ಪ್ರತನ್ನವರ, ವಿನೋದ್ ತೆಲಸಂಗ ಮತ್ತಿತರರು ಭಾಗಿಯಾಗಿದ್ದರು.