ಕೂಡಗಿಯಲ್ಲಿ ೪೮ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಶಿವಾನಂದ ಪಾಟೀಲ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಎನ್‌ಟಿಪಿಸಿಯಿಂದ ತೆರಿಗೆ ಹಣ ಬರಲ್ಲ ಎಂದು ಆರಂಭದಲ್ಲಿ ಕೆಲವರು ವಾದಿಸಿದ್ದರು. ಹಾಗಂತ ನಾವೂ ಸುಮ್ಮನೇ ಕುಳಿತಿದ್ದರೆ ನಮ್ಮ ಪಾಲಿನ ಹಣ ಧಾರವಾಡ ಜಿಲ್ಲೆಗೆ ಹೋಗುತ್ತಿತ್ತು. ಕೊನೆಗೂ ವಾರ್ಷಿಕ ಕೋಟ್ಯಾಂತರ ರೂ., ತೆರಿಗೆ ಈ ಭಾಗದ ೫ ಗ್ರಾಮಗಳಿಗೆ ಸಿಗುವಂತೆ ಮಾಡಲಾಯಿತು. ಅದರಲ್ಲಿ ಸಿಂಹಪಾಲು ಕೂಡಗಿ ಗ್ರಾಮಕ್ಕೆ ಲಭ್ಯವಾಗಿದೆ. ಹೀಗಾಗಿ ಇದು ಬೆಂಗಳೂರು ಬಳಿಯ ದೇವನಹಳ್ಳಿಯ ನಂತರ ರಾಜ್ಯದಲ್ಲೇ ಹೆಚ್ಚಿನ ತೆರಿಗೆ ಪಡೆಯುವ ಎರಡನೇ ಗ್ರಾಮವಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಕೂಡಗಿ ಗ್ರಾಮದಲ್ಲಿ ಎನ್‌ಟಿಪಿಸಿ ಮತ್ತಿತರ ತೆರಿಗೆಯ ೨.೦೧.೭೧.೦೦೦ ಅನುದಾನದಿಂದ ವಿವಿಧ ೪೮ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಳೀಯರಿಗೆ ಉದ್ಯೋಗಾವಕಾಶ ಸೇರಿದಂತೆ ಈ ಭಾಗದ ಎನ್‌ಟಿಪಿಸಿ ಮೇಲೆ ಬಹಳಷ್ಟು ನಿರೀಕ್ಷೆ ಇತ್ತು. ಆದರೆ ಅಲ್ಲಿ ಇಂದು ಬರೀ ಬಿಹಾರ, ಎಂಪಿ, ಯುಪಿ ರಾಜ್ಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸದಲ್ಲಿದ್ದಾರೆ. ಕಾರಣ ಈ ಭಾಗದ ಸಂಸದರು ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿ ಮೇಲೆ ಹೆಚ್ಚಿನ ನಿಗಾ ಇರಿಸಿ ಸ್ಥಳೀಕರಿಗೆ ನ್ಯಾಯ ಒದಗಿಸಬೇಕೆಂದು ಎಂದರು.
ಕೂಡಗಿ ಕೆರೆಯನ್ನು ಬಸವನ ಬಾಗೇವಾಡಿ ಕ್ಷೇತ್ರದಲ್ಲೇ ಮಾದರಿ ಕೆರೆ ಮಾಡಬೇಕೆಂದಿರುವೆ. ಆದರೆ ಅದನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿದ್ದು ಸ್ವ ಇಚ್ಛೆಯಿಂದ ಬಿಟ್ಟು ಕೊಟ್ಟು ಈ ಭಾಗದ ಹಲವಾರು ಗ್ರಾಮಗಳಿಗೆ ಕೂಡಗಿ ಜೀವಜಲವಾಗಲು ಸಹಕರಿಸಬೇಕು. ಬೆಳಗಾವಿ ಅಧಿವೇಶನದಲ್ಲಿ ಈ ಭಾಗದ ಜನಪ್ರತಿನಿಧಿಗಳು ಸಿಎಂ ಮತ್ತು ಡಿಸಿಎಂ ಬಳಿ ಮನವಿ ಮಾಡಿಕೊಂಡಿದ್ದೇವೆ. ಆಲಮಟ್ಟಿಯ ನೀರು ನೆರೆಯ ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗೆ ಹೋಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಗತ್ಯವಿರುವ ಇನ್ನಷ್ಟು ಭೂ ಸ್ವಾಧೀನ ಮಾಡಿಕೊಂಡು ನಮ್ಮ ಜಿಲ್ಲೆಗೆ ೮೦ ಟಿಎಂಸಿ ನೀರು ಕೊಡಬೇಕು ಎಂದಿದ್ದೇವೆ. ಮುಂದಿನ ೪-೫ ವರ್ಷಗಳಲ್ಲಿ ಅದು ಕಾರ್ಯರೂಪಕ್ಕೆ ಬಂದು ಇಡೀ ಜಿಲ್ಲೆ ಸಂಪೂರ್ಣ ನೀರಾವರಿಯಾಗಲಿದೆ ಎಂದರು.
ಕೇಂದ್ರ ಸರ್ಕಾರದಿಂದಾಗಿ ರಾಜ್ಯದ ಎಪಿಎಂಸಿಗಳು ೨೦೧೯ ರ ವೇಳೆ ನಿಷ್ಕ್ರೀಯಗೊಂಡಿದ್ದವು. ನಾನು ಸಚಿವನಾದ ಬಳಿಕ ರಾಜ್ಯದಲ್ಲಿ ೧೭೬ ಎಪಿಎಂಸಿಗಳನ್ನು ಮರುಸ್ಥಾಪಿಸಿ ೪೫೦ ಕೋಟಿ ರೂ., ಗಳಿಕೆಯನ್ನು ಸರ್ಕಾರಕ್ಕೆ ಕೊಡುವಂತಾಗಿದೆ ಎಂದರು.
ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅರಳಿಚಂಡಿಯ ಪರಮಾನಂದ ಗುರೂಜಿ, ಮೆಹರಾಜಪೀರಾ ಜಾಗೀರದಾರ ಸಾನಿಧ್ಯ ವಹಿಸಿದ್ದರು. ಕಾಂಗ್ರೆಸ್ ಧುರೀಣ ತಾನಾಜಿ ನಾಗರಾಳ, ಜಿಪಂ ಮಾಜಿ ಉಪಾಧ್ಯಕ್ಷ ಚಂದ್ರಶೇಖರಗೌಡ ಪಾಟೀಲ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಹುಸೇನಬಿ ಮಾಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಫೀಕ ಪಕಾಲಿ, ಸುರೇಶ ಹಾರಿವಾಳ, ತಹಸೀಲ್ದಾರ ಎಸ್.ಎಸ್. ನಾಯಕಲ್ಲಮಠ, ತಾಪಂ ಇಒ ಸುನೀಲ ಮದ್ದೀನ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪವಿಭಾಗದ ಸಹಾಯಕ ಅಭಿಯಂತರ ವಿ.ಬಿ. ಗೊಂಗಡಿ, ಸಿಡಿಪಿಒ ಶಿಲ್ಪಾ ಹಿರೇಮಠ, ಪಿಡಿಒ ಎ.ಎಸ್. ಕೋಟ್ಯಾಳ, ಗ್ರಾಪಂ ಉಪಾಧ್ಯಕ್ಷ ಅರುಣ ನಾಯಕ, ಸರ್ವ ಸದಸ್ಯರು, ಗ್ರಾಮದ ಪ್ರಮುಖರು ಮತ್ತಿತರರು ಇದ್ದರು.
ತಾಪಂ ಮಾಜಿ ಉಪಾಧ್ಯಕ್ಷ ಈಶ್ವರ ಜಾಧವ ಸ್ವಾಗತಿಸಿದರು. ಉಪನ್ಯಾಸಕ ಬಸವರಾಜ ಜಾಲವಾದಿ ನಿರೂಪಿಸಿದರು. ಗ್ರಾಪಂ ಸದಸ್ಯ ಆರೀಫ್ ತಾಳಿಕೋಟಿ ವಂದಿಸಿದರು.
ಸಾರೋಟದಲ್ಲಿ ಮೆರವಣಿಗೆ
ಇದಕ್ಕೂ ಮೊದಲು ಗ್ರಾಮದ ಮಹಿಬೂಬಸುಬಾನಿ ದರ್ಗಾದಿಂದ ಮನಗೂಳಿ, ಅರಳಿಚಂಡಿ, ಕೂಡಗಿ ಶ್ರೀಗಳು ಮತ್ತು ಸಚಿವ ಶಿವಾನಂದ ಪಾಟೀಲರನ್ನು ಸಾರೋಟದಲ್ಲಿ ಕೂಡಿಸಿ ಅದ್ಧೂರಿ ಮೆರವಣಿಗೆ ಮೂಲಕ ಗ್ರಾಪಂ ಆವರಣಕ್ಕೆ ಬರಮಾಡಿಕೊಳ್ಳಲಾಯಿತು. ಈ ವೇಳೆ ಸಾರವಾಡದ ಮಹರ್ಷಿ ವಾಲ್ಮೀಕಿ ಗೊಂಬೆ ಕುಣಿತ, ಡೊಳ್ಳು ಕುಣಿತ ಮೆರವಣಿಗೆಗೆ ಮೆರಗು ತಂದಿತು.