ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಮಾನವನಿಗೆ ಜನಪದದಿಂದ ಉತ್ತಮ ಸಂಸ್ಕಾರ ದೊರೆಯುತ್ತದೆ. ಜನಪದರು ರೂಢಿಸಿಕೊಂಡಿರುವ ಹಬ್ಬದಾಚರಣೆಗಳು ಮಾನವನ ಜೀವನದ ಎಲ್ಲ ಮಜಲುಗಳಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತದೆ. ನಂಬಿಕೆ, ಸಂಪ್ರದಾಯ, ಆಚರಣೆಗಳು ಮಾನವನಲ್ಲಿ ಶ್ರೇಷ್ಠವಾದ ಮೌಲ್ಯಗಳನ್ನು ತುಂಬುತ್ತವೆ ಎಂದು ಸಾಂಸ್ಕೃತಿಕ ಚಿಂತಕ ಮೋಹನ ಕಟ್ಟಿಮನಿ ಅಭಿಪ್ರಾಯಪಟ್ಟರು.
ಮಿಣಜಗಿ ಗ್ರಾಮದೇವತೆ ಜಾತ್ರೆ ಪ್ರಯುಕ್ತ ಜಾತ್ರಾ ಸಮಿತಿ ಸಹಯೋಗದಲ್ಲಿ ಪಡಗಾನೂರಿನ ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ ಏರ್ಪಡಿಸಿದ “ಜಿಲ್ಲಾ ಮಟ್ಟದ ಜಾನಪದ ಉತ್ಸವ” ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಜಾನಪದ ವಿಚಾರಗಳನ್ನು ಬದಿಗೊತ್ತಿ ಬದುಕುತ್ತಿರುವುದರಿಂದ ಸಮಾಜದಲ್ಲಿ ಆಘಾತಕಾರಿ ಘಟನೆಗಳು ನಡೆಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸಂಚಾಲಕ ಸಾಹಿತಿ ದೊಡ್ಡಣ್ಣ ಭಜಂತ್ರಿ, ಅಂದಿನ ಒಕ್ಕಲು ಮಕ್ಕಳಿಂದ ಪ್ರಾರಂಭವಾದ ಹಾಡುಗಳು ಜಾನಪದ ಸಾಹಿತ್ಯದ ಮೂಲ ರಚನೆಗಳಾಗಿವೆ. ಜನಪದರು ಜೀವನವನ್ನು ಹಾಡುತ್ತ, ಆಡುತ್ತ ಪ್ರೀತಿಯಿಂದ ಅನುಭವಿಸಿದರು. ಆಗಿನ ಈಗ ಇಲ್ಲದಿರುವುದು ಆತಂಕಕಾರಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ, ಜನಪದ ಕಲೆ, ಸಾಹಿತ್ಯ, ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸ ನಾವು ಜಿಲ್ಲೆಯಲ್ಲಿ ಮಾಡುತ್ತಿದ್ದೇವೆ. ಕಲಾವಿದರು ಪ್ರತಿಭಾವಂತರಾಗಿದ್ದರೂ ಬಡತನದಿಂದ ಕಲೆಯಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಂಘ, ಸಂಸ್ಥೆಗಳು ಸಹಾಯ ಸಹಕಾರ ನೀಡಬೇಕು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಸವರಾಜ ಹಾರಿವಾಳ, ಸಿದ್ಧರಾಮ ಬಿರಾದಾರ , ಎ ಆರ್ ಮುಲ್ಲಾ, ಗುರುರಾಜ ಹಳ್ಳೂರ, ಗಂಗಾಧರ ಬಡಿಗೇರ, ಸಿದ್ದಮ್ಮ ಆಲಗೊಂಡ, ಜಿ ಟಿ ಘೋರ್ಪಡೆ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪಿಕೆಪಿಎಸ್ ಅಧ್ಯಕ್ಷ ಇರಸಂಗಪ್ಪಗೌಡ ಪಾಟೀಲ, ಬಾಬುಗೌಡ ಬಿರಾದಾರ, ಪ್ರತಿಷ್ಠಾನದ ಅಧ್ಯಕ್ಷ ವಿರೇಶಗೌಡ ಪಾಟೀಲ ಇದ್ದರು. ಕಜಾಪ ನಿಡಗುಂದಿ ಅಧ್ಯಕ್ಷ ವೈ ಎಸ್ ಗಂಗಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಜಾಪ ತಾಳಿಕೋಟೆ ಅಧ್ಯಕ್ಷ ಸಿದ್ದನಗೌಡ ಕಾಸಿನಕುಂಟಿ ಸ್ವಾಗತಿಸಿದರು. ಆರ್ ಎಸ್ ವಾಲಿಕಾರ ನಿರೂಪಿಸಿದರು. ಸಿದ್ದು ಕರಡಿ ವಂದಿಸಿದರು.
ಜಾನಪದ ಕಲಾ ಪ್ರದರ್ಶನ
ಕಲಾ ಪ್ರದರ್ಶನದಲ್ಲಿ ಭಜನೆ ಪದ, ಜೋಗತಿನೃತ್ಯ, ಚೌಡಕಿಪದ, ಡೊಳ್ಳುಕುಣಿತ, ಕೋಲಾಟ, ಹೆಜ್ಜೆಕುಣಿತ, ಗೊರವರ ಕುಣಿತ, ಸಂಪ್ರದಾಯ ಪದ ತಂಡಗಳು ಜಾನಪದ ಕಲಾ ಪ್ರದರ್ಶನ ನೀಡಿದವು.