2.48 ಗಂಟೆಯಲ್ಲಿ 21 ಕಿ.ಮೀ. ಓಟ ಓಡಿದ14 ವರ್ಷದ ಅನಿಕೇತ | ನೋಡಲು ಬಂದು ಓಡಿದ ಶ್ರೀಗಳು | ಕೌಟುಂಬಿಕ ಕಲರವ ಸೃಷ್ಠಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹೊರಗಡೆ ಉದ್ಯೋಗದಲ್ಲಿರುವ ಜನ ತಮ್ಮೂರ ಜಾತ್ರೆಗೆ ಬಂದು ಸಂಭ್ರಮಿಸುವುದು ಮೂಮೂಲು. ಬಾಲಕರಿಂದ ಹಿಡಿದು ಯುವಕರಾದಿಯಾಗಿ ಹಿರಿಯರೂ ಪಾಲ್ಗೊಂಡು ಸಂಭ್ರಮಿಸುವುದು ವಾಡಿಕೆ. ಆದರೆ, ಈ ಬಾರಿ ನಗರದಲ್ಲಿ ರವಿವಾರ ನಡೆದ ವೃಕ್ಷಥಾನ್ ಹೆರಿಟೇಜ್ ರನ್-2024 ಈ ಬಾರಿ ಹಲವಾರು ವೈಶಿಷ್ಠ್ಯಗಳಿಗೆ ಸಾಕ್ಷಿಯಾಗಿದೆ.
14 ವರ್ಷದ ಪೋರ 21 ಕಿ. ಮೀ. ಓಡಿ ವಿಧಾನ ಸಭಾಧ್ಯಕ್ಷರು ಮತ್ತು ಸಚಿವರಿಂದ ಪ್ರಶಂಸೆಗೆ ಪಾತ್ರನಾದರೆ, ಬೆಂಗಳೂರ ಮತ್ತು ಹೈದರಾಬಾದಿನಲ್ಲಿ ವಾಸಿಸುವ ಒಂದೇ ಊರಿನ ನಾಲ್ಕು ಕುಟುಂಬಗಳು ತಮ್ಮ ಮಕ್ಕಳ ಸಮೇತ ಓಟದಲ್ಲಿ ಪಾಲ್ಗೊಂಡಿದ್ದು ಮತ್ತೊಂದು ವಿಶೇಷ. ಈ ಓಟವನ್ನು ನೋಡಲು ಅಮೇರಿಕದಿಂದ ಬಂದ ಸ್ವಾಮೀಜಿಯೊಬ್ಬರು ಸೇರಿದ ಜನರನ್ನು ನೋಡಿ ತಾವು ಕೂಡ ಓಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು ಈ ಬಾರಿಯ ವಿಶೇಷವಾಗಿದೆ.
ಕೌಟುಂಬಿಕ ಕಲರವ ಸೃಷ್ಠಿಸಿದ ವೃಕ್ಷಥಾನ್ ಹೆರಿಟೇಜ್ ರನ್:
ಮತ್ತೊಂದೆಡೆ ಬಸವನ ಬಾಗೇವಾಡಿ ತಾಲೂಕಿನ ಕಲಗುರ್ಕಿ ಮತ್ತು ವಿಜಯಪುರ ತಾಲೂಕಿನ ಜಂಬಗಿ ಗ್ರಾಮದ ನಾಲ್ಕು ದಂಪತಿಗಳು ಮತ್ತು ಅವರ ಮಕ್ಕಳು ಕೂಡ ಈ ಬಾರಿ ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಕುಟುಂಬ ಸಮೇತ ಪಾಲ್ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿರುವ ಜಂಬಗಿ ಗ್ರಾಮದ ವಿನೋದ ಪಾಟೀಲ ಮತ್ತು ಸಾಫ್ಟವೇರ್ ಎಂಜಿನಿಯರ್ ಆಗಿರುವ ಸುಮಾ ಪಾಟೀಲ ದಂಪತಿ 10 ಕಿ. ಮೀ. ಓಟದಲ್ಲಿ ಪಾಲ್ಗೋಂಡಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿರುವ ಇದೇ ಗ್ರಾಮದ ರಾಘವೇಂದ್ರ ಕಜ್ಜಿಡೋಣಿ 10 ಕಿ. ಮೀ. ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಕಜ್ಜಿಡೋಣಿ 5 ಕಿ. ಮೀ. ಅವರ ಪುತ್ರ 3ನೇ ತರಗತಿಯಲ್ಲಿ ಓದುತ್ತಿರುವ ಅಚ್ಯುತಮ ಕಜ್ಜಿಡೋಣಿ 5 ಕಿ. ಮೀ. ಓಟದಲ್ಲಿ ಪಾಲ್ಗೋಂಡಿದ್ದಾರೆ.
ಅಲ್ಲದೇ, ಕಲಗುರ್ಕಿ ಗ್ರಾಮದವರೇ ಆದ ಮತ್ತು ಹೈದರಾಬಾದಿನಲ್ಲಿ ಕೇಂದ್ರ ಸರಕಾರದಲ್ಲಿ ವಿಜ್ಞಾನಿಯಾಗಿರುವ ಡಾ. ಮಹಾಂತೇಶ ಶಿರೂರ ಮತ್ತು ಅವರ ಪತ್ನಿ ಭೂಮಿಕಾ ಶಿರೂರ ಇಬ್ಬರೂ 10 ಕಿ. ಮೀ. ಓಡಿದರೆ, 4ನೇ ತರಗತಿಯಲ್ಲಿ ಓದುತ್ತಿರುವ ಅವರ ಪುತ್ರಿ ನಿಶಿತಾ ಶಿರೂರ 5 ಕಿ. ಮೀ. ಓಟದಲ್ಲಿ ಪಾಲ್ಗೋಂಡು ಗಮನ ಸೆಳೆದಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿರುವ ಬಸವನ ಬಾಗೇವಾಡಿ ತಾಲೂಕಿನ ಕಲಗುರ್ಕಿ ಗ್ರಾಮದ ಇದೇ ಗ್ರಾಮದ ರಾಜಶೇಖರ ಶಿರೂರ ಮತ್ತು 21 ಕಿ. ಮೀ ಅವರ ಪತ್ನಿ ಅನುಷಾ ಶಿರೂರ ಪುತ್ರ 3ನೇ ತರಗತಿಯ ಅನಿಕೇತ ಶಿರೂರ ಹಾಗೂ 2ನೇ ತರಗತಿ ಓದುತ್ತಿರುವ ಪುತ್ರಿ ರಿಶಿತಾ 5 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳುವ ಮೂಲಕ ಈ ಬಾರಿಯ ಓಟಕ್ಕೆ ಕುಟುಂಬ ಕಲರವದ ಮೆರಗು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುಮಾ ಪಾಟೀಲ “ನಾನು ಬೆಂಗಳೂರಿನಲ್ಲಿ ಒಂದು ಬಾರಿ ಸಾರಿ ರನ್ ಮತ್ತೋಂದು ಬಾರಿ ಪಿಂಕಥಾನ್ ಓಟದಲ್ಲಿ ಪಾಲ್ಗೊಂಡಿದ್ದೆ. ನಮ್ಮೂರಿನಲ್ಲಿ ಓಟದ ಹಬ್ಬದಲ್ಲಿ ಈ ಬಾರಿ ಪಾಲ್ಗೊಂಡಿರುವುದು ಹೊಸ ಹುಮ್ಮಸ್ಸು ನೀಡಿದೆ. ಇಲ್ಲಿಯೂ ಸಾರಿ ಓಟ ಆಯೋಜಿಸುವ ಮೂಲಕ ಮಹಿಳೆಯರು ಹೆಚ್ಚೆಚ್ಚು ಪಾಲ್ಗೊಳ್ಳಲು ಪ್ರೋತ್ಸಾಹ ನೀಡಬೇಕು. ನಮ್ಮೂರು ನಮಗೆ ಸದಾ ಶ್ರೇಷ್ಠ” ಎಂದು ಹೇಳಿದರು.
ವಿಧಾನಸಭಾದ್ಯಕ್ಷರು, ಸಚಿವರಿಂದ ಪ್ರಶಂಸೆ ಪಡೆದ ಬಾಲಕ
ಮೂಲತಃ ಚಡಚಣ ತಾಲೂಕಿನ ಟಾಕಳಿ ಗ್ರಾಮದ ಮತ್ತು ಈಗ ಬೆಳಗಾವಿ ಲೋಕಾಯುಕ್ತದಲ್ಲಿ ಇನ್ಸಪೆಕ್ಟರ್ ಆಗಿರುವ ನಿರಂಜನ ಪಾಟೀಲ ಅವರ ಪುತ್ರ 14 ವರ್ಷದ ಅನಿಕೇತ ಎನ್. ಪಾಟೀಲ 2 ಗಂಟೆ 48 ನಿಮಿಷಗಳಲ್ಲಿ 21 ಕಿ. ಮೀ. ಓಟವನ್ನು ಓಡುವ ಮೂಲಕ ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರಿಂದ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಇವರ ತಂದೆ ನಿರಂಜನ ಪಾಟೀಲ ಕೂಡ 21 ಕಿ. ಮೀ. ಓಟದಲ್ಲಿ ಪಾಲ್ಗೊಂಡಿರುವುದು ಗಮನಾರ್ಹವಾಗಿದೆ. ಈ ಬಾಲಕ ಈ ಮುಂಚೆ 5 ಮತ್ತು 10 ಕಿ. ಮೀ. ಓಟಗಳಲ್ಲಿ ಪಾಲ್ಗೋಂಡಿದ್ದ. ಆದರೆ, ಇದೇ ಮೊದಲ ಬಾರಿಗೆ 21 ಕಿ. ಮೀ. ಹಾಫ್ ಮ್ಯಾರಾಥಾನ್ ನಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ.
ನೋಡಲು ಬಂದು ಓಡಿದ ಶ್ರೀಗಳು
ಅಮೇರಿಕದಲ್ಲಿದ್ದ ಆಲಮಟ್ಟಿ ಪುರವರ ಹಿರೇಮಠದ ಶ್ರೀ ರುದ್ರಮುನಿ ಶಿವಾಚಾರ್ಯರು ಈ ಬಾರಿಯ ವೃಕ್ಷಥಾನ್ ಹೆರಿಟೇಜ್ ರನ್ ನೋಡಲು ಅಮೇರಿಕದಿಂದ ವಿಜಯಪುರಕ್ಕೆ ಬಂದಿದ್ದರು. ಆದರೆ, ಇಲ್ಲಿ ಸೇರಿದ ಓಟಗಾರರು, ವಿಧಾನ ಸಭಾಧ್ಯಕ್ಷರು ಮತ್ತು ಸಚಿವರನ್ನು ನೋಡಿ ಅವರಿಂದ ಸ್ಪೂರ್ತಿ ಪಡೆದು ತಾವೂ ಕೂಡ 5 ಕಿ. ಮೀ. ಓಟದಲ್ಲಿ ಭಾಗವಹಿಸಿ ಓಟಗಾರರಿಗೆ ಸ್ಪೂರ್ತಿ ತುಂಬಿದ್ದಾರೆ. “ನಾನು ಈ ಮುಂಚೆ ವಾಷಿಂಗ್ಟನ್ ಡಿಸಿಯಲ್ಲಿ ಹಾಫ್ ಮ್ಯಾರಾಥಾನ್ ನೋಡಲು ಹೋಗಿದ್ದೆ. ಆದರೆ, ಅಲ್ಲಿ ಓಟಗಾರರು ಓಡುತ್ತಿದ್ದರೆ ಪ್ರೋತ್ಸಾಹಿಸುವವರ ಸಂಖ್ಯೆ ಅತೀ ಕಡಿಮೆ ಇತ್ತು. ಆದರೆ, ನಮ್ಮ ಬಸವ ನಾಡಿನಲ್ಲಿ ನಾವು ಓಡುವಾಗ ಜನರು ಪ್ರೋತ್ಸಾಹಿಸುತ್ತಿದ್ದ ರೀತಿ, ಚಿಯರ್ ಅಪ್ ಮಾಡುತ್ತಿದ್ದ ನಾನಾ ಸಾಂಸ್ಕೃತಿಕ ಕಲಾ ತಂಡಗಳು ನಮಗೆ ದಣಿವೇ ಆಗದಂತೆ ಅನುಭವ ನೀಡಿದರು” ಎಂದು ಸಂತಸ ಹಂಚಿಕೊಂಡಿದ್ದಾರೆ.
ಒಟ್ಟಿಗೆ ಓಡಿದ ನಾಲ್ಕು ಜನ ಸ್ವಾಮೀಜಿಗಳು
ಈ ಮಧ್ಯೆ ಜ್ಞಾನಯೋಗಾಶ್ರಮದ ಶ್ರೀ ಹರ್ಷಾನಂದ ಸ್ವಾಮೀಜಿ, ಶ್ರೀ ಅಮೃತಾನಂದ ಸ್ವಾಮೀಜಿ, ಶ್ರೀ ಗಣೇಶಲಿಂಗ ಸ್ವಾಮೀಜಿ, ಹಾಲಮಡ್ಡಿ ಸ್ವಾಮೀಜಿ ಒಟ್ಟಿಗೆ 5 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳುವ ಮೂಲಕ ಗಮನ ಸೆಳೆದಿದ್ದಾರೆ.