ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕಳೆದ ಸಾಕಷ್ಟು ವರ್ಷಗಳಿಂದ ಬಡವರಿಗೆ, ಅಂಗವಿಕಲರಿಗೆ ಸೇರಿದಂತೆ ವಿವಿಧ ಸಮಸ್ಯೆಯಿಂದ ಜೀವನ ಸಾಗಿಸುತ್ತಿರುವವರನ್ನು ಗುರುತಿಸಿ ವಿವಿಧ ಯೋಜನೆಗಳ ಮೂಲಕ ಸಹಾಯ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಟ್ರಸ್ಟ್ನ ವಾತ್ಸಲ್ಯ ಮನೆ ಯೋಜನೆಯಡಿ ಮನೆ ಹಂಚಿಕೆ ಮಾಡುವ ಕಾರ್ಯಕ್ರಮದಲ್ಲಿ ಫಲಾನುಭವಿಗೆ ಮನೆ ಹಂಚಿಕೆ ಮಾಡಿ ಅವರು ಮಾತನಾಡಿದರು.
ಪ್ರತಿ ನಿತ್ಯ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ದೇಶದಲ್ಲಿಯೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ನಿರ್ಗತಿಕರಿಗೆ ಮನೆ ಕಟ್ಟಿ ಕೊಡುವ ಕಾರ್ಯ ಸಾಮಾನ್ಯವಾದದ್ದಲ್ಲ. ಬರುವ ದಿನಗಳಲ್ಲಿ ಬಡವರಿಗೆ ಇನ್ನಷ್ಟು ಹೆಚ್ಚಿನ ಸೇವೆ ನೀಡುವ ಮಟ್ಟಕ್ಕೆ ಸಂಸ್ಥೆ ಬೆಳೆಯಲಿ ಎಂದು ಆಶಿಸಿದರು.
ಸಂಸ್ಥೆಯ ಯೋಜನಾಧಿಕಾರಿ ನಾಗೇಶ ಎನ್.ಪಿ ಮಾತನಾಡಿ ಬಡವರಿಗಾಗಿ ಜಿಲ್ಲೆಯಲ್ಲಿ ಒಟ್ಟು ೧೪೧ ಮನೆಗಳನ್ನು ಕಟ್ಟಿ ಹಸ್ತಾಂತರಿಸಿದ್ದೇವೆ ಎಂದರು.
ಜಿಲ್ಲಾ ಜನಜಾಗ್ರತಿ ವೇದಿಕೆ ಸದಸ್ಯ ಶ್ರೀಶೈಲ್ ದೊಡಮನಿ, ಮುಖಂಡ ಸಿದ್ದು ಹೆಬ್ಬಾಳ, ಸಂಸ್ಥೆಯ ವಲಯ ಮೇಲ್ವಿಚಾರಕ ಜಗದೀಶ ಹುಲ್ಲೂರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಜಾತಾ, ಸೇವಾ ಪ್ರತಿನಿಧಿ ಭೀಮಾಬಾಯಿ, ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿ ಬಿರಾದರ್, ವೈದ್ಯ ನಾಗರಾಜ್ ಕುಲಕರ್ಣಿ, ಹಡಲಗೆರೆ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಹಲವರು ಇದ್ದರು.