ವಿಜಯಪುರದಲ್ಲಿ ನಾಳೆ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ – ೨೦೨೪
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024 ನಲ್ಲಿ 82 ವರ್ಷದ ತಂದೆ ಮತ್ತು ಅಮೇರಿಕಾದಲ್ಲಿ ನೆಲೆಸಿರುವ 44 ವರ್ಷದ ಮಗ ಪಾಲ್ಗೊಳ್ಳುವ ಮೂಲಕ ಈ ಬಾರಿಯ ಓಟಕ್ಕೆ ಹುಮ್ಮಸ್ಸು ನೀಡುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ಮೂಲದ ಮತ್ತು ಈಗ ಬೆಳಗಾವಿಯಲ್ಲಿ ವಾಸಿಸುತ್ತಿರುವ ಡಾ. ಎಸ್.ಕೆ.ಕುಲಕರ್ಣಿ (82) ಹಿರಿಯ ವಯಸ್ಸಿನಲ್ಲಿಯೂ 5 ಕಿ.ಮೀ ಓಟದಲ್ಲಿ ಭಾಗವಹಿಸುವ ಮೂಲಕ ಯುವಕರು ನಾಚುವಂತೆ ಮಾಡಿದ್ದಾರೆ. ಪಂಜಾಬಿನ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿರುವ ಅವರು ಔಷಧ ವಿಜ್ಞಾನ ಶಾಸ್ತ್ರದಲ್ಲಿ ಹೆಸರು ಮಾಡಿದ್ದಾರೆ. ಮಗನಿಂದ ಪ್ರೇರಿತರಾಗಿರುವ ಇವರು ವೃಕ್ಷಥಾನ ಹೆರಿಟೇಜ್ ರನ್ ನಲ್ಲಿ ಭಾಗವಹಿಸುತ್ತಿರುವುದು ಗಮನಾರ್ಹವಾಗಿದೆ.
ಇದೇ ವೇಳೆ ಅಮೇರಿಕಾದಲ್ಲಿ ನೆಲೆಸಿರುವ ಸೇತುಮಾದವ ಎಸ್. ಕುಲಕರ್ಣಿ ಕೂಡ 21 ಕಿ.ಮೀ ಓಟದಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ನಾನಾ ಮ್ಯಾರಥಾನಗಳಲ್ಲಿ ಓಡಿರುವ ಇವರು ಈ ಸಲ ತಂದೆಯ ಜೊತೆ ಭಾಗವಹಿಸುತ್ತಿರುವುದು ವಿಶೇಷವಾಗಿದೆ.