ಲೇಖನ
– ಶೀತಲ್ ಹೆಗಡೆ
ಉದಯರಶ್ಮಿ ದಿನಪತ್ರಿಕೆ
ಈ ಸಾಲುಗಳನ್ನು ಯಾರೂ ಕೇಳದವರೇ ಇಲ್ಲ. ಇದರಲ್ಲಿ ಮನುಷ್ಯನ ಇಡೀ ಜೀವನದ ಮರ್ಮವೇ ತುಂಬಿದೆ. ನಿಜ! ಹುಟ್ಟಿನಿಂದ ಸಾವಿನಕಡೆಗೆ ಹೋಗುವ ಹಾದಿ ಅಮರತ್ತ್ವದ ಕಡೆಗೆ ನಮ್ಮನ್ನ ಒಯ್ಯಲಾರದು. ಜೀವನ ಬಲು ಕ್ಷಣಿಕ. ಇರುವಷ್ಟು ದಿನ ಉಪಕಾರಿಯಾಗಿ ಪ್ರಾಮಾಣಿಕವಾಗಿ ಏನಾದರೂ ಸಾಧಿಸಿ ಹೋದಲ್ಲಿ ಜೀವನ ಸಾರ್ಥಕತೆಯನ್ನು ಕಾಣುವುದು.
ಜಗತ್ತಿನಲ್ಲಿ ಸಾಧನೆಗೈದವರ ಪಟ್ಟಿ ಮಾಡುತ್ತಾ ಹೋದರೆ ಅದು ಲೆಕ್ಕಕ್ಕೇ ಸಿಗದಷ್ಟು ಇದೆ. ಇಂದು ನಾವು ನಾವಾಗಿ ಇರಲು ಗುಲಾಮತನದ ಚಂಗುಲಿಯಿಂದ ಹೊರತಂದ ಮಹಾತ್ಮನೆನಿಸಿದ ಗಾಂಧೀಜಿಯಿಂದ ಹಿಡಿದು ಅನಕ್ಷರಸ್ಥೆಯಾದ್ರೂ ಹಿಂದುಳಿದ ವರ್ಗಕ್ಕೆ ಸೇರಿದ ತಿಮ್ಮಕ್ಕ ಜೀವನದಲ್ಲಿ ತನಗೆ ಮಕ್ಕಳಿಲ್ಲದ ಕೊರಗನ್ನು ಸಸಿಗಳನ್ನು ನೆಟ್ಟು ಮಕ್ಕಳಂತೆ ಸಾಕಿ ಸಾಲುಮರದ ತಿಮ್ಮಕ್ಕನೆನಿಸಿಕೊಂಡಳು.
ಸಾಧಿಸಬೇಕು ಸಾಧನೆಗೈಯಬೇಕು ಎಂಬ ಕಿಡಿ ಮನದಲ್ಲಿದ್ದರೆ ಅದಕ್ಕೆ ಗುರಿಯನ್ನೇ ತೈಲವಾಗಿಸಿ ಪ್ರಯತ್ನವೆಂಬ ಬತ್ತಿಯನ್ನು ಹೊಸೆಯುತ್ತಾ ದೀಪ ಸದಾ ಉರಿದು ನಂದಾ ದೀಪದಂತೆ ಎಂದೂ ಆರದೇ ಸದಾಕಾಲ ಬೆಳಗುವಂತೆ ಮಾಡಬಹುದು ಎಂಬುದಕ್ಕೆ ಇಂದು ಒಬ್ಬ ಕಲಾಕಾರನ ಕಲಾಮಹಾತ್ಮೆಯ ಬಗ್ಗೆ ಅವನ ಇಚ್ಚಾಶಕ್ತಿ, ಏಕಲವ್ಯನಂತೆ ತನ್ನ ಗುರಿಯತ್ತ ನಡೆದು ಯಕ್ಷಗಾನ ರಂಗದಲ್ಲಿ ಸಾಧನೆಗೈದ ಮಹಾ ಕಲಾಕಾರನ ವ್ಯಕ್ತಿತ್ವದ ಬಗ್ಗೆ ಹೇಳಲು ಇಷ್ಟಪಡುತ್ತೇನೆ. ಅವರೇ ಶ್ರೀಯುತ ಶ್ರೀಪಾದ ಹೆಗಡೆ. ಜನನ(30-09-1953
ಮರಣ-03-12-2020)
ತಂದೆ ಗಣೇಶ ಹೆಗಡೆ ತಾಯಿ ಮಹಾಲಕ್ಷ್ಮಿಯ ಹಿರಿಯಮಗನಾಗಿ 30/09/1953ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮಾಳ್ಕೋಡು ಗ್ರಾಮದಲ್ಲಿ ಜನನ. ಜೊತೆಗೆ ಒಬ್ಬ ಮುದ್ದಾದ ತಮ್ಮ. ಕಲಿತಿದ್ದು ಎಸ್.ಎಸ್.ಎಲ್.ಸಿ ವರೆಗೆ ಮಾತ್ರ ಆದ್ರೆ ಡಿಗ್ರಿ ಕಲಿತವರಿಗಿಂತೇನೂ ಕಡಿಮೆಯಿಲ್ಲದ ಬುದ್ದಿವಂತಿಕೆ ಚಾಕಚಕ್ಯತೆ. ಕೃಷಿಕರಾದ್ರೂ ಹವ್ಯಾಸೀ ಹಾಡುಗಾರಿಕೆ ಯಕ್ಷಗಾನದಲ್ಲಿ ತನ್ನ ಆತ್ಮವನ್ನೇ ಕಾಣುತ್ತಿದ್ದರು. ವ್ಯವಸಾಯದ ಜೊತೆಗೆ ಗಣಪತಿ ವಿಗ್ರಹ ಮಾಡುವ ಕಲೆ ಇವರಿಗೆ ಕಲಾ ದೇವತೆ ಒಲಿದು ಬಿಟ್ಟಿದ್ದಳೇನೋ ಅನ್ನುವಷ್ಟು ಸರಾಗವಾಗಿ ಮಾಡುತ್ತಿದ್ದರು. ನಡುನಡುವೆ ಹಾಡುಗಾರಿಕೆ ಮುಖದಲ್ಲಿಯೇ ಹಾವಭಾವ ನೋಡುಗರಿಗೆ ಮತ್ತೆ ಮತ್ತೆ ನೋಡುವ ಅವರೊಡನೆ ಸಮಯ ಕಳೆಯುವ ಇಚ್ಛೆ ಮನತುಂಬಿ ಬರುವಂತಿತ್ತು.
ಯಕ್ಷಗಾನ ಕರಾವಳಿಯಲ್ಲಿ ಸುಮಾರು 1932 ನೇ ಇಸವಿಯಲ್ಲಿಯೇ ಪ್ರಾರಂಭವಾಗಿತ್ತು. ಇದರ ಮೂಲದತ್ತ ಗಮನ ಹರಿಸಿದಾಗ ಭರತಮುನಿ ಇದನ್ನು ಅನ್ವೇಷಣೆಗೈದ ಗುರು ಎನ್ನಲಾಗುವುದು. ಇದು ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಸಾಂಸ್ಕೃತಿಕ ಕಲೆಗಳಲ್ಲಿ ಒಂದು. ಸಂಗೀತ ನೃತ್ಯ ವೇಷಭೂಷಣ ಹಾಗೂ ಹಾವಭಾವ ಇದರ ಜೀವಾಳ ನೋಡುಗನ ಮನಸೂರೆಗೊಳ್ಳುವ ಕಲಾತ್ಮಕ ಅಭಿವ್ಯಕ್ತಿ. ಈ ಕಲೆಯಲ್ಲಿ ಆಸಕ್ತಿಹೊಂದಿದ ಶ್ರೀಪಾದರಿಗೆ ವ್ಯವಸಾಯದ ಜೆೊತೆ ಜೀವನ ನಿರ್ವಹಣೆಗಾಗಿ ಸಹಕಾರಿ ಸಂಘದಲ್ಲಿ ಗುಮಾಸ್ತ ಹಾಗೂ ಹೊಲಿಗೆ ಮುಂತಾದ ಕೆಲಸಮಾಡುತ್ತಾ ಮನದಲ್ಲಿ ಯಕ್ಷಗಾನದ ಭಾಗವತಿಕೆಯನ್ನು( ಇದು ಅಭಿನಯದ ಹಿನ್ನಲೆ ಹಾಡು) ಮನದಲ್ಲಿ ಗುನುಗಿಯೇ ಮಾಡುತ್ತಿದ್ದುದು ನಾನು ಖುದ್ದಾಗಿ ನೋಡಿದ್ದೇನೆ.
ಕಲೆಗೆ ಬೆಲೆ ಬರಬೇಕೆಂದರೆ ಅದರ ಹೊಳಪನ್ನು ಹೆಚ್ಚಿಸುವಲ್ಲಿ ಗುರುವಿನ ಅಗತ್ಯ ಇದ್ದೇ ಇದೆ. ಅದರಲ್ಲೂ ಅಂತಿಂಥ ಗುರುವಿನ ಪಾದಾರವಿಂದಕ್ಕೆ ತಮ್ಮನ್ನ ಅರ್ಪಿಸಿಕೊಂಡದ್ದು ಅವರ ಪುಣ್ಯ ಹಾಗೂ ಜಾಣ್ಮೆ ತೋರುತ್ತಿತ್ತು. ಇವರ ಗುರುಗಳು ‘ರಾಷ್ಟ್ರಪಶಸ್ತಿ ವಿಜೇತ ಶ್ರೀಯುತ ಡಾ. ಕೆರೆಮನೆ ಮಹಾಬಲ ಹೆಗಡೆಯವರು’. ಇವೆಲ್ಲ ಘಟಿಸಿದ್ದು ಅವರ 23 ನೇ ವಯಸ್ಸಿನಲ್ಲಿ. ಒಮ್ಮೆ ಪ್ರಾರಂಭಗೊಂಡ ಅವರ ಕಲಾ ಪಯಣ ಎಂದೂ ಹಿಂದೆ ತಿರುಗಿ ನೋಡುವಂತೆ ಮಾಡಲೇ ಇಲ್ಲ. ಇವರ ಮೊದಲ ಪಾತ್ರ’ ಶರಸೇತು ಬಂಧನ’ದ ಬ್ರಾಹ್ಮಣನ ವೇಷ.. ಇದನ್ನು ಇವರಿಗಂತಲೇ ಮಾಡಿಸಿದಂತೆ ಇತ್ತು. ಆ ಮಾತುಗಾರಿಕೆ ಹಾಸ್ಯಭರಿತ ನಗೆಚಟಾಕಿಗಳು ಅರ್ಥಪೂರ್ಣ ವಾಕ್ ಚಾತುರ್ಯ ಸುಂದರ ಮೊಗದಲ್ಲಿ ಅಭಿನಯದ ಕಳೆ ತಾಂಡವವಾಡುತ್ತಿತ್ತು.
ಅವರು ಮಾಡುವ ಕೆಲಸವಾಗಲೀ, ಇಟ್ಟುಕೊಂಡ ಹವ್ಯಾಸವಾಗಲೀ ಒಂದೆರಡೇ ಅಲ್ಲ.
ಗಂಡಿಗೆ ಅವನ ಕೆಲಸ ಕಾರ್ಯಗಳಲ್ಲಿ ಹೆಗಲಾಗಿ ಇರುವ ಸಂಗಾತಿ ಸಿಕ್ಕರೆ ಅದೇ ಸ್ವರ್ಗ. ಶ್ರೀಪಾದರ ಬಾಳಲ್ಲೂ ಅಂತಹುದೇ ಸನ್ನಿವೇಶ ಬಂದು ಸುಂದರ ಸುಶೀಲ ವಿಜಯಲಕ್ಷ್ಮಿ ಅವರ ಪಾಲಿನ ದೇವತೆಯಾಗಿ ಬಾಳಸಂಗಾತಿಯಾಗಿ ಬಂದು ಮುದ್ದಾದ 2 ಗಂಡುಮಕ್ಕಳಿಗೆ ತಾಯಿಯಾಗಿ ಗಂಡನಿಗೆ ಪ್ರತಿಹಂತದಲ್ಲೂ ಸಹಾಯಮಾಡುತ್ತಾ ಸಂತಸ ನೆಮ್ಮದಿ ಕಾಣತೊಡಗಿದ್ದಳು.
ಶ್ರೀಪಾದರು ಯಕ್ಷಗಾನ ಕಲೆಯನ್ನು ಶ್ರೀ ಗಣೇಶಾಯ ಮಾಡಿದ್ದು ಆಂಜನೇಯನ ಸನ್ನಿಧಾನವಾದ ಗುಂಡಬಾಳದಲ್ಲಿ ಅಲ್ಲಿಂದ ಪ್ರಾರಂಭಗೊಂಡ ಅವರ ಹವ್ಯಾಸ/ ವೃತ್ತಿಯಾಗಿ ಬದಲಾಗುವಲ್ಲಿ ಬಹಳ ಸಮಯ ಹಿಡಿಯಲಿಲ್ಲ. ಅಮೃತೇಶ್ವರಿ ಮೇಳ,ಹಿರೇಮಹಾಲಿಂಗೇಶ್ವರ ಮೇಳ, ಪಂಚಲಿಂಗೇಶ್ವರ ಮೇಳ, ಪೆರಡೂರು ಮೇಳ, ಬಚ್ಚಗಾರುಮೇಳ,ಮಂದಾರ್ತಿಮೇಳ, ಶಿರಸಿ ಮಾರಿಕಾಂಬ ಮೇಳ, ಸಾಲಿಗ್ರಾಮ ಮೇಳ, ನೀಲಾವರ ಮೇಳ ಹೀಗೇ ಪಟ್ಟಿ ಮಾಡುತ್ತಾ ಹೋದರೆ ಲೆಕ್ಕಕ್ಕೆ ಸಿಗದಷ್ಟು ಮತ್ತಷ್ಟು ಮಗದಷ್ಟು ಮೇಳದಲ್ಲಿ ಪಾತ್ರವಹಿಸಿ ಎಲ್ಲರಿಂದ ಸೈ ಅನಿಸಿಕೊಂಡು ಅತಿಥಿ ಕಲಾವಿದರಲ್ಲೂ ಗಣನೀಯ ವ್ಯಕ್ತಿತ್ವವನ್ನು ಹೊಂದಿದ ಹೆಗ್ಗರುತು ಇವರದ್ದು. ಇವೆಲ್ಲ ನಡೆದದ್ದು1987- 2011 ರಲ್ಲಿ .
ಇವರ ಪುರುಷಪಾತ್ರಗಳಲ್ಲಿ ಮುಖ್ಯ ಹಾಗೂ ಜನಪ್ರಿಯವಾದದ್ದು… ದೇವೇಂದ್ರ,ದಕ್ಷ, ಋತುಪರ್ಣ, ಅರ್ಜುನ, ಭೀಮ, ರಾಮ, ರಾವಣ, ಕಂಸ, ಘಟೋತ್ಕಚ,ಜಾಂಬವ, ಕೌರವ,ಕೃಷ್ಣ,ಭೀಷ್ಮ,ದಶರಥ,ಅತಿಕಾಯ, ಕುಳಿಂದ, ಹಿರಣ್ಯಕಶ್ಯಪು, ವಾಲಿ, ಜಮದಗ್ನಿ ಮುಂತಾದವು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದೇವ ಪಾತ್ರದಿಂದ ಹಿಡಿದು ದೈತ್ಯ ರಾಕ್ಷಸ ಪಾತ್ರಗಳ ಮೇಲೂ ಹಿಡಿತ ಸಾಧಿಸಿದ್ದರು. ಅವರ ಅಭಿನಯ ಪಾತ್ರಕ್ಕೆ ತಕ್ಕನಾಗಿ ಅವರೇ ಸ್ವತಃ ವೇಷ ಕಳಚಿ ಸಹಜ ಸ್ಥಿತಿಗೆ ಬಂದಾಗ ಹೇಳಿಕೊಂಡಿದ್ದಿದೆ. ‘ ನಾನು ಆ ಯಾವುದೇ ವೇಷ ತೊಟ್ಟರೂ ನಾನಾಗಿರದೇ ಆ ಪಾತ್ರವನ್ನೇ ತನ್ನ ಮೈಮೇಲೆ ಆಹ್ವಾಹನ ಗೈಯ್ಯುತ್ತೇನೆ. ಆಮೇಲೆ ಎಲ್ಲವೂ ಅವನಣತಿಯಂತೆ ನಾನಾಡುವುದು ಅಷ್ಟೇ.’
ಸ್ರೀಪಾತ್ರಗಳಲ್ಲೂ ಅಭಿನಯವೇನೂ ಕಡಿಮೆಯಿಲ್ಲ…. ಚಿತ್ರಾಂಗದೆ,ಅಂಬೆ, ದಮಯಂತಿ, ಮಂಡೋದರಿ, ಶೂರ್ಪನಖಿ
ಇತ್ಯಾದಿ.
ಹಾಸ್ಯಕ್ಕೂ ಸೈ..ಬಾಗಿಲದೂತ,ವನಪಾಲ,ಅಜ್ಜಿ, ಬ್ರಾಹ್ಮಣ,ಮಂಥರೆ,ಕಪ್ಪದ ದೂತ, ಕಾಶಿಮಾಣಿ, ಕಾಳಿದಾಸ, ಮುಂತಾದವು.
ಇವಲ್ಲದೇ ವಿಶೇಷ ಸಂದರ್ಭಗಳಲ್ಲಿ ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಕೌರವ ಹಾಗೂ ನಿರ್ಯಾಣದ ರಾಮನ ಪಾತ್ರ ಮಾಡಿದಾಗ ಮೆಚ್ಚಿ ಸಂತೋಷದಿಂದ’ ಶ್ರೀಪಾದ ನೀನು ಅಭಿಜಾತ ಕಲಾವಿದ’ಎಂದು ಆಶೀರ್ವದಿಸಿದ್ದರು.
ಶತಾವಧಾನಿ ಡಾ.ಆರ್ ಗಣೇಶ್ ಹಾಗೂ ಶ್ರೇಷ್ಟ ಚಿತ್ರಕಾರ ಬಿ.ಕೆ.ಎಸ್ ವರ್ಮ ಹಾಗೂ ನೀರ್ನಳ್ಳಿ ಗಣಪತಿಯವರಿಂದ ಕಾವ್ಯ-ಚಿತ್ರ-ಯಕ್ಷನೃತ್ಯ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಶ್ರೀ ಮಂಟಪ ಪ್ರಭಾಕರ ಉಪಾಧ್ಯಾಯರೊಂದಿಗೆ ಭಾಗವಹಿಸಿದ್ದು ಗಮನಾರ್ಹವಾದುದು.
ಹೊರ ರಾಜ್ಯಗಳಲ್ಲೂ ಇವರು ಪ್ರದರ್ಶನ ನೀಡಿದ್ದರು… ಮಹಾರಾಷ್ಟ್ರ,ಪಂಜಾಬ, ಉತ್ತರ ಪ್ರದೇಶ್,ಗೋವಾ, ಕೇರಳ, ಆಂಧ್ರಪ್ರದೇಶ್ ತಮಿಳುನಾಡು,ಚಂಡಿಗಡ,ದೆಹಲಿ ಮುಂತಾದವು.
ಹೊರದೇಶದಲ್ಲೂ ನಮ್ಮ ಸಂಸ್ಕೃತಿಯ ಘಮಲನ್ನು ಪಸರಿಸಿದ್ದು .. ಸಿಂಗಾಪುರ ದಲ್ಲಿ ಅಮೋಘ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದ್ದು.
ಸುಂದರ ವದನ ನೀಳಕಾಯ ಮಗುವಿನಂತಹ ಮುಗ್ದ ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡ ನತದೃಷ್ಟ ಶ್ರೀಪಾದರು ಛಲದಂಕಮಲ್ಲನಂತೆ ಜೀವನದಲ್ಲಿ ಕಷ್ಟಪಟ್ಟು ವ್ಯವಸಾಯದ ಜೊತೆಗೆ ಗಣೇಶನ ಮೂರ್ತಿಯನ್ನು ಹವ್ಯಾಸೀ ವೃತ್ತಿಯನ್ನಾಗಿ ಆಯ್ಕೆ ಮಾಡಿ ಅಲ್ಲಿಯೇ ಸ್ಥಳೀಯ ಮನೆಗಳಿಗೆ ಹಾಗೂ ಕೆಲವೊಂದು ಸಾರ್ವಜನಿಕವಾಗಿ ಗಣೇಶನ ಮೂರ್ತಿಯನ್ನು ಹಬ್ಬದ ಸಲುವಾಗಿ ಪ್ರತಿಷ್ಠಾಪನೆಗೊಳ್ಳುವುದರಲ್ಲಿ ಇವರ ಕೈಚಳಕದಿಂದ ಮೂಡಿಬಂದ ಗಣಪ ಹಬ್ಬದ ದಿನ ಎಲ್ಲೆಡೆ ರಾರಾಜಿಸುತ್ತಿದ್ದ. ಅವನ ಆಶೀರ್ವಾದವೇ ಎಂಬಂತೆ ಗಂಡನಿಗೆ ತಕ್ಕ ಮಡದಿ ಹಾಗೂ ಆ ಗಣಪ ಮುದ್ದಾದ ಸಂಸ್ಕಾರವಂತ ೨ ಗಂಡುಮಕ್ಕಳನ್ನು ನೀಡಿ ಆಶಾರ್ವಾದ ಮಾಡಿರುವುದಂತೂ ಖಚಿತ.
ಹಿರಿಯರ ಒಂದೊಂದು ಮಾತುಗಳೂ ಎಂದೂ ಸುಳ್ಳಾಗದು. ಭೂಮಿಯಲ್ಲಿಯೂ ಬೇಕಾದವ ಅವನಿಗೂ ಬೇಕಂತೆ ಒಳ್ಳೆಯವರಿಗೆ ಬಹುದಿನ ಬದುಕಿ ಬಾಳುವ ಆಯುಷ್ಯರೇಖೆಯನ್ನು ಆ ದೇವನೇ ಮೊಟಕುಗೊಳಿಸಿರುವನು ಎಂಬುದಕ್ಕೆ ಶ್ರೀಪಾದರೇ ಸಾಕ್ಷಿ. 2019 ರ ದಿನ ಅವರ ಪಾಲಿಗೆ ಕರಾಳದಿನವಾಗಿತ್ತು ಎಂಬುದು ಯಾರಿಗೂ ತಿಳಿದಿರಲಿಲ್ಲ. ಜೂನ್ ತಿಂಗಳಲ್ಲಿ ಗಣಪತಿ ಮೂರ್ತಿಯನ್ನು ಮಾಡಲು ಆರಂಭಿಸುವ ಮೊದಲು ವಾಡಿಕೆಯಂತೆ ದೀವಗಿ( ಅದೊಂದು ಸ್ಥಳೀಯರು ನಡೆದುಕೊಳ್ಳುವ ಮಠ-ದೇವಸ್ಥಾನ) ಹೋಗಲು ಹೊರಟಾಗ ಮಾರ್ಗಮಧ್ಯೆ ಬೈಕ್ ಆಕ್ಸಿಡೆಂಟ್ ಆಗಿ ತಲೆಗೆ ತೀವ್ರ ಪೆಟ್ಟುಬಿದ್ದ ಕಾರಣ ಉಡುಪಿಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆ ನಡೆಯಿತು. ಎರಡು ಬಾರಿ ಶಸ್ತ್ರ ಚಿಕಿತ್ಸೆ ನಡೆದರೂ ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೆ ಅನಾರೋಗ್ಯ ಉಂಟಾಗಿ ಬಹು ಅಂಗಾಂಗ ವೈಫಲ್ಯದಿಂದ ತನ್ನ ಕೊನೆಉಸಿರೆಳೆದರು.
ನಾನು ಚಿಕ್ಕಂದಿನಿಂದಲೂ ಅವರೊಡನೆ ಒಡನಾಡಿದ ಒಂದೊಂದು ಗಳಿಗೆ ಇನ್ನೂ ಮಾಸದಂತೆ ನೆನಪಿನ ಸುರುಳಿಗಳಾಗಿ ಮನದಲ್ಲಿ ಅಚ್ಚೊತ್ತಿದಂತಿದೆ. ಯಕ್ಷಗಾನ ಪ್ರಸಂಗವನ್ನು ಕಥೆಯ ರೂಪದಲ್ಲಿ ಹೇಳುವ ಶೈಲಿ ಎಂತವರನ್ನಾದ್ರೂ ಮಂತ್ರಮುಗ್ದಗೊಳಿಸುವಂತದ್ದು.
‘ಕಿಡಿಯೊಂದು ಬೆಳಕಾಗಿ
ಮನಮಂದಿರದಲ್ಲಿ ಮರೆಯದ
ನಂದಾದೀಪದಂತೆ ಬೆಳಗುತ್ತ
ಬಾರದೂರಿಗೆ ಬೆಳೆಸಿದ ನಕ್ಷತ್ರ.
ಶ್ರೀಪಾದರ ಬಗ್ಗೆ ಬರೆಯುತ್ತಾ ಹೊರಟರೆ ಎಂದಿಗೂ ಮುಗಿಯದ ಸಾಹಿತ್ಯ. ಅವರ ವ್ಯಕ್ತಿತ್ತ್ವ ಶರೀರದ ಜೊತೆ ಶಾರೀರವೂ ಅಷ್ಟೇ ಸುಂದರ, ಸುಶೀಲ, ಪರೋಪಕಾರಿ, ಪ್ರಾಮಾಣಿಕ ನಂಬಿಕೆಯ ವ್ಯಕ್ತಿ. ಇದ್ದಷ್ಟು ದಿವಸ ತನ್ನ ಕಷ್ಟಕಾರ್ಪಣ್ಯಗಳನ್ನು ಲೆಕ್ಕಿಸದೇ ಮನರಂಜನೆಗೆಂದೇ ದೇಹವನ್ನು ಮುಡಿಪಾಗಿಟ್ಟು ಸಾವಿನಲ್ಲೂ ಸಾರ್ಥಕತೆಯನ್ನು ಕಂಡ ಮಹಾಪುರುಷೋತ್ತಮ.
ಸಂದ ಬಿರುದುಗಳು
ಇವರಿಗೆ ಸಂದ ಬಿರುದುಗಳು ಅಪಾರ. ಅದರಲ್ಲಿ ಕೆಲವೊಂದನ್ನು ಮಾತ್ರ ನಮೂದಿಸಿದ್ದೇನೆ.
- 1996-ಮೈಸೂರು ದಸರಾ ಮಹೋತ್ಸವದಲ್ಲಿ ಅಭಿನಂದನಾ ಪತ್ರ
- 2009- ಅಗ್ನಿಸೇವಾ ಟ್ರಸ್ಟ ಬೆಂಗಳೂರು ಇವರಿಂದ ಸನ್ಮಾನ
- 2012- ಕರ್ನಾಟಕ ಯಕ್ಷಗಾನ ಬಯಲಾಟ ಇವರಿಂದ ಸನ್ಮಾನ,
- ಕರ್ನಾಟಕ ಕರಾವಳಿ ಮೈತ್ರಿ ಸಂಘ, ಹೆಬ್ಬಗುಡ ಹೈದರಾಬಾದ್ ಇವರಿಂದ, ’ನಟ ಸಾಮ್ರಾಟ’ ಬಿರುದು
- 2015-ಪಂ.ಜಿ.ಆರ್.ಭಟ್ಅವರ ನಾದರಂಗ ಸಾಂಸ್ಕೃತಿಕ ವೇದಿಕೆ, ಕವಲಕ್ಕಿ ಸನ್ಮಾನ
ಹೀಗೇ ಪಟ್ಟಿಮಾಡುತ್ತಾ ಹೋದರೆ ಹನುಮನ ಬಾಲದಂತೆ ಮುಗಿಯಲಾರದಷ್ಟು ಅಮೂಲ್ಯ ಕಲಾಸೇವೆಯ ಆರಾಧಕನ ಬಿರುದು ಬೆಳೆಯುತ್ತಾ ಹೋಗುವುದು ಖಂಡಿತ.