ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಕೆಬಿಜೆಎಟಿಂಲ್ ಅರಣ್ಯ ಇಲಾಖೆಯ ದಿನಗೂಲಿ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಅಧಿಕಾರಿಗಳ ಭರವಸೆಯ ಮೇರೆಗೆ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಯಿತು.
ಧರಣಿ ನಿರತರ ಜತೆ ಬೆಳಿಗ್ಗೆ ಹಾಗೂ ಸಂಜೆ ಎರಡು ಬಾರಿ ಭೇಟಿ ನೀಡಿ ಮಾತನಾಡಿದ ಉಪ ಅರಣ್ಯಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ, ಎಸಿಎಫ್ ರಮೆಶ ಚವ್ಹಾಣ, ದಿನಗೂಲಿ ನೌಕರರ ನೇಮಕಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಕರೆದ ಟೆಂಡರ್ ನ್ನು ಕೆಬಿಜೆಎಟಿಂಲ್ ಎಂಡಿ ಅವರ ಮೌಖಿಕ ನಿರ್ದೇಶನದ ಮೇರೆಗೆ ತಾತ್ಕಾಲಿಕವಾಗಿ ಮುಂದಕ್ಕೆ ಹಾಕಿ ಯಥಾಸ್ಥಿತಿ ಕಾಪಾಡುವುದಾಗಿ ಭರವಸೆ ನೀಡಿದರು. ಹೀಗಾಗಿ ಈಗ ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆಯಿರಿ ಎಂದು ಮನವಿ ಮಾಡಿದರು.
ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ತಿಪ್ಪಣ್ಣ ಮಾದರ, ಸೀತಪ್ಪ ಗಣಿ, ವಿರೂಪಾಕ್ಷಿ ಮಾದರ, ದ್ಯಾಮಣ್ಣ ಬಿರಾದರ, ಸೀತಪ್ಪ ಗಣಿ, ಮಾತನಾಡಿ, ಅತ್ಯಂತ ಕಡಿಮೆ ಸಂಬಳದಲ್ಲಿ ಆಲಮಟ್ಟಿಯ ಅರಣ್ಯ ಕಾರ್ಮಿಕರು ದುಡಿಯುತ್ತಿದ್ದಾರೆ. ಇವರಿಗೆ ಕನಿಷ್ಠ ವೇತನವನ್ನು ನಿಗದಿಗೊಳಿಸಿದರೇ ಈಗ ಪಡೆಯುತ್ತಿರುವ ವೇತನಕ್ಕಿಂತಲೂ ಹೆಚ್ಚಾಗಲಿದೆ. ಕಾರ್ಮಿಕರ ಜತೆ ಅವರ ಕುಟುಂಬ, ಮಕ್ಕಳ ಶೈಕ್ಷಣಿಕ ಸೇರಿದಂತೆ ಬದುಕು ಹಸನುಗೊಳಿಸಲು ವೇತನಸನ್ನು ಹೆಚ್ಚಿಸಬೇಕು ಎಂದರು. ಮಾನವೀಯ ದೃಷ್ಠಿಯಿಂದ ಇವರ ಸಮಸ್ಯೆ ಪರಿಹರಿಸಬೇಕು, ಮೇಲಿಂದ ಮೇಲೆ ಈ ರೀತಿಯ ಸಮಸ್ಯೆ ಉದ್ಭವವಾಗದಂತೆ, ಹೊರಗುತ್ತಿಗೆ ಟೆಂಡರ್ ನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂದು ಅವರು ಮನವಿ ಮಾಡಿದರು. ಇಲ್ಲದಿದ್ದರೇ ಬೇಡಿಕೆ ಈಡೇರುವವರೆಗೂ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದರು.
ಮಕಬೂಲ್ ಬಾಗವಾನ, ಕಾಶೀನಾಥ ಬಿಂಗಿ, ಸಂಗಮೇಶ ಚಿಮ್ಮಲಗಿ, ಬಸಪ್ಪ ಗುಡಿಮನಿ, ಮಹೇಶ ತೆಲಗಿ, ಅಖಂಡೇಶ ಬಡಿಗೇರ, ಮೀನಾಕ್ಷಿ ರಾಠೋಡ, ಶಾಂತಾ ಚಿಮ್ಮಲಗಿ, ಸಂಗಮೇಶ ಯರನಾಳ, ಗೋವಿಂದ ವಡ್ಡರ, ರೇಣುಕಾ ಗೌಡರ, ಶೋಭಾ ಗೌಡರ, ಪ್ರಕಾಶ ಮಾಲಗತ್ತಿ, ಬಸಪ್ಪ ತುಬರಮಟ್ಟಿ ಮತ್ತೀತರರು ಇದ್ದರು.

