ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿನ ಎಲ್ಲ ಶಾಲೆಗಳಲ್ಲಿ ಶಾಲಾ ಆರಂಭದ ಅವಧಿಯಲಿ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಕಬ್ಬಿಣಾಂಶದ ಮಹತ್ವ ಹಾಗೂ ಅದರ ಕೊರತೆಯಿಂದಾಗುವ ಪರಿಣಾಮಗಳ ತಿಳಿವಳಿಕೆ ನೀಡಬೇಕು. ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಕಬ್ಬಿಣಾಂಶದ ಕೊರತೆ ನಿವಾರಿಸಲು ಆರೋಗ್ಯ ಇಲಾಖೆಯಿಂದ ವಿತರಿಸಲಾಗಿರುವ ಕಬ್ಬಿಣಾಂಶದ ಮಾತ್ರೆಗಳನ್ನು (ಐಎಫ್‌ಎ) ಪ್ರತಿ ಸೋಮವಾರ ವಿದ್ಯಾರ್ಥಿಗಳಿಗೆ ವಿತರಿಸಿ, ಸೇವಿಸುವಂತೆ ಪ್ರೇರೇಪಿಸಬೇಕು. ಇದಕ್ಕಾಗಿ ಶಾಲೆಗಳಲ್ಲಿ ಓರ್ವ ನೋಡಲ್ ಶಿಕ್ಷಕರ ನೇಮಕ, ಆಯಾ ಶಾಲಾ ವ್ಯಾಪ್ತಿಯ ಬಿ.ಆರ್.ಸಿ ಮತ್ತು ಸಿ.ಆರ್.ಸಿಗಳು ಮತ್ತು ಅಂಗನವಾಡಿ ಮೇಲ್ವಿಚಾರಕಿಯರು ಮೇಲುಸ್ತುವಾರಿಯಲ್ಲಿ ಈ ಬಗ್ಗೆ ವರದಿಯನ್ನು ಆರೋಗ್ಯ ಇಲಾಖೆಯೊಂದಿಗೆ ಹಂಚಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಸೂಚಿಸಿದ್ದಾರೆ.
ಅನಿಮಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಡಬ್ಲುö್ಯಐಎಫ್‌ಎಸ್ ಕಾರ್ಯಕ್ರಮದ ಯಶಸ್ವಿ ಅನುಷ್ಠಾನ ಮೊದಲ ಹೆಜ್ಜೆಯಾಗಿರುತ್ತದೆ. ಜಿಲ್ಲೆಯಲ್ಲಿನ ಎಲ್ಲ ಶಾಲಾ ಮತ್ತು ಅಂಗನವಾಡಿ ಮಕ್ಕಳಲ್ಲಿ ೩ ತಿಂಗಳೊಳಗಾಗಿ ಹೆಚ್.ಬಿ ಪರೀಕ್ಷೆ ಕೈಗೊಳ್ಳುವುದು ಮತ್ತು ಅನಿಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಅವಶ್ಯ ಚಿಕಿತ್ಸೆಗೆ ಕ್ರಮವಹಿಸುವುದು.
ಅದರಂತೆ, ಅಂಗನವಾಡಿ ಕೇಂದ್ರಗಳಲ್ಲಿನ ೧ರಿಂದ ೫ ವರ್ಷದ ಮತ್ತು ಶಾಲೆಗಳಲ್ಲಿನ ೦೬-೧೮ ವರ್ಷದ ಮಕ್ಕಳಿಗೆ ವರ್ಷದಲ್ಲಿ ೨ ಬಾರಿ ಅಲ್ಬೆಂಡಜೋಲ್ ಮಾತ್ರೆಗಳನ್ನು ಕಡ್ಡಾಯವಾಗಿ ವಿತರಿಸಿ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳ ಸಮನ್ವಯದೊಂದಿಗೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಜಿಲ್ಲೆಯಲ್ಲಿನ ಅಂಗನವಾಡಿಗಳಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಮತ್ತು ಶಾಲೆಗಳಲ್ಲಿನ ಮಕ್ಕಳಿಗೆ ಬಿಸಿಯೂಟ ಕಾರ್ಯಕ್ರಮದ ಮೂಲಕ ಸರ್ಕಾರದ ವತಿಯಿಂದ ವಿತರಿಸಲಾಗುತ್ತಿರುವ ಪೌಷ್ಠಿಕ ಆಹಾರವನ್ನು ಅವರುಗಳು ಸೇವನೆ ಮಾಡುತ್ತಿರುವ ಬಗ್ಗೆ ಆಯಾ ಶಾಲಾ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ನಿಗಾವಹಿಸುವಂತೆ ಸೂಚಿಸಿದ್ದಾರೆ.
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ನಿಲಯಗಳಿಗೆ ನಿಯಮಿತವಾಗಿ ವೈದ್ಯರುಗಳ ತಂಡ ಭೇಟಿ ನೀಡಿ, ಮಕ್ಕಳ ಆರೋಗ್ಯ ತಪಾಸಣೆ ಕೈಗೊಳ್ಳುವುದು ಮತ್ತು ವಸತಿ ನಿಲಯಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವುದು.
ಜಿಲ್ಲೆಯಲ್ಲಿ ಕಂಡು ಬರುವ ಅಪೌಷ್ಠಿಕ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ ಮೂಲಕ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸುವುದು ಮತ್ತು ಅಪೌಷ್ಠಿಕ ಪೌಷ್ಠಿಕ ಪುನಶ್ಚೇತನ ಕೇಂದ್ರಗಳಿಗೆ ಕಳುಹಿಸಿ ಅವರುಗಳಿಗೆ ಅವಶ್ಯವಿರುವ ಸೂಕ್ತ ಚಿಕಿತ್ಸೆಯನ್ನು ಕೊಡಿಸಲು ಕ್ರಮ ಕೈಗೊಳಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇತರ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದು ಅವಶ್ಯವಾಗಿರುವುದರಿಂದ ಆಯಾ ಇಲಾಖೆಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಯಶಸ್ವಿಯಾಗಿ ನಿಭಾಯಿಸಿ ಜಿಲ್ಲೆಯನ್ನು ಅನಿಮಿಯಾ ಮುಕ್ತ ವಿಜಯಪುರ ಜಿಲ್ಲೆಯನ್ನಾಗಿಸಲು ಪಣ ತೊಡೋಣ, ಸಾರ್ವಜನಿಕರು ಸರಕಾರದ ಈ ಎಲ್ಲ ಯೋಜನೆಗಳ ಸದ್ಭಳಕೆ ಮಾಡಿಕೊಂಡು ಉತ್ತಮ ಆರೋಗ್ಯ ರೂಪಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ತಿಳಿಸಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

