ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಶಬ್ದ ಬಳಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ತಕ್ಷಣ ಹುಚ್ಚಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನಗೆ ಸಹೋದರಿ ಸಮಾನಳಾದ ಮಹಿಳಾ ಸಚಿವೆ ಒಬ್ಬರ ಬಗ್ಗೆ ಇಂಥ ಕೀಳು ಮಟ್ಟದ ಪದ ಪ್ರಯೋಗ ಮಾಡಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಸಿ.ಟಿ ರವಿ ಅವರೇ ನಿಮಗೆ ಮನೆಯಲ್ಲಿ ಅಕ್ಕ-ತಂಗಿ, ತಾಯಿ, ಧರ್ಮಪತ್ನಿ ಇಲ್ಲವೇ? ಒಂದು ವೇಳೆ ಮನೆಯಲ್ಲಿ ತಾಯಿ ಇದ್ದರೆ, ಅಕ್ಕ ತಂಗಿ ಧರ್ಮಪತ್ನಿ ಇದ್ದರೆ ನಾನು ಮಹಿಳೆಯೊಬ್ಬರಿಗೆ ಈ ಪದ ಪ್ರಯೋಗ ಮಾಡಿದ್ದು ಸರಿಯೇ ಎಂದು ಅವರಿಂದ ಕೇಳಿ ತಿಳಿಯಿರಿ. ಆಗಲಾದರೂ ಸಂಸ್ಕಾರವಿಲ್ಲದ ನಿಮ್ಮ ಎಲುಬಿಲ್ಲದ ನಾಲಿಗೆಗೆ, ವಿವೇಚನೆಯನ್ನೇ ಕಳೆದುಕೊಂಡಿರುವ ನಿಮ್ಮ ಮೆದುಳಿಗೆ, ಮಾತೆತ್ತಿದರೆ ದೇಶಭಕ್ತಿ ಭಾರತ ಮಾತೆಯ ಬಗ್ಗೆ ಮಾತನಾಡುವ ಆಚಾರವಿಲ್ಲದ ನಿಮ್ಮ ನಾಲಿಗೆಗೆ ಕೊನೆ ಪಕ್ಷ ಮನೆಯಲ್ಲಿರುವ ಹೆಣ್ಣು ಮಕ್ಕಳಾದರೂ ಸಂಸ್ಕಾರ ನೀಡಿ ಸರಿದಾರಿಗೆ ತರುವ ಪ್ರಯತ್ನ ಮಾಡಲಿ ಎಂದು ಸಂಗಮೇಶ ಬಬಲೇಶ್ವರ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷರನ್ನ ಒದ್ದೋಡಿಸಿದ ರಾಣಿ ಚೆನ್ನಮ್ಮನ ನೆಲಕ್ಕೆ ಬಂದು, ಇಡೀ ಮಹಿಳಾ ಕುಲಕ್ಕೆ ಅವಮಾನವಾಗುವ ರೀತಿಯಲ್ಲಿ ಹಗುರವಾಗಿ ಮಾತನಾಡಿರುವ ಸಿ.ಟಿ ರವಿ ವೀರಮಾತೆ ರಾಣಿ ಚೆನ್ನಮ್ಮ ನವರ ಪ್ರತಿಮೆ ಎದುರು, ಇದೇ ದಿನ ಶಿರಸಾಷ್ಟಾಂಗ ನಮಸ್ಕಾರ ಹಾಕಿ ನಾಡಿನ ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಬಬಲೇಶ್ವರ ಆಗ್ರಹಿಸಿದ್ದಾರೆ.

