ಉದಯರಶ್ಮಿ ದಿನಪತ್ರಿಕೆ
ವರದಿ: ಗುರು ಆರ್ ಹಿರೇಮಠ
ಆಲಮೇಲ: ವಿಜಯಪುರ ಕಲಬುರ್ಗಿ ಜಿಲ್ಲೆಗಳ ನಡುಬಾಗದಲ್ಲಿರುವ ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಚಳಿ ಹೆಚ್ಚಾಗಿರುವುದರಿಂದ ಭೀಮಾ ತೀರದ ಗ್ರಾಮಗಳಲ್ಲಿ ಜನತೆ ನಡುಗುವಂತಾಗಿದೆ
ಹವಾಮಾನ ಇಲಾಖೆಯ ಮುನ್ಸೂಚನೆ ಈಗಾಗಲೇ ನೀಡಿದ್ದು ಅದೇ ರೀತಿಯಾಗಿ ಈ ಭಾಗದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ನಸುಕಿನ ಜಾವ ಹಾಗೂ ಸಾಯಂಕಾಲದ ವೇಳೆಗೆ ಚಳಿಯ ತೀವ್ರತೆ ಹೆಚ್ಚಾಗುತ್ತಿದ್ದು ಜನತೆ ತೊಂದರೆ ಅನುಭವಿಸುವಂತಾಗಿದೆ.
ಹಲವು ದಿನಗಳಿಂದ ತಂಪು ಹೆಚ್ಚಾಗಿದೆ ಮನೆಯಲ್ಲಿದ್ದ ಸ್ವೆಟರ್, ಶಾಲು, ಟೋಪಿ, ಮಪಲಾರಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ.
ಪ್ರಸಕ್ತ ಸಾಲಿನಲ್ಲಿ ಮಳೆಯ ಹೆಚ್ಚಳದಿಂದ ಹಾಗೂ ಬಂಗಾಳ ಕೊಲ್ಲಿ ವಾಯುವ್ಯ ಭಾಗದಲ್ಲಿ ವಾಯು ಭಾರ ಕುಸಿತದಿಂದ ಉಂಟಾಗಿರುವ ಈ ಚಳಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜನರಲ್ಲಿ ಶೀತ, ಕೆಮ್ಮು ನೆಗಡಿ, ಕಾಣಿಸಿಕೊಂಡು ಆತಂಕಕ್ಕೀಡು ಮಾಡಿದೆ.
ಬೆಳಗಿನ ವೇಳೆ ಅಲ್ಲಲ್ಲಿ ಮೈ ಕಾಯಿಸಿಕೊಳ್ಳುತ್ತಿರುವುದು ಕಂಡುಬರುತ್ತದೆ. ರಾತ್ರಿ ವೇಳೆಯಲ್ಲಿ ಸಂಜೆಯಾಗುತ್ತಲೇ ಎಲ್ಲರೂ ಗೂಡು ಸೇರುತ್ತಿದ್ದಾರೆ. ಬೆಳಗಿನ ಜಾವ ಸೂರ್ಯನ ಶಾಖ ಬಯಸಿ ಹಾತೊರೆಯುವಂತಾಗಿದೆ.
ಬೆಳಗಿನ ವೇಳೆಯಲ್ಲಿ ದಟ್ಟವಾದ ಹೊಗೆ ಮಂಜು ಕಾಣಿಸಿಕೊಳ್ಳುತ್ತಿದೆ ಇದರಿಂದ ತೊಗರಿ ಬೆಳೆ ಮತ್ತಿತರ ಬೆಳೆಗಳಿಗೆ ಹಾನಿ ಉಂಟು ಮಾಡುವ ಆತಂಕ ಎದುರಾಗಿದೆ
ಬಿಸಿಲೂರು ಎಂದು ಕರೆಸಿಕೊಳ್ಳುತ್ತಿದ್ದ ವಿಜಯಪುರ ಕಲಬುರ್ಗಿ ಜಿಲ್ಲೆಗಳ ನಡುವೆ ಇರುವ ಆಲಮೇಲ ತಾಲೂಕಿನ ಗ್ರಾಮಗಳಲ್ಲಿ ಸದ್ಯ ಚಳಿ ಹೆಚ್ಚಾಗಿದ್ದು ಪ್ರಕೃತಿಯ ಮುಂದೆ ಎಲ್ಲವೂ ಗೌಣ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

