ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸಮ್ಮೇಳನದ ಪೋಸ್ಟರಗಳನ್ನು ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ್, ರಾಜ್ಯ ಅಧ್ಯಕ್ಷ ಡಾ|| ಆನಂದ್ ಹೊಸೂರ ಹಾಗೂ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ್ ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಳೆದ ೭೫ ವರ್ಷಗಳಿಂದ ರಾಷ್ಟ್ರೀಯ ಪುನರ್ ನಿರ್ಮಾಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವಂತಹ ಜಗತ್ತಿನ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆ. ರಾಷ್ಟ್ರೀಯ, ಧ್ಯಾನ, ಆಧ್ಯಾತ್ಮಿಕ ಚಾರಿತ್ರ‍್ಯ, ವೈಶ್ಚಿಕ ಏಕತೆಯ ಆಧಾರದ ಮೇಲೆ ವ್ಯಕ್ತಿ ನಿರ್ಮಾಣ ಮಾಡುವ ಮೂಲಕ ರಾಷ್ಟ್ರ ಪುನರ್ ನಿರ್ಮಾಣದ ಮಹಾನ್ ಧೈಯದ ಕನಸನ್ನು ನನಸಾಗಿಸುತ್ತಾ ಬಂದಿದೆ. ಇಂದಿನ ವಿದ್ಯಾರ್ಥಿ ಇಂದಿನ ಪ್ರಜೆ, ಶೈಕ್ಷಣಿಕ ಪರಿವಾರದಲ್ಲಿ ಪರಿವರ್ತನೆಯ ಪ್ರಯತ್ನ, ಪಕ್ಷರಾಜ ಕಾರಣದಿಂದ ಮೇಲೇರಿ ರಾಷ್ಟ್ರ ರಾಜಕಾರಣದಲ್ಲಿ ಪಾಲ್ಗೊಳ್ಳುವ ರಾಷ್ಟ್ರ ಹಿತದ ರಾಜನೀತಿ, ರಚನಾತ್ಮಕ, ಆಂದೋಲನಾತ್ಮಕ. ಪ್ರಾತಿಧ್ಯಾತ್ಮಕ ಕಾರ್ಯಪದ್ದತಿಯ ಮೂಲಕ ಪ್ರತಿಯೊಬ್ಬ ಕಾರ್ಯಕರ್ತರೂ ಸ್ವಾಮಿ ವಿವೇಕಾನಂದರು ಬಯಸಿದ ಯುವಶಕ್ತಿಯಾಗಬೇಕೆಂಬುದು ಅ.ಭಾ.ವಿ.ಪ.ದ ಆಶಯವಾಗಿದೆ. ದಿನಾಂಕ ೨೭ ೨೮ ೨೯ ಡಿಸೆಂಬರ್ ೨೦೨೪ ಕಲ್ಬುರ್ಗಿ ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಮ್ಮೇಳನವು ನಡೆಯಲಿದೆ ಎಂದು ತಿಳಿಸಿದರು.
ಈ ಸಮಯದಲ್ಲಿ ರಾಜ್ಯ ಅಧ್ಯಕ್ಷರಾದ ಡಾ|| ಆನಂದ್ ಹೊಸೂರ, ವಿಭಾಗ ಸಂಘಟನಾ ಕಾರ್ಯದರ್ಶಿಯಾದ ಹರ್ಷ ನಾಯಕ, ಜಿಲ್ಲಾ ಪ್ರಮುಖರಾದ ಎಂ ಎಸ್ ಬಿರಾದಾರ, ಜಿಲ್ಲಾ ಸಂಚಾಲಕರಾದ ಮಂಜುನಾಥ ಹಳ್ಳಿ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶಿವನಗೌಡ ಬಿರಾದಾರ, ನಗರ ಕಾರ್ಯದರ್ಶಿ ಸಂದೀಪ ಅರಳಗುಂಡಿ, ನಗರ ಸಹ ಕಾರ್ಯದರ್ಶಿ ಅಭಿಷೇಕ ಬಿರಾದಾರ ಕಾರ್ಯಕರ್ತರಾದ ಶಿವಾಜಿ ಮಚಕುರಿ ಉಪಸ್ಥಿತರಿದ್ದರು.

