ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಡಬ್ಲ್ಯೂ.ಐ.ಎಫ್.ಎಸ್ ಹಾಗೂ ಜಂತುಹುಳ ನಿವಾರಣಾ ಕಾರ್ಯಕ್ರಮ ಬಾಲ್ಯಾವಸ್ಥೆಯಿಂದ ವಯಸ್ಕರ ಹಂತಕ್ಕೆ ಹೋಗುವ ಮದ್ಯಕಾಲವೇ “ಹದಿಹರೆಯ” ಕಾಲ. ಜೀವನದಲ್ಲಿ ಇದೊಂದು ಮಹತ್ತರವಾದ ಘಟ್ಟ ಅಥವಾ ಎರಡನೇ ಹಂತ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಹೇಳಿದರು.
ಸಿಂದಗಿ ಪಟ್ಟಣದ ಸರಕಾರಿ ಹೆಣ್ಣುಮಕ್ಕಳ ಶಾಲೆಯ ಆವರಣದಲ್ಲಿ ಆರೋಗ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೊಗದೊಂದಿಗೆ ಹಮ್ಮಿಕೊಂಡ ಹದಿಹರೆಯದವರಿಗೆ ಕಬ್ಬಿಣಾಂಶದ ಮಾತ್ರೆ ನೀಡುವ ಕಾರ್ಯಕ್ರಮದಲ್ಲಿ ಮಾತ್ರೆ ನುಂಗಿಸಿ ಮಾತನಾಡಿದ ಅವರು, ತೀವ್ರವಾಗಿ ಬೆಳವಣಿಗೆ ಹೊಂದುವ ಈ ಸಂಧಿಕಾಲದಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಆಗುತ್ತವೆ. ಈ ವಯಸ್ಸಿನಲ್ಲಿ ಪೌಷ್ಠಿಕಾಂಶದ ಅವಶ್ಯಕತೆ ಹೆಚ್ಚಾಗಿರುತ್ತದೆ. ಅದರಲ್ಲೂ ಕಬ್ಬಿಣಾಂಶದ ಕೊರತೆ ಮುಖ್ಯ ಕಾರಣವಾಗಿರುತ್ತದೆ. ಆದ್ದರಿಂದ ಎಲ್ಲಾ ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿರುವ ಮಕ್ಕಳಿಗೆ ಪ್ರತಿ ಸೋಮವಾರ ಕಬ್ಬಿಣಾಂಶದ ಮಾತ್ರೆಯನ್ನು ಬಿಸಿಯೂಟದ ನಂತರ ಮಕ್ಕಳಿಗೆ ನೀಡಬೇಕು ಎಂದರು.
ಈ ವೇಳೆ ತಾಲೂಕು ಆರೋಗ್ಯ ಕ್ಷೇತ್ರದ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಮಾತನಾಡಿ, ೧೦-೧೯ ವಯಸ್ಸಿನ ಹದಿಹರೆಯವದರಲ್ಲಿ ರಕ್ತ ಹೀನತೆ ಮತ್ತು ತೀವ್ರತೆ ಕಡಿಮೆ ಮಾಡುವುದಕ್ಕಾಗಿ ಕಬ್ಬಿಣಾಂಶ ಮಾತ್ರೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂಗನವಾಡಿ ಹಾಗೂ ಶಾಲೆಗಳಲ್ಲಿರುವ ಮಕ್ಕಳ ವಯಸ್ಸಿನ ಅನುಗುಣವಾಗಿ ಮಾತ್ರೆ ನೀಡಲಾಗುವುದು. ಹಾಗೆಯೇ ಪ್ರತಿ ಆರು ತಿಂಗಳಿಗೊಮ್ಮೆ ಜಂತುಹುಳ ನಿವಾರಣೆಗಾಗಿ ಅಲ್ಬೆಂಡೆಜೋಲ್ ಮಾತ್ರೆ ಕೊಡಲಾಗುವುದು. ಇದರಿಂದ ಮಕ್ಕಳಲ್ಲಿ ಅಪೌಷ್ಠಿಕತೆ ಹೋಗಲಾಡಿಸಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಸಹಾಯಕಾರಿಯಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಶರಣಬಸು ಲಂಗೋಟಿ, ಸಹಶಿಕ್ಷಕರಾದ ಎಮ್.ಎಮ್.ಆಳಂದ, ಎಸ್.ಜಿ.ಕಟಕದೊಂಡ, ಎ.ಕೆ.ಬಿರಾದಾರ, ಆರೋಗ್ಯ ಇಲಾಖೆಯ ವಿರೇಂದ್ರ ಪವಾಡೆ, ಮಹಾಲಿಂಗ ಫಕೀರಪೂರ, ಆಶಾ ಮೆಂಟರ್ ಸರೋಜಿನಿ ಪತ್ತಾರ, ಆಶಾಕೌಸರ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

