’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ ಮಾಲೆ)
ಲೇಖನ – ಜಯಶ್ರೀ. ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಈಸೋಪನ ನೀತಿಕಥೆಗಳನ್ನು ಕೇಳದವರು ಕಡಿಮೆ. ಅದರಲ್ಲೊಂದು ಕತ್ತೆಯ ಕಥೆ ಬರುತ್ತದೆ. ಅದು ಹೀಗಿದೆ: ಕಾಡಿನಲ್ಲಿದ್ದ ಕತ್ತೆಯೊಂದು ಸಿಂಹದ ಚರ್ಮ ತೊಟ್ಟು ಸಿಂಹ ಅಂತ ನಟಿಸಿ ಸಿಂಹಕ್ಕೆ ಸಿಗುತ್ತಿದ್ದ ಮರ್ಯಾದೆಯನ್ನು ಪಡೆದ ಕಥೆಯದು. ಈಸೋಪನ ಪ್ರಕಾರ ಅದರ ನೀತಿ ಏನೇ ಆಗಿರಲಿ, ಆದರೆ ಆ ಕತ್ತೆಗೆ ಕಾಡಿನ ರಾಜ ಸಿಂಹ ಆಗಬೇಕೆನ್ನುವ ಮಹದಾಸೆ ಇತ್ತಲ್ಲ ಅದನ್ನು ಮೆಚ್ಚಲೇಬೇಕು. ಮತ್ತು ನಾವೆಲ್ಲ ಅಂತಹ ಮಹದಾಸೆಯನ್ನು (ಗುರಿಯನ್ನು) ಹೊಂದಬೇಕೆನ್ನುವ ಸಂದೇಶವನ್ನು ಸಹ ಅದು ನೀಡುತ್ತದೆ.
ಸ್ಮಾರ್ಟ್ ಗೋಲ್ ಇರಲಿ
ಮುಂದೆ ಗುರಿಯಿರಬೇಕು ಹಿಂದೆ ಗುರು ಇರಬೇಕೆನ್ನುವ ಮಾತು ನಮಗೆಲ್ಲರಿಗೂ ಗೊತ್ತೇ ಇದೆ. ಗುರಿಯೆಂದರೇನು ಎಂಬ ಪ್ರಶ್ನೆ ಮೂಡುತ್ತದೆ. ‘ಗುರಿಯು ಭವಿಷ್ಯದ ಕಲ್ಪನೆ ಅಥವಾ ವ್ಯಕ್ತಿಯು ಸಾಧಿಸಲು ಯೋಜಿಸುವ, ನಿರ್ಧರಿಸಿರುವ ಸಂಗತಿಗೆ ಬದ್ಧವಾಗಿರುವ ಸಂಗತಿಯಾಗಿದೆ.’ ಸೀಮಿತ ಸಮಯದಲ್ಲಿ ಅದನ್ನು ತಲುಪಲು ಪ್ರಯತ್ನವೂ ಮುಖ್ಯ. ಸ್ಥೂಲವಾಗಿ ಚಿತ್ರಣ ನೀಡುವುದಾದರೆ ಗುರಿಯು ಉದ್ದೇಶವನ್ನು ಹೊಂದಿರುವ, ಪ್ರತಿಕ್ರಿಯೆಯನ್ನು ಮಾರ್ಗದರ್ಶಿಸುವ, ನಿರೀಕ್ಷಿತ ಫಲಿತಾಂಶವಾಗಿದೆ. ಸ್ಮಾರ್ಟ್ ಗುರಿಯನ್ನು ಹೊಂದಬೇಕು. ಸ್ಮಾರ್ಟ್ ಗೋಲ್ ಎನ್ನುವುದು ಫ್ರೇಮ್‌ವರ್ಕನ ಪ್ರಕಾರ (ಸ್ಪೆಸಿಪಿಕ್,ಮಿಸರ್‌ಬಲ್, ಅಚಿವೆಬಲ್, ರೆಲೆವಂಟ್, ಟೈಮ್ ಬೌಂಡ್) ನಿರ್ಧಿಷ್ಟ, ಅಳೆಯಬಹುದಾದ, ಸಾಧಿಸಬಹುದಾದ, ಸಂಬಂಧಿತ ಮತ್ತು ಸಮಯಕ್ಕೆ ಸೀಮಿತವಾದ ಗುರಿಯನ್ನು ಸೂಚಿಸುತ್ತದೆ. ಸ್ವಾಮಿ ವಿವೇಕಾನಂದರು ಹೇಳಿರುವಂತೆ, ‘ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲಬೇಡಿ.
ಗುರಿ ಬರೆಯಿರಿ
ಇಂಗ್ಲೀಷಿನಲ್ಲಿ ಒಂದು ಮಾತಿದೆ “ಶೂಟ್ ಟು ದ ಮೂನ್ ಇವನ್ ಇಫ್ ಯೂ ಮಿಸ್ ಯೂ ವಿಲ್ ಲ್ಯಾಂಡ್ ಅಮಾಂಗ್ ದ ಸ್ಟರ‍್ಸ್’ ಅಂದರೆ ಚಂದ್ರನ ತಲುಪಲು ಪ್ರಯತ್ನಿಸಿದರೆ ಚಂದ್ರ ಸಿಕ್ಕರೂ ಸಿಗಬಹುದು. ಸಿಗದಿದ್ದರೆ ಮಿನುಗುವ ನಕ್ಷತ್ರಗಳ ನಡುವೆ ಬೀಳುತ್ತೇವೆ. ಇದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ ಗುರಿ ದೊಡ್ಡದಿದ್ದರೆ ಅದಕ್ಕಿಂತ ಸಣ್ಣದನ್ನಾದರೂ ನಾವು ಸಾಧಿಸುತ್ತೇವೆ. ಇದನ್ನೇ ಹೋಲುವಂತಿರುವ ಅಬ್ದುಲ್ ಕಲಾಂ ಅವರ ಮಾತು ಹೀಗಿದೆ.’ಸಣ್ಣ ಗುರಿಗಳನ್ನು ಇಟ್ಟುಕೊಳ್ಳುವುದು ಒಂದು ಅಪರಾಧ.’ ಜೀವನದ ಗುರಿ ಯಾವಾಗಲೂ ದೊಡ್ಡದಿರಬೇಕು. ‘ಆ್ಯನ್ ಅನ್ ರಿಟನ್ ಗೋಲ್ ಈಸ್ ಓನ್ಲಿ ಅ ವಿಶ್’ ಅಂತ ಹೇಳಲಾಗುತ್ತದೆ. ಗುರಿಯನ್ನು ಬರೆದಿಟ್ಟುಕೊಳ್ಳಬೇಕು. ಬರೆಯದೇ ಇರುವ ಗುರಿಯು ಗುರಿಯೇ ಅಲ್ಲ ಅದು ಕೇವಲ ಬಯಕೆ ಮಾತ್ರ. ಆದ್ದರಿಂದ ಅದನ್ನು ದೊಡ್ಡ ಅಕ್ಷರಗಳಲ್ಲಿ ನೀವು ಓದುವ ಕೋಣೆಯಲ್ಲಿ ಬರೆದಿಟ್ಟುಕೊಳ್ಳಬೇಕು. ಅದು ನಿಮಗೆ ಸತತ ನೆನಪು ಮಾಡುವಂತಿರಬೇಕು. ಅದರ ಬೆನ್ನು ಹತ್ತಲು ಸಹಾಯಕವಾಗಬೇಕು.
ಗುರಿ ಬದಲಾಗದಿರಲಿ
ಗುರಿ ಇದ್ದರೆ ಸಾಲದು. ಗುರಿ ಸಾಧಿಸುವ ಛಲ ಬೇಕೇಬೇಕು. ಅದರೊಂದಿಗೆ ನಿಶ್ಚಲ ಮನಸ್ಸೂ ಬೇಕು. ಉದಾಹರಣೆಗೆ ಬಾವಿಯನ್ನು ತೋಡಿ ನೀರು ಪಡೆಯಬೇಕೆಂದರೆ ನೂರು ಕಡೆ ನೂರು ಗುಂಡಿಯನ್ನು ತೋಡಿದರೆ ನೀರು ಲಭಿಸುವುದು ಕಠಿಣ. ಒಂದೇ ಗುಂಡಿಯನ್ನು ನೂರು ಅಡಿಯವರೆಗೆ ತೋಡಿದರೆ ನೀರು ಸಿಗುವ ಸಾಧ್ಯತೆ ಹೆಚ್ಚು. ಗುರಿ ಸಾಧಿಸಲು ಗುರು ಬೇಕೇ ಬೇಕು. ಗುರುವಿನ ಮಾರ್ಗದರ್ಶನದಲ್ಲೇ ಗುರಿ ಸಾಧನೆ ಸುಲಭ ಸಾಧ್ಯವೆನಿಸುವುದು. ಜೀವನದಲ್ಲಿ ಗುರು ಬದಲಾದರೂ ಗುರಿ ಬದಲಾಗದಿರಲಿ.
ಛಲವಿರಲಿ
ದೊಡ್ಡ ಗುರಿ ಸಾಧಿಸುವುದು ನಾವಂದುಕೊಂಡಂತೆ ಸರಳ ಮತ್ತು ಸುಲಭದ್ದಲ್ಲ. ದಾರಿ ತುಂಬ ಕಲ್ಲುಮುಳ್ಳು ಅಡೆತಡೆಗಳು ಇದ್ದೇ ಇರುತ್ತವೆ. ಎಂಥ ಕಷ್ಟ, ಕಠಿಣ ಸವಾಲು ಬಂದರೂ ಹೆದರದೆ ಎದೆಗಾರಿಕೆಯಿಂದ ಎದುರಿಸಬೇಕು. ಛಲ ಬಲಪಡಿಸಲು ಬಲ ಬೇಕು. ಅದಕ್ಕೆ ಬಲವಾದ ತುಡಿತ ಬೇಕು. ಕುಂತರೂ ನಿಂತರೂ ಅದೇ ಧ್ಯಾನದಲ್ಲಿರಬೇಕು. ನಿರ್ಧರಿಸಿದ್ದು ಯೋಜಿಸಿದ್ದು ಆಗಲಿಲ್ಲವೆಂದು ಮೇಲಿಂದ ಮೇಲೆ ಬೇರೆ ಬೇರೆ ಗುರಿಯನ್ನು ಇಟ್ಟುಕೊಳ್ಳುವುದು ದೊಡ್ಡ ವೈಫಲ್ಯಕ್ಕೆ ಕಾರಣವಾಗುತ್ತದೆ. ನಿರ್ಧರಿಸಿದ ಗುರಿಯನ್ನು ಮುಟ್ಟುವವರೆಗೂ ಕೆಣುಕುವವರಿಗೆ ಕಿವಿಗೊಡಲೇಬಾರದು. ಗುರಿ ಮುಟ್ಟುವ ತನಕ ಓಡಲೇಬೇಕು. ಗುರಿ ನಿಜವಾಗಿಸುವ ಹಂಬಲ ಹುರುಪು ನಿಮ್ಮಲ್ಲಿರಲಿ. ಸೊಲು ಮೆಟ್ಟಿದ ಗೆಲುವು ನಿಮ್ಮದಾಗಲಿ.
ಗುಪ್ತವಾಗಿಡಿ
ನಾನು ಇಂಥ ಗುರಿಯನ್ನು ಸಾಧಿಸುವನಿದ್ದೇನೆಂದು ಟಾಂಟಾ ಸುದ್ದಿ ಮಾಡಬಾರದು. ಗುರಿ ಗುಪ್ತವಾಗಿರಬೇಕು. ನಾವು ಮಾತನಾಡುವುದಕ್ಕಿಂತ ನಮ್ಮ ಕಾರ್ಯಗಳು ಮಾತನಾಡಬೇಕು. ನಿಮ್ಮ ಸುತ್ತಲೂ ದೊಡ್ಡ ಗುರಿಗೆ ಗುರಿಯಿಡುವ ಜನರಿದ್ದರೆ, ಅದನ್ನು ಸಾಧಿಸುವ ಛಲ ಅವರಲ್ಲಿದ್ದರೆ ನೀವೂ ಅವರಂತೆಯೇ ಗುರಿಗೆ ಗುರಿ ಇಡಲು ಕಲಿಯುತ್ತೀರಿ ಯಶಸ್ವಿ ವ್ಯಕ್ತಿಗಳು ಆಗುತ್ತೀರಿ. ಸಾಧನೆ ಮಾಡದೇ ಸಾಯುವ ಜಾಯಮಾನ ನನ್ನದಲ್ಲ ಎನ್ನುವ ಜನರ ಜೊತೆ ಗೆಳೆತನ ಬೆಳೆಸಬೇಕು.
ಸತತ ಪ್ರಯತ್ನವಿರಲಿ
ವಾಸಿಸಲು ಒಂದು ಸುಂದರ ಮನೆ ಬೇಕು ಎಂದು ಕನಸು ಕಾಣುತ್ತ ಅದನ್ನೇ ಗುರಿಯಾಗಿಸಿಕೊಂಡರೆ ಪಕ್ಕದಲ್ಲಿದ್ದವರು ಪರಿಚಯದವರು ಆತ್ಮೀಯರು ಯಾರು ನಿನಗೆ ಸಹಾಯ ಮಾಡುವುದಿಲ್ಲ. ಆದರೆ ನೀನು ಶ್ರಮವಹಿಸಿ ಮನೆ ಕಟ್ಟಿಸಿ ವಾಸ್ತು ಶಾಂತಿಗೆ ಬಂದು ಹಾರೈಸಿ ಉಡುಗೊರೆ ಕೊಡುತ್ತಾರೆ. ಅಂತೆಯೇ ಗುರಿ ಸಾಧನೆಗೆ ಕಂಕಣಬದ್ಧರಾಗಿ ನಿಂತಾಗ ನಿನ್ನೊಂದಿಗೆ ಯಾರೂ ಸಾಥ್ ಕೊಡುವುದಿಲ್ಲ. ಗುರಿ ತಲುಪಿದ ಮೇಲೆ ಮಾತ್ರ ಎಲ್ಲರೂ ಬಂದು ಹಾರೈಸುತ್ತಾರೆ. ಇದುವರೆಗೂ ದೂರ ಸರಿಸಿದವರು ಅವಮಾನಿಸಿದವರು ಸಹ ಸನ್ಮಾನಿಸಿ ನಿಮ್ಮನ್ನು ತಮ್ಮವರು ಎನ್ನುತ್ತಾರೆ. ಗುರಿಯ ಸಾಧನೆಗೆ ಅಂತಹ ಚುಂಬಕ ಶಕ್ತಿಯಿದೆ. ‘ಗೆದ್ದಾಗ ಎಲ್ಲರೂ ನಿನ್ನ ಜೊತೆ ಸೋತಾಗ ಯಾರೂ ಕೇಳುವುದಿಲ್ಲ ನಿನ್ನ ವ್ಯಥೆ,’ ಆದ್ದರಿಂದ ಸಾಧನೆಯ ತುತ್ತತುದಿಯನ್ನು ಮುಟ್ಟುವವರೆಗೆ ಪ್ರಯತ್ನಿಸಲೇಬೇಕು. ಆರಂಭಶೂರರಂತೆ ಮೊದಮೊದಲು ಉತ್ಸಾಹ ತೋರಿಸಿ ನಂತರ ಪಂಕ್ಚರ್ ಆದ ಸೈಕಲ್ ಟ್ಯೂಬ್‌ನಂತೆ ಆಗಬಾರದು.
ಗುರಿ ವಿಭಜಿಸಿ
ದೊಡ್ಡ ಗುರಿಯನ್ನು ಮುಟ್ಟಲು ಸಾಕಷ್ಟು ವರುಷಗಳು ಹಿಡಿಯಬಹುದು. ಆದ್ದರಿಂದ ಸ್ಥಿರತೆ ಬೇಕು. ಹಾಗೆಯೇ ದೊಡ್ಡ ಗುರಿಯನ್ನು ದಿನದ ವಾರದ ಸಣ್ಣ ಸಣ್ಣ ಗುರಿಗಳನ್ನಾಗಿ ವಿಭಜಿಸಿಕೊಳ್ಳಬೇಕು. ಏಕೆಂದರೆ ದೊಡ್ಡ ಗುರಿ ನೂರಾರು ಹೆಜ್ಜೆ ಇಟ್ಟರೆ ಸಿಗುವಷ್ಟು ಬುಡದಲ್ಲಿಲ್ಲ. ಸನಿಹದಲ್ಲೂ ಇಲ್ಲ. ನಿರಂತರ ಪ್ರಯತ್ನಕ್ಕೆ ಇರುವಷ್ಟು ಶಕ್ತಿ ಯಾವುದಕ್ಕೂ ಇಲ್ಲ. ಪ್ರಯತ್ನ ನಾವು ಬಯಸಿದ್ದನ್ನೆಲ್ಲ ದಯಪಾಲಿಸುವ ಕಲ್ಪವೃಕ್ಷದಂತೆ. ಪ್ರಯತ್ನ ಪರಿಪೂರ್ಣವಾಗಿರಬೇಕು. ಇನ್ನೇನು ಗೆಲುವು ಸಿಗುತ್ತದೆ ಎನ್ನುವ ಕೊನೆ ಹಂತದಲ್ಲಿ ಹೊರ ಬರುವ ನಿರ್ಧಾರ ಬೇಡವೇ ಬೇಡ. ಛಲವ ಬಿಡದಿರು ಎಂದಿಗೂ ನಿಲ್ಲದಿರು ಹಿಂಜರಿಯದೆ ಹಿಂದಿರುಗದೆ ಮುನ್ನುಗ್ಗುತಿರು ಸಾಗುತಿರು.
ಕೊನೆ ಹನಿ
ಗುರಿಗಳನ್ನು ಹೊಂದಿರುವ ಜನರು ಯಶಸ್ವಿಯಾಗುತ್ತಾರೆ ಏಕೆಂದರೆ ಅವರು ಎಲ್ಲಿಗೆ ಹೋಗುತ್ತಿದ್ದಾರೆಂದು ಅವರಿಗೆ ತಿಳಿದಿದೆ.’ ಎಂದಿದ್ದಾರೆ ಅರ್ಲ ನೈಟಿಂಗೇಲ್. ಬದುಕಿನಲ್ಲಿ ಗುರಿಯನ್ನು ನಿರ್ಧರಿಸಿಕೊಂಡಾಗ ಇನ್ನೂ ಚೆನ್ನಾಗಿ ಕಾರ್ಯ ನಿರ್ವವಹಿಸಬಲ್ಲೆವು. ಏಕೆಂದರೆ ನಮಗೆ ಏನು ಮಾಡುವುದಿದೆ ಮತ್ತು ಏಕೆ ಮಾಡುವುದಿದೆ ಎಂದು ಚೆನ್ನಾಗಿ ಗೊತ್ತಿರುತ್ತದೆ. ಗುರಿ ಮತ್ತು ಸಾಧನೆ ನಡುವಿರುವ ಸೇತುವೆ ಎಂದರೆ ಶಿಸ್ತು. ‘ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ನಿಮಗೆ ತಿಳಿದಿಲ್ಲದಿದ್ದರೆ, ಬೇರೆಲ್ಲಿಯಾದರೂ ಕೊನೆಗೊಳ್ಳುವಿರಿ.’ ಎನ್ನುವ ಲಾರೆನ್ಸ್ ಜೆ ಪೀಟರ್ ಅವರ ಮಾತು ನೂರಕ್ಕೆ ನೂರರಷ್ಟು ಸತ್ಯ. ಈ ಮಾತನ್ನು ಪುಷ್ಟೀಕರಿಸುವಂತೆ ಜಿಗ್ ಜಾಗ್ಲರ್ ಹೀಗೆ ಹೇಳುತ್ತಾರೆ. ‘ನಿಮಗೆ ಮನೆ ನಿರ್ಮಿಸಲು ಯೋಜನೆ ಬೇಕು. ಜೀವನವನ್ನು ನಿರ್ಮಿಸಲು ಯೋಜನೆ ಅಥವಾ ಗುರಿಯನ್ನು ಹೊಂದಿರುವುದು ಇನ್ನೂ ಮುಖ್ಯವಾಗಿದೆ.’ ಹಿರಿಯರಿಲ್ಲದ ಮನೆ, ಗುರಿಯಿಲ್ಲದ ಜೀವನ, ಗುರುವಿಲ್ಲದ ಶಿಕ್ಷಣ ನೀತಿಯಿಲ್ಲದ ನಡುವಳಿಕೆ ಹಾಗೆ ಶಿಕ್ಷಣವಿಲ್ಲದ ಬದುಕಿನಲ್ಲಿ ಯಶಸ್ಸು ಕಾಣಲಾಗದು. ಗುರಿಯಿಲ್ಲದ ಜೀವನ ಸೂತ್ರವಿಲ್ಲದ ಗಾಳಿಪಟದಂತೆ, ಹಾಗಾದರೆ ತಡವೇಕೆ ಗಾಳಿಪಟಕ್ಕೆ ದೊಡ್ಡ ಗುರಿಯೆಂಬ ಸೂತ್ರ ಕಟ್ಟೋಣ ಏಣಿಯಿಲ್ಲದೇ ಗೆಲುವೆಂಬ ಬಾನಿಗೆ ಲಗ್ಗೆ ಹಾಕೋಣ..