ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳ ಅಪಾರ್ ಐಡಿ ಜನರೇಟ್ ಮಾಡಲು ಇಲಾಖೆಯಿಂದ ಸೂಚಿಸಿದ್ದಾರೆ. ಆದರೆ ಅದರ ಕುರಿತು ಶಿಕ್ಷಕರಿಗೆ ಸಮರ್ಪಕ ತರಬೇತಿ ಇಲ್ಲದ ಕಾರಣ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಾಗೂ ಮುಖ್ಯ ಶಿಕ್ಷಕರಿಗೆ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಬಳಕೆ ಸೌಲಭ್ಯ ಶಾಲೆಗಳಲ್ಲಿ ಇಲ್ಲದಿರುವ ಪ್ರಯುಕ್ತ ಅಪಾರ ಐಡಿ ಜನರೇಟ್ ಮಾಡಲು ತುಂಬಾ ತೊಂದರೆ ಆಗುತ್ತಿದೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಸುಮಾರು ಶೇ.90 ಮಕ್ಕಳ ಆಧಾರ್ ಕಾರ್ಡ್ನಲ್ಲಿ ಅಕ್ಷರಗಳು ಲೋಪದೋಷಗಳಿಂದ ಕೂಡಿದ್ದು ಜನರೇಟ್ ಆಗಲು ತುಂಬಾ ಸಮಸ್ಯೆಯಾಗುತ್ತಿದೆ. ಕಾರಣ ಅಪಾರ ಐಡಿ ಕ್ರಿಯೇಟ್ ಮಾಡುವುದನ್ನು ತಡೆಹಿಡಿಯಲು ವಿನಂತಿಸಿದರು. ಅಲ್ಲದೆ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಿಗೆ ಬಿಸಿ ಊಟದ ಕೆಲಸ, ಮೊಟ್ಟೆ, ಶೇಂಗಾ ಚಿಕ್ಕಿ ಬಾಳೆಹಣ್ಣು ವಿತರಣೆ ಹಾಗೂ ಅಕ್ಷರ ದಾಸೋಹದ ಲೆಕ್ಕಪತ್ರ ನಿರ್ವಹಣೆ ಕೆಲವು ಮುಖ್ಯ ಶಿಕ್ಷಕರಿಗೆ ಬಿಎಲ್ಓ ಕಾರ್ಯದ ಒತ್ತಡ ಎಸ್.ಎ.ಟಿ.ಎಸ್ ಹಾಗೂ ಯುಡೈಸ್ ಪ್ಲಸ್ ಮಾಹಿತಿ ನಿರ್ವಹಣೆ ಹೀಗೆ ಹಲವಾರು ಕೆಲಸದ ಒತ್ತಡಗಳಿಂದ ಶಿಕ್ಷಕರ ಆರೋಗ್ಯ ಹದಗೆಡುತ್ತಿದೆ. ಈ ಎಲ್ಲ ಕಾರ್ಯಗಳಿಂದ ಶಿಕ್ಷಕರಿಗೆ ಮುಕ್ತಿ ನೀಡಬೇಕು ಎಂದರು.
ವಿಜಯಕುಮಾರ ಹತ್ತಿ, ಬಿ.ಟಿ.ಗೌಡರ, ಜಗದೀಶ ಬೋಳಸೂರ, ನೀಜು ಮೇಲಿನಕೇರಿ, ಮುತ್ತು ಪೂಜಾರಿ ಇದ್ದರು.

