ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕು ದಂಡಾಧಿಕಾರಿ ಸುರೇಶ ಚಾವಲರ ಅವರನ್ನು ಕಸಾಪ ಪದಾಧಿಕಾರಿಗಳು ಮಂಗಳವಾರ ಸೌಜನ್ಯಯುತವಾಗಿ ಭೇಟಿ ಮಾಡಿ, ಜನೇವರಿ ತಿಂಗಳಲ್ಲಿ ಜರುಗಲಿರುವ ತಿಕೋಟಾ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಕುರಿತು ಚರ್ಚಿಸಿದರು.
ತಾಲೂಕು ಅಧಿಕಾರಿಯಾಗಿ ಹೊಸದಾಗಿ ಬಂದಿರುವದರಿಂದ ಎಲ್ಲವನ್ನು ಸರಿಯಾಗಿ ಅರ್ಥಮಾಡಿಕೊಂಡು ಸಮ್ಮೇಳನದ ಯಶಸ್ಸಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುವದಾಗಿ ತಿಳಿಸಿದರು.
ತಾಲೂಕಿನ ಎಲ್ಲಾ ಅಧಿಕಾರಿಗಳನ್ನು, ಸಾರ್ವಜನಿಕರನ್ನು, ಹಿರಿಯರನ್ನು, ಶಿಕ್ಷಕರನ್ನು, ರಾಜಕೀಯ ಮುಖಂಡರನ್ನು, ವ್ಯಾಪಾರಿವರ್ಗದವರನ್ನು, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನ ಅರ್ಥಪೂರ್ಣವಾಗಿರುವಂತೆ ನೋಡಿಕೊಳ್ಳಲು ಸಲಹೆ ನೀಡಿದರು.
ಎಲ್ಲರೂ ಸೇರಿ ಆ ಕನ್ನಡಾಂಬೆ ಭುವನೇಶ್ವರಿ ತಾಯಿಯ ಜಾತ್ರೆಯನ್ನು ಅತ್ಯಂತ ಗೌರವದಿಂದ ಆಚರಿಸೋಣವೆಂದು ಅಭಿಪ್ರಾಯ ಪಟ್ಟರೆಂದು ತಾಲೂಕ ಕ ಸಾ ಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ತಿಳಿಸಿದ್ದಾರೆ.
ಈ ವೇಳೆ ಕ ಸಾ ಪ ಸಂಘಟನಾ ಕಾರ್ಯದರ್ಶಿ ಬಾಬುರಾವ್ ಮಹಾರಾಜರು, ಖಜಾನೆ ಅಧಿಕಾರಿ ಚಂದು ನಡುವಿನಮನಿ, ಹೊನವಾಡದ ಪ್ರಥಮ್ ಫೌಂಡೇಶನ್ ಅಧ್ಯಕ್ಷ ಬೀರಪ್ಪ ಖಂಡೇಕಾರ್ ಮುಂತಾದವರು ಇದ್ದರು.

