ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ವತಿಯಿಂದ ಹೊರಗುತ್ತಿಗೆಯ ಮೂಲಕ ಅರಣ್ಯ ದಿನಗೂಲಿ ಕಾರ್ಮಿಕರನ್ನು ನೇಮಿಸುವ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ಹಾಗೂ ಎಐಯುಟಿಯುಸಿ ಸಂಯೋಜಿತ ಸಂಯುಕ್ತ ಕೆಬಿಜೆಎನ್ ಎಲ್ ಆಲಮಟ್ಟಿ ಡಿ ಗ್ರುಪ್ ನೌಕರರ ಸಂಘ ಪ್ರತ್ಯೇಕವಾಗಿ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಂಗಳವಾರ ಎರಡು ದಿನ ಪೂರೈಸಿತು.
ಕಳೆದ ೨೫ ವರ್ಷಗಳಿಂದ ಇಲ್ಲಿಯ ನಾನಾ ಉದ್ಯಾನಗಳಲ್ಲಿ ಮುಳುಗಡೆ ಸಂತ್ರಸ್ತರೇ ಹೆಚ್ಚಾಗಿ ದಿನಗೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಆಲಮಟ್ಟಿಯ ಪರಿಸರವನ್ನು ಸುಂದರಗೊಳಿಸುವಲ್ಲಿ, ಉದ್ಯಾನವನ್ನು ನಿರ್ಮಿಸುವಲ್ಲಿ ಇವರ ಪಾತ್ರ ಹೆಚ್ಚಿದೆ. ಸುಮಾರು ೩೦೦ ಕ್ಕೂ ಅಧಿಕ ದಿನಗೂಲಿ ಕಾರ್ಮಿಕರಿಗೆ ಸದ್ಯ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ವತಿಯಿಂದಲೇ ವೇತನ ಪಾವತಿಸಲಾಗುತ್ತಿದೆ. ಆದರೆ ಈಗ ದಿನಗೂಲಿ ನೌಕರರನ್ನು ಹೊರಗುತ್ತಿಗೆ ಏಜೆನ್ಸಿಯ ಮೂಲಕ ನೇಮಕ ಮಾಡಲು ಟೆಂಡರ್ ಕರೆಯಲಾಗಿದೆ. ಇದರಿಂದಾಗಿ ೨೫ ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಇವರ ಸೇವೆಗೆ ಅಭದ್ರತೆ ಕಾಡುತ್ತಿದೆ. ಅದಕ್ಕಾಗಿ ಹೊರಗುತ್ತಿಗೆ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಬೇಕು, ಕಾರ್ಮಿಕರನ್ನು ಕಾಯಂಮಾಡಿಕೊಳ್ಳಬೇಕು, ಕೆಟಿಟಿಪಿ ಕಾಯ್ದೆಯ ನಿಯಮ ೪ ಜಿ ಅನ್ವಯ ಇದಕ್ಕೆ ವಿನಾಯ್ತಿ ನೀಡಬೇಕು, ದಿನಗೂಲಿ ನೌಕರರ ಕ್ಷೇಮಾಭಿವೃದ್ದಿ ಕಾಯ್ದೆ ೨೦೧೨ ನಿಯಮ ಈ ಕಾರ್ಮಿಕರಿಗೂ ಅನ್ವಯಿಸಬೇಕು ಎಂಬಿತ್ಯಾದಿ ಬೇಡಿಕೆಯನ್ನಿಟ್ಟುಕೊಂಡು ಅರಣ್ಯ ದಿನಗೂಲಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಗಳವಾರ, ದಲಿತ ಪ್ಯಾಂಥರ್ ಸಂಘಟನೆಯ ರಾಜ್ಯಾಧ್ಯಕ್ಷ ತಿಪ್ಪಣ್ಣ ಮಾದರ, ರೈತ ಮುಖಂಡ ಅರವಿಂದ ಕುಲಕರ್ಣಿ, ಡಿಎಸ್ ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಡಿ.ದೊಡಮನಿ ಮತ್ತೀತರರು ಎರಡು ಧರಣಿ ಸ್ಥಳಕ್ಕೂ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಎರಡೂ ಸಂಘಟನೆಯ ಮುಖಂಡರಾದ ವಿರೂಪಾಕ್ಷಿ ಮಾದರ, ಬಸಪ್ಪ ಗುಡಿಮನಿ, ಕಾಶೀನಾಥ ಬಿಂಗಿ, ದ್ಯಾಮಣ್ಣ ಬಿರಾದಾರ, ಬಾಸು ವಾಲಿಕಾರ, ಅಖಂಡೇಶ ಬಡಿಗೇರ, ಶಾಂತಾ ಚಿಮ್ಮಲಗಿ, ಅವ್ವಣ್ಣ ವಾಲೀಕಾರ, ರುಕ್ಮವ್ವ ಚವ್ಹಾಣ, ರೇಣುಕಾ ಚಲವಾದಿ, ಶೋಭಾ ಗೌಡರ, ಮೀನಾಕ್ಷಿ ರಾಠೋಡ, ಶಂಕ್ರಮ್ಮ ಕಂಬಳಶೆಟ್ಟಿ ಮತ್ತೀತರರು ಇದ್ದರು.

