ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಸಂಯೋಜಿತ ಜಿಲ್ಲಾ ಸಮಿತಿ ವಿಜಯಪುರ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಮುಂಭಾಗ ಮಂಗಳವಾರ ಅಹೋರಾತ್ರಿ ಧರಣಿ ಮುಷ್ಕರ ಹಮ್ಮಿಕೊಂಡಿದ್ದರು.
ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಮುಷ್ಕರ ನಿರತ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.
ಮುಷ್ಕರ ಬೆಂಬಲಿಸಿ ಸಿಐಟಿಯು ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಈ ಸಂದರ್ಭದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ ೫೦ ವರ್ಷಗಳು ಸಮೀಪಿಸುತ್ತಿದೆ. ಪಾಲನೆ, ಪೋಷಣೆ, ಶಿಕ್ಷಣ ಸಂವಿಧಾನ ಬದ್ಧ ಕರ್ತವ್ಯಗಳಿವೆ. ಮತ್ತು ೨೦೧೩ರ ಆಹಾರ ಭದ್ರತಾ ಕಾಯ್ದೆ, ೨೦೦೯ರ ಕಡ್ಡಾಯ ಶಿಕ್ಷಣ ಕಾಯ್ದೆಯ ಕರ್ತವ್ಯಗಳನ್ನು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿ ಕೇಂದ್ರಗಳ ಮುಖಾಂತರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಾರಿ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್ಗಳು ಇವರನ್ನು ೩ ಮತ್ತು ೪ ಗ್ರೇಡ್‌ನ ನೌಕರರನ್ನಾಗಿ ಪರಿಗಣಿಸಲು ಜಂಟೀ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಬೇಕೆಂದೂ ತೀರ್ಪು ನೀಡಿದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಲಹೀನಗೊಳಿಸಲು ಶಿಕ್ಷಣ ಇಲಾಖೆ ೪ ವರ್ಷದ ಮೇಲ್ಪಟ್ಟ ಮಕ್ಕಳನ್ನು ಸ್ಥಳಾಂತರಿಸಲು ಬೇರೆ ಬೇರೆ ಸ್ವರೂಪಗಳಲ್ಲಿ ಪ್ರಯತ್ನಿಸುತ್ತಿದೆ. ಇದಕ್ಕೆ ಮ.ಮ.ಅ. ಇಲಾಖೆ ತಡೆಹಾಕಿ ಅಂಗನವಾಡಿ ಕೇಂದ್ರಗಳನ್ನು ಪೂರ್ವಪ್ರಾರ್ಥಮಿಕ ಶಿಕ್ಷಣ ಕೇಂದ್ರಗಳಾಗಿ ಪರಿವರ್ತಿಸಲು ತೀರ್ಮಾನಿಸಿದೆ. ಇದೊಂದು ಐತಿಹಾಸಿಕ ತೀರ್ಮಾನವಾಗಿದೆ. ಆದರೆ ಇದಕ್ಕೆ ಬೇಕಾದಂತಹ ಹಣಕಾಸನ್ನು ಬಿಡುಗಡೆಗೊಳಿಸಿ, ಇದರ ಮೇಲ್ವಿಚಾರಣೆಗೆ IಅಆS ಪ್ರತ್ಯೇಕ ನಿರ್ದೆಶನಾಲಯ ಮಾಡಿದರೆ ಮಾತ್ರವೇ ಈ ತೀರ್ಮಾನಗಳನ್ನು ಪುಷ್ಟೀಕರಿಸಿದಂತಾಗುತ್ತದೆ ಎಂದರು.
ಅಂಗನವಾಡಿ ನೌಕರರೆ ಸಂಘದ ಜಿಲ್ಲಾ ಅಧ್ಯಕ್ಷೆ ಸುನಂದಾ ನಾಯಕ, ೧೯೪೮ ರ ಕನಿಷ್ಟ ವೇತನ ಕಾಯ್ದೆಯಡಿಯಲ್ಲಿ ತಿಳಿಸಿದಂತೆ ೪ ಗಂಟೆಗಿಂತ ಹೆಚ್ಚು ಕೆಲಸ ಮಾಡುವವರಿಗೆ ಕನಿಷ್ಠ ವೇತನ ನೀಡಬೇಕು ಎಂದೂ ತಿಳಿಸಿದೆ. ಆದರೆ ಯಾವುದೇ ಸರ್ಕಾರಗಳು ಇದನ್ನು ಜಾರಿ ಮಾಡಲು ಮುಂದಾಗಲಿಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗ ತನ್ನ ಪ್ರಚಾರದಲ್ಲಿ ಹೇಳಿದಂತೆ ೩೫೦೦ ರೂ ಮತ್ತು ೧೭೫೦ ರೂ. ವೇತನ ಹೆಚ್ಚಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲಾ ಗೌರವಾಧ್ಯಕ್ಷರು ಭಾರತಿ ವಾಲಿ ಮಾತನಾಡಿ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕೇಂದ್ರಗಳ ಬಾಡಿಗೆ ಹಣ ಪ್ರತಿ ತಿಂಗಳ ತೆಗೆಯಬೇಕು. ಗ್ಯಾಸ್ ಸಿಲಿಂಡರ್ ಹಣ ಖಾತೆಗೆ ಹಾಕುವ ಬದಲು ನೇರವಾಗಿ ಸಿಲಿಂಡರ್ ಗಳು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಬೇಕು ಸೇರಿದಂತೆ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ ತಳವಾರ ಮಾತನಾಡಿದರು.
ಈ ಸಂದರ್ಭದಲ್ಲಿ ಸುರೇಶ ಜೀಬಿ, ರೈತ ಮುಖಂಡರಾದ ಭೀಮರಾಯ ಪೂಜಾರಿ, ಜಿಲ್ಲಾ ಖಜಾಂಚಿ ಪ್ರತಿಭಾ ಕುರಡೆ, ಸಿಂದಗಿ ತಾಲೂಕಾಧ್ಯಕ್ಷರಾದ ಸರಸ್ವತಿ ಮಠ, ವಿಜಯಪು ತಾಲೂಕಾ ಕಾರ್ಯದರ್ಶಿ ಸುವರ್ಣಾ ಹಲಗಲಿ, ಇಂಡಿ ತಾಲೂಕಾ ಕಾರ್ಯದರ್ಶಿ ಗಿರೀಜಾ ಸಕ್ರಿ, ಚಡಚಣ ತಾಲೂಕಾ ಕಾರ್ಯದರ್ಶಿ ಶೋಭಾ ಕಬಾಡೆ, ಬ.ಬಾಗೇವಾಡಿ ತಾಲೂಕಾ ಅಧ್ಯಕ್ಷರಾದ ವಿಜಯಲಕ್ಷ ಹಿಪ್ಪರಗಿ, ಬ.ಬಾಗೇವಾಡಿ ಕಾರ್ಯದರ್ಶಿ ಚೌಡಮ್ಮ ಕಡಕೋಳಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

