ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮಾನವನ ಜೀವನದಲ್ಲಿ ಅಮೃತದಂತಹ ರಸವನ್ನು ಸವಿಯುವ ನಗು ಇರಬೇಕು. ಅಂತಹ ನಗುವಿನ ಮೊಗದಲ್ಲಿ ಕಷ್ಟಗಳು ಮರೆಯಾಗಿ ಸಮಾಜಮುಖಿ ಕಾರ್ಯದಲ್ಲಿ ಎದ್ದು ಕಾಣುವಂತೆ ಕಾರ್ಯಗಳು ನಡೆಯುತ್ತವೆ. ಮನುಷ್ಯನ ಸಾಮಾಜಿಕ ಜೀವನ ಉತ್ತಮಗೊಳ್ಳಲು ಕೃತಿಗಳು, ಕವನಗಳು, ಚುಟುಕುಗಳು, ಹಾಸ್ಯಮಯವಾಗಿದ್ದರೆ ಅಂತಹ ಪುಸ್ತಕಗಳು ಚೆನ್ನಾಗಿರುತ್ತದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ಬನಶಂಕರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಶಿಕ್ಷಕಿ ಮಹಿಳಾ ಸಾಹಿತಿ ರುದ್ರಮ್ಮ ಗಿಡ್ಡಪ್ಪಗೋಳ ರವರ ನಗುವೇ ಸ್ವರ್ಗ ಎಂಬ ಚೊಚ್ಚಲ ಕೃತಿಯ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತಿದ್ದರು.
ನಗು ಎನ್ನುವದು ಮನುಷ್ಯನ ಆರೋಗ್ಯಕ್ಕೆ ಉತ್ತಮವಾದ ಯೋಗ ಇಂಥಹ ನಗುವಿನ ಸಂಧರ್ಬಗಳನ್ನು ಸೃಷ್ಟಿಸುತ್ತಿದ್ದ ಹಳೆ ತಲೆಮಾರಿನ ಒಕ್ಕೂಟ ವ್ಯವಸ್ಥೆ ಇಂದು ಮರೆಯಾಗಿದೆ ಯುವಕರು ಆಧುನಿಕ ಶೈಲಿಯ ಜಗತ್ತಿನಲ್ಲಿ ಬದುಕುವ ಒತ್ತಡದ ಸಮಯದಲ್ಲಿಯೂ ಹಾಸ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಆಯುಷ್ಯ ವೃದ್ದಿಯಾಗುವದು ಆದ್ದರಿಂದ ನಗುವೇ ಸ್ವರ್ಗ ಎಂಬ ಈ ಕೃತಿಯನ್ನು ಪ್ರತಿಯೊಬ್ಬರೂ ಓದಿ ಬರಹಗಾರರಿಗೆ ಪ್ರೋತ್ಸಾಹಿಸಬೇಕು ಎಂದರು.
ಮಕ್ಕಳ ಸಾಹಿತಿ ಫ.ಗು ಸಿದ್ದಾಪೂರ ಅವರು ರುದ್ರಮ್ಮ ಗಿಡ್ಡಪ್ಪಗೋಳ ಅವರ ಚೊಚ್ಚಲ ಕೃತಿಗೆ ಮುನ್ನುಡಿ ಬರೆದು ಲೋಕಾರ್ಪಣೆ ಮಾಡಿ ಮಾತನಾಡಿ ಬಂಗಾರದ ಗಣಿ ಕೊಲಾರ ನಗರಕ್ಕೂ ಉತ್ತರ ಕರ್ನಾಟಕದ ಕೊಲ್ಹಾರ ಪಟ್ಟಣಕ್ಕೂ ಹ ಒತ್ತಕ್ಷರ ಒಂದೇ ಫರಕ ಎನಿಸಿದರೂ ಅದು ಚಿನ್ನದ ಮೂಲಕ ಹೆಸರುವಾಸಿಯಾದರೆ ಈ ಕೊಲ್ಹಾರ ಕೊರ್ತಿ ಕೊಲ್ಹಾರ ಸೇತುವೆ, ಕೆನೆಮೊಸರಿನ ಸವಿ, ರುಚಿಯಾದ ಪೇರಲ ಹಣ್ಣು, ಅವರೆಕಾಳು, ಬದನೇಕಾಯಿ ಬೆಳೆಗಳಿಗೆ ಪ್ರಸಿದ್ದಿಯನ್ನು ಹೊಂದಿದೆ ಅಲ್ಲದೇ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಸಾಹಿತಿ ಅದೃಷ್ಯಕವಿಯ ಮತ್ತು ಡಾ|| ಕೃಷ್ಣಕೊಲ್ಹಾರ ಕುಲಕರ್ಣಿಯವರ ಕರ್ಮ ಭೂಮಿಯಾಗಿದ್ದು ಅವರಂತೆ ನಾಡಿಗೆ ಹೆಸರಾಗುವ ಉತ್ತಮ ಸಾಹಿತಿಗಳು ಬರಹಗಾರರು ಉದಯವಾಗಲಿ ಎಂದು ಹಾರೈಸಿದರು.
ಸಾನಿಧ್ಯ ವಹಿಸಿ ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ಮಾತನಾಡಿ ನಗುವೇ ಸ್ವರ್ಗ ಕೃತಿಯು ಮಾನವನ ಬದುಕಿನ ಮೌಲ್ಯಗಳನ್ನು ತಿಳಿಸುವ ಉತ್ತಮ ಕವನಗಳನ್ನು ಒಳಗೊಂಡಿದೆ. ಮಾನವನ ಬದುಕನ್ನು ರೂಪಿಸುವಲ್ಲಿ ಈ ಕೃತಿ ಸಹಕಾರಿಯಾಗುತ್ತದೆ ಎಂದರು.
ಸಾನಿಧ್ಯವನ್ನು ಡಾ.ಕೈಲಾಸನಾಥ ಮಹಾಸ್ವಾಮಿಗಳು, ಡಾ.ಅಲ್‌ಹಾಜ್ ಭಕ್ತಿಯಾರಖಾನ ಪಠಾಣ, ಗಿರಿಜಾ ಪಾಟೀಲ, ಕೆ.ಎಸ್. ದೇಸಾಯಿ, ಬಿ.ಯು. ಗಿಡ್ಡಪ್ಪಗೋಳ, ಬಿ.ಎಸ್. ನಿಂಬಾಳ್ಕರ, ಕೆ.ಯು. ಗಿಡ್ಡಪ್ಪಗೋಳ, ಟಿ.ಟಿ. ಹಗೇದಾಳ, ಉಸ್ಮಾನ್ ಪಟೇಲ್, ಟಿ.ಪಿ. ದಳವಾಯಿ, ಕಲ್ಲಪ್ಪ ಗಿಡ್ಡಪ್ಪಗೋಳ ಇತರರು ಉಪಸ್ಥಿತರಿದ್ದರು. ಸಮಾಜದ ಕೆಲವು ಗಣ್ಯಮಾಣ್ಯರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಉ ಗಿಡ್ಡಪ್ಪಗೋಳ ಸ್ವಾಗತಿಸಿದರು. ಮಂಜುನಾಥ ಮಟ್ಯಾಳ ವಂದಿಸಿದರು. ಶಿಕ್ಷಕಿ ಎಸ್.ಎಂ.ಬಾಟಿ ನಿರೂಪಿಸಿದರು.
ಪೋಟೊ: ೧೬ಕೆಎಲ್‌ಆರ್‌೦೧- ಪಟ್ಟಣದ ಬನಶಂಕರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ರುದ್ರಮ್ಮ ಗಿಡ್ಡಪ್ಪಗೋಳ ರವರ ನಗುವೇ ಸ್ವರ್ಗ ಕೃತಿಯನ್ನು ಶ್ರೀಗಳು, ಸಾಹಿತಿಗಳು, ಗಣ್ಯರು ಲೋಕಾರ್ಪಣೆಗೊಳಿಸಿದರು.

