ತಿಕೋಟಾ ತಾಲೂಕಾದ್ಯಂತ ವೈಯಕ್ತಿಕ ಶೌಚಾಲಯಗಳ ಕಾರ್ಯಾದೇಶ ವಿತರಣಾ ಅಭಿಯಾನ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಇಂದು ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರು ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯ ಜಿಲ್ಲಾ ನೂಡಲ್ ಅಧಿಕಾರಿಗಳಾದ ಬಿ.ಎಸ್.ರಾಠೋಡ ಸಾಹೇಬರು ತಾಲೂಕಿನ ಟಕ್ಕಳಕಿ ಮತ್ತು ಲೋಹಗಾಂವ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವೈಯಕ್ತಿಕ ಶೌಚಾಲಯಗಳ ಕಾರ್ಯಾದೇಶ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಗ್ರಾಮದ ಮನೆ-ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಯೋಜನೆಯ ಕುರಿತು ಮಾಹಿತಿ ಒದಗಿಸುವದರ ಜೊತೆಗೆ ಫಲಾನುಭವಿಗಳಿಗೆ ಕಾರ್ಯಾದೇಶಗಳನ್ನು ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು: ನಮ್ಮ ಗ್ರಾಮದ ಹಿರಿಮೆಯ ಸಲುವಾಗಿ ನಾವೆಲ್ಲರೂ ಗ್ರಾಮಗಳ ಸ್ಚಚ್ಚತೆ ಹಾಗೂ ಆರೋಗ್ಯಕರ ಜೀವನ ನಡೆಸಲು ಪ್ರತಿದಿನ ಶೌಚಾಲಯ ಬಳಕೆ ಮಾಡುವುದು ಬಹಳ ಮುಖ್ಯವಾಗಿದೆ ಎಂದರು. ಪ್ರತಿ ಮನೆ ಮನೆಯಲ್ಲಿಯೂ ಶೌಚಾಲಯ ಕಟ್ಟಿಸಿಕೊಂಡು ಪ್ರತಿಯೊಬ್ಬರು ಶೌಚಾಲಯವನ್ನು ಬಳಸಬೇಕು, ಸ್ವಚ್ಛತೆಯಿಂದ ನಿರ್ವಹಣೆ ಮಾಡಬೇಕು. ಈ ಮೂಲಕ ಬಯಲು ಬರ್ಹಿದೆಸೆ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ತಿಳಿಸಿದರು. ಬಯಲಿನಲ್ಲಿ ಶೌಚಕ್ಕೆ ಹೋಗುವುದರಿಂದ ಹಲವಾರು ರೋಗಗಳು ಹರಡಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಜೊತೆಗೆ ಬಯಲು ಬಹಿರ್ದೆಶೆಯಿಂದ ಹಲವಾರು ಅನಾಹುತಗಳು ನಡೆದಿರುವ ನಿರ್ದಶನಗಳು ನಮ್ಮ ಮುಂದೆ ಇವೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸಂಭವನೀಯ ಅನಾಹುತಗಳನ್ನು ತಡೆಯಲು ಬಯಲು ಶೌಚಾಲಯ ತ್ಯಜಿಸಿ, ಉತ್ತಮ ಹಾಗೂ ಸ್ಚಚ್ಚವಾದ ಶೌಚಾಲಯಗಳನ್ನು ಬಳಸಬೇಕು. ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಯಾವ ರೀತಿ ಸ್ವಚ್ಚತೆ ಕಾಪಾಡುತ್ತೇವೆಯೋ ಅದೇರೀತಿ ಮನೆಯ ಸುತ್ತಮುತ್ತಲೂ ಹಾಗೂ ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಅಕ್ಕಮಹಾದೇವಿ ಪವಾರ, ಪದ್ಮಿನಿ ಬಿರಾದಾರ, ಜಿಲ್ಲಾ ಪಂಚಾಯತಿಯ ರಾಜು ಚವ್ಹಾಣ ಸೇರಿದಂತೆ ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕರು ಇದ್ದರು.

