ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಗೌರಿ-ಶಂಕರ ದೇವಸ್ಥಾನದ ಜಾತ್ರಾಮಹೋತ್ಸವದಂಗವಾಗಿ ಸೋಮವಾರ ದ್ಯಾಮವ್ವನ ಸೋಗಿನ ಮೆರವಣಿಗೆಯು ಸಂಭ್ರಮದಿಂದ ಜರುಗಿತು.
ಜಾತ್ರೆಯಂಗವಾಗಿ ಗೌರಿ-ಶಂಕರ ದೇವಸ್ಥಾನದಲ್ಲಿ ಕಳೆದ ಹತ್ತು ದಿನಗಳಿಂದ ಪ್ರತಿಷ್ಠಾಪಿಲಾಗಿರುವ ಗೌರಿ-ಶಿವ-ಗಂಗೆ-ನಂದಿ ಮೂರ್ತಿಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಗರ್ಭಗುಡಿಯಲ್ಲಿರುವ ನೂತನ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಮಹಿಳೆಯರು ತಮ್ಮ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ತೆರಳಿ ದೇವರಿಗೆ ನೈವೇದ್ಯ ಅರ್ಪಿಸಿದರು. ಮಹಿಳೆಯರು ಗೌರಿಗೆ ಉಡಿ ತುಂಬಿ ಧನ್ಯತಾ ಭಾವ ಅನುಭವಿಸಿದರು.
ಮಧ್ಯಾನ್ಹ ಒಂದೂವರೆ ಗಂಟೆ ಸುಮಾರಿಗೆ ಪಟ್ಟಣದ ಮಾರುತಿ ದೇವಸ್ಥಾನದ ಮುಂಭಾಗದಿಂದ ಆರಂಭವಾದ ದ್ಯಾಮವ್ವನ ಸೋಗಿನ ಮೆರವಣಿಗೆಯು ಸಂಜೆ ಗೌರಿ-ಶಂಕರ ದೇವಸ್ಥಾನಕ್ಕೆ ತಲುಪಿತು. ಮೆರವಣಿಗೆಯುದ್ದಕ್ಕೂ ಡೊಳ್ಳಿನ ಮೇಳ, ಹಲಗೆ ನಾದಕ್ಕೆ ಜನರು ಹೆಜ್ಜೆ ಹಾಕಿ ಸಂಭ್ರಮಿಸಿದರು. ದ್ಯಾಮವ್ವನ ಸೋಗು ಸಾಗುವ ಮಾರ್ಗದ ಎರಡು ಬದಿಗಳಲ್ಲಿ ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಜನರು ನಿಂತು ಮೆರವಣಿಗೆಯನ್ನು ವೀಕ್ಷಿಸಿದರು.
ಈ ಸಲ ಬಸಯ್ಯ ಪೂಜಾರಿ(ಮಠಪತಿ) ದ್ಯಾಮವ್ವನ ಸೋಗು ಹಾಕಿದ್ದರು. ಇವರಿಗೆ ಹಣಮಂತ ಕಾಮನಕೇರಿ ಸಾಥ್ ನೀಡಿದರು. ದ್ಯಾಮವ್ವನ ಸೇವಕಿಯರಾಗಿ ಬಾಲಕರಾದ ನಿತೀಶ ಒಡೆಯರ, ಕಿರಣ ಕಾಮನಕೇರಿ ಸೋಗು ಹಾಕಿದ್ದರೆ, ಮಹೇಶ ಅವಟಿ ಪೂಜಾರಿ ಸೋಗು ಹಾಕಿದ್ದರು.
ದ್ಯಾಮವ್ವ ಸೋಗು, ಸೇವಕಿಯರ, ಪೂಜಾರಿ ಅಲಂಕಾರ-ತಯಾರಿಯನ್ನು ವಿಶ್ವನಾಥಯ್ಯ ಕಾಳಹಸ್ತೇಶ್ವರಮಠ, ರಾಹುಲ ಜಗತಾಪ, ಶಿವಪ್ಪ ಹಡಪದ, ಗೋಪಾಲ ಮ್ಯಾಗೇರಿ, ಬಸವಂತ ಅಡಗಿಮನಿ ನೆರವೇರಿಸಿದರು. ದ್ಯಾಮವ್ವ ಸೋಗಿನ ಬಂಡಿಯನ್ನು ಹುಲ್ಲಪ್ಪ ಜಾಡರ, ಶ್ರೀಶೈಲ ಕೋಣಿನ, ಶಿವಾನಂದ ಸಾರವಾಡ, ಶಿವಾನಂದ ಬೇವನೂರ, ಸುರೇಶ ಪಡಶೆಟ್ಟಿ, ಬಸವರಾಜ ಯಳಮೇಲಿ, ಶ್ರೀಕಾಂತ ಬಾಡಗಿ, ಈರಪ್ಪ ಗಬ್ಬೂರ ಇತರರು ಎಳೆದರು. ದ್ಯಾಮವ್ವ ಸೋಗಿನ ಮೆರವಣಿಗೆಯಲ್ಲಿ ಸಂಗಪ್ಪ ವಾಡೇದ, ಬಸಣ್ಣ ದೇಸಾಯಿ, ಮಹಾಂತೇಶ ಹಂಜಗಿ, ಶ್ರೀಶೈಲ ಹಿರೇಮಠ, ಬಾಬು ಕುಂಟೋಜಿ,ಮಲ್ಲಯ್ಯ ನರಸಲಗಿಮಠ, ಶಿವಪ್ಪ ಖ್ಯಾಡದ, ಶಿವಾನಂದ ಸಾರವಾಡ, ಕಾಳಹಸ್ತೇಶ್ವರಯ್ಯ ಕಾಳಹಸ್ತೇಶ್ವರಮಠ, ಎ.ಐ.ಮಠಪತಿ, ಶಿವಪ್ಪ ಹೂಗಾರ, ಶರಣಪ್ಪ ನಾಡಗೌಡ, ಪಾವೆಡಪ್ಪ ಕರಮಾಳಕರ, ಮಲಕಾಜಿ ಕುಳಗೇರಿ, ಮುರಗೆಪ್ಪ ಪೂಜಾರಿ, ಅಪ್ಪಾಸಾಹೇಬ ಕಲ್ಲೂರ, ಬೀರಪ್ಪ ಪೂಜಾರಿ, ವಿರೇಶ ಹಿರೇಮಠ, ಮಲಕಾಜಿ ಹಂಗರಗಿ, ಮುರೆಗಪ್ಪ ಪೂಜಾರಿ, ಸಿದ್ದಣ್ಣ ಹಿರೇಕುರುಬರ ಸೇರಿದಂತೆ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು.
ದ್ಯಾಮವ್ವನ ಸೋಗಿನ ಮೆರವಣಿಗೆ ಗೌರಿ-ಶಂಕರ ದೇವಸ್ಥಾನಕ್ಕೆ ತಲುಪಿದ ನಂತರ ದೇವಸ್ಥಾನದಲ್ಲಿ ಜಾತ್ರೆಯಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಶಿವ-ಗಂಗೆ-ನಂದಿ ದೇವರುಗಳನ್ನು ವಿವಿಧ ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಯಲ್ಲಿ ಸಂಜೆ ವಿಸರ್ಜಿಸಲಾಯಿತು.
ಮೆರವಣಿಗೆ ಸಾಗುವ ರಸ್ತೆಯ ಎರಡು ಬದಿಯಲ್ಲಿ ಜಮಾಯಿಸಿದ್ದ ಜನರು ಉತ್ತತ್ತಿ, ಚುನಮರಿ, ಬಾರಿಕಾಯಿ ತೂರಿ ದೇವರಿಗೆ ನಮಸ್ಕರಿಸಿ ಭಕ್ತಿ ಸಮರ್ಪಿಸಿದ್ದು ಕಂಡುಬಂದಿತ್ತು.

