ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಜಾಲವಾದ ಹಾಗೂ ಕೋರವಾರ ಗ್ರಾಮಗಳ ನಡುವಿನ ರಸ್ತೆ ತಗ್ಗು ತುಂಬುವ ತುಂಡು ಗುತ್ತಿಗೆ ಕಾಮಗಾರಿ ಬೇಕಾಬಿಟ್ಟಿಯಾಗಿ ಕೈಗೊಂಡಿದ್ದು ಉತ್ತಮವಾಗಿ ನಿರ್ವಹಿಸಲು ಕೋರವಾರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಜಾಲವಾದ ಮತ್ತು ಕೋರವಾರ ಗ್ರಾಮಗಳ ನಡುವಿನ ೦೭ ಕಿ,ಮೀ ರಸ್ತೆ ತಗ್ಗು ದಿನ್ನೆಗಳಿಂದ ತುಂಬಿದ್ದು ಬಹುತೇಕ ಹಾಳಾಗಿದೆ. ಈಗ ತಗ್ಗುದಿನ್ನೆಗಳನ್ನು ತುಂಬಿ ರಸ್ತೆ ಸರಿಪಡಿಸುವ ಕಾಮಗಾರಿ ಆರಂಭಗೊAಡಿದೆ. ಆದರೆ ಕಾಮಗಾರಿ ಬೇಕಾಬಿಟ್ಟಿಯಾಗಿ ನಡೆಸಲಾಗುತ್ತಿದೆ. ಈಗಾಗಲೇ ಬಹುತೇಕ ರಸ್ತೆ ಪೂರ್ಣಗೊಳಿಸುವ ಹಂತದಲ್ಲಿದ್ದು ಕೇವಲ ದೊಡ್ಡ ಗುಂಡಿಗಳನ್ನು ಮಾತ್ರ ನೆಪ ಮಾತ್ರಕ್ಕೆ ಮುಚ್ಚಲಾಗಿದೆ. ರಸ್ತೆಯುದ್ದಕ್ಕೂ ಇರುವ ಹಲವು ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ. ಇನ್ನೂ ಈಗ ಮಾಡಿರುವ ತುಂಡು ಗುತ್ತಿಗೆ ಕಾಮಗಾರಿ ಕಳಪೆ ಮಟ್ಟದ್ದಾಗಿದೆ. ಹೀಗಾದರೆ ರಸ್ತೆ ಸರಿಪಡಿಸುವ ಅಗತ್ಯವಾದರೂ ಏನಿತ್ತು? ಎಂದು ಗ್ರಾಮದ ಸಂಗಯ್ಯ ಮೇಲಿನಮಠ, ಗುಂಡಪ್ಪಗೌಡ ಬೋರಾವತ್ ಪ್ರಶ್ನಿಸಿ ತಮ್ಮ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸಿದರು.
ದೇವರಹಿಪ್ಪರಗಿ ಪಟ್ಟಣದಿಂದ ದೇವೂರ, ಮಣೂರ, ಜಾಲವಾದ ಗ್ರಾಮಗಳವರೆಗೆ ರಸ್ತೆ ಅಷ್ಟೇನೂ ಹಾಳಾಗಿಲ್ಲ. ಅಲ್ಲಿ ಕೆಲವು ಕೆಲವು ಗುಂಡಿಗಳನ್ನು ಮುಚ್ಚಿ ಉತ್ತಮ ಕಾಮಗಾರಿ ಮಾಡಿದ್ದಾರೆ. ಆದರೆ ಅತೀ ಹೆಚ್ಚು ಹಾಳಾಗಿರುವ ಕೋರವಾರದ ರಸ್ತೆಯನ್ನು ನಿರ್ಲಕ್ಷಿಸಿ ಅಲ್ಲಲ್ಲಿ ನೆಪ ಮಾತ್ರಕ್ಕೆ ರಸ್ತೆ ಸರಿ ಪಡಿಸುವ ಕಾರ್ಯ ನಡೆದಿದೆ. ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೆ ಸ್ಥಳ ಪರಿಶೀಲನೆ ಮಾಡಿ ಅಗತ್ಯ ಕ್ರಮ ವಹಿಸಬೇಕು. ಹಾಗೂ ಸುಸಜ್ಜಿತ ರಸ್ತೆ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಗ್ರಾಮದ ಸಂಗಮೇಶ ಜಂಬುಗೋಳ, ಸಂಗಪ್ಪ ಹುಣಸಗಿ, ಗುರಣ್ಣ ಅವುಟಿ, ಅಪ್ಪುಗೌಡ ಪಾಟೀಲ, ಬಾಪುಗೌಡ ಬಿರಾದಾರ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.

