ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ಆರೋಪಿಯ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ ಪ್ರಕರಣ ದೇವರಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯ ಬೋರಗಿ ಗ್ರಾಮದಲ್ಲಿ ಜರುಗಿದೆ.
ಸಿಂದಗಿ ತಾಲ್ಲೂಕಿನ ಬೋರಗಿ ಗ್ರಾಮದಲ್ಲಿ ಭಾನುವಾರ ಈ ಘಟನೆ ಜರುಗಿದೆ. ಗ್ರಾಮದ ಈರಣ್ಣ ರಟಗಲ್ ಎಂಬ ಕಾಂಗ್ರೆಸ್ ಮುಖಂಡ ತನ್ನ ಫೇಸ್‌ಬುಕ್ ಜಾಲತಾಣದಲ್ಲಿ ಪಂಚಮಸಾಲಿ ಸಮಾಜದ ೨ಎ ಮೀಸಲಾತಿ ಅಂಗವಾಗಿ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಲಾಠಿ ಚಾರ್ಜ್ ಮಾಡಿಸಿದ ಮುಖ್ಯಮಂತ್ರಿ ಎಂಬ ಹೇಳಿಕೆಯೊಂದಿಗೆ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ಭಾಷೆಯನ್ನು ಬಳಸಿ ಪೋಸ್ಟ್ ಮಾಡಿದ್ದು, ಇದನ್ನು ಖಂಡಿಸಿ ಬೋರಗಿ ಗ್ರಾಮದ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ಈರಣ್ಣ ರಟಗಲ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಆರೋಪಿಯನ್ನು ಗಡಿಪಾರು ಮಾಡಲು ಒತ್ತಾಯಿಸಿ ಗ್ರಾಮದಲ್ಲಿ ಪ್ರತಿಭಟನೆ ಕೈಗೊಂಡರು.
ಪ್ರತಿಭಟನೆ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಮುಂದುವರೆದ ಹಿನ್ನೆಲೆಯಲ್ಲಿ ಸುದ್ದಿ ತಿಳಿದ ದೇವರಹಿಪ್ಪರಗಿ ಪಿಎಸ್‌ಐ ಬಿ.ಎ.ತಿಪರಡ್ಡಿ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
