ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮಕ್ಕಳಲ್ಲಿ ಕುತೂಹಲ ಕೆರಳಿಸುವ, ಅವರು ಏಕಾಗ್ರತೆಯಿಂದ ನೋಡುವ, ಮಾನವೀಯ ಮೌಲ್ಯಗಳನ್ನು ಬೀರುವಂತಹ ಅಂಶಗಳು ಮಕ್ಕಳ ಸಾಹಿತ್ಯದಲ್ಲಿರಬೇಕು. ಈ ನಿಟ್ಟಿನಲ್ಲಿ ಇಂದು ಬಿಡುಗಡೆಗೊಂಡ ಇಂದುಮತಿ ಲಮಾಣಿಯವರ ಕಾಡಿನ ಕರಡಿ ನಾಡಿಗೆ ಬಂತು ಶಿಶು ಕಥಾ ಸಂಕಲನ ಒಳಗೊಂಡಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಸಾಹಿತಿ ಜಂಬುನಾಥ ಕಂಚ್ಯಾಣಿ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ವಿಜಯಪುರದ ಗೋರಬಾಯಿ ಟೋಳಿ ಮಹಿಳಾ ಸಮೂಹ ಸಂಸ್ಥೆಯ ಸಹಯೋಗದಲ್ಲಿ ದಿ.ಶಂಕರ ಡಾಕಪ್ಪ ಲಮಾಣಿ ಸ್ಮರಣಾರ್ಥ ಶನಿವಾರ ಹಮ್ಮಿಕೊಂಡಿದ್ದ ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರಧಾನ ಮತ್ತು ಇಂದುಮತಿ ಲಮಾಣಿಯವರ ಕಾಡಿನ ಕರಡಿ ನಾಡಿಗೆ ಬಂತು ಶಿಶು ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಬುದ್ಧಿಮಟ್ಟವನ್ನು ವಿಕಾಸಗೊಳಿಸುವ ಶಕ್ತಿ ಸಾಮರ್ಥ್ಯ ಮಕ್ಕಳ ಸಾಹಿತ್ಯದಲ್ಲಿರಬೇಕು. ಮಕ್ಕಳ ಒಡನಾಡಿಗಳು, ಅವರ ಪ್ರೀತಿ ವಿಶ್ವಾಸಗಳಿಸಿದ್ದರೆ ಮಾತ್ರ ಅಂತಹವರಿಂದ ಉತ್ತಮ ಮಕ್ಕಳ ಸಾಹಿತ್ಯ ಹೊರಬರುತ್ತದೆ ಎಂದರು.
ಗ್ರಾಮೀಣ ಭಾಗದಲ್ಲಿ ಜನಿಸಿದ ಇಂದುಮತಿ ಲಮಾಣಿ ಅವರು ಹಲವಾರು ಕೃತಿಗಳನ್ನು ರಚಿಸಿ ಸಾಹಿತ್ಯ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಇಂದು ಬಿಡುಗಡೆಗೊಂಡ ಅವರ ಶಿಶು ಕಥಾ ಸಂಕಲನ ಕಾಡಿನ ಕರಡಿ ನಾಡಿಗೆ ಬಂತು ಕೃತಿಯಲ್ಲಿ ಮೂಢನಂಬಿಕೆಗಳನ್ನು ಯಾವ ರೀತಿಯಿಂದಲೂ ನಂಬಬಾರದು ಸೇರಿದಂತೆ ಹಲವಾರು ಅಂಶಗಳು ಮಕ್ಕಳು ಕುತೂಹಲದಿಂದ ಓದುವಂತೆ ಕಥೆಗಳು ಮೂಡಿ ಬಂದಿವೆ ಎಂದರು.
ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಬಾಬು ಕೃಷ್ಣಮೂರ್ತಿ ಮಾತನಾಡಿ, ಸಾಹಿತಿಗಳಿಗೆ ಜಾತಿಬೇಧಭಾವ ಇರುವದಿಲ್ಲ. ಸಾಹಿತ್ಯಕ್ಕೆ ಬಡತನ-ಶ್ರೀಮಂತಿಕೆ ಇರುವದಿಲ್ಲ. ಸಾಹಿತ್ಯಾಸಕ್ತರೆಲ್ಲರೂ ಸರಸ್ವತಿಯ ಆರಾಧಕರು. ಈ ಸಾಲಿನಲ್ಲಿ ಗ್ರಾಮೀಣ ಸೊಗಡಿನಲ್ಲಿ ಬೆಳೆದ ಬಂಜಾರ ಸಮುದಾಯಕ್ಕೆ ಸೇರಿದ ಸಾಹಿತ್ಯ ಕ್ಷೇತ್ರಕ್ಕೆ ಹಲವಾರು ಕೃತಿಗಳನ್ನು ನೀಡಿರುವ ಇಂದುಮತಿ ಲಮಾಣಿ ಅವರು ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು. ಇವರಿಂದ ಸಮಾಜಕ್ಕೆ ಆದರ್ಶಪ್ರಾಯವಾಗುವಂತಹ ಒಳ್ಳೆಯ ಕೃತಿಗಳು ಮುಂಬರುವ ದಿನಗಳಲ್ಲಿಯೂ ಬರುವಂತಾಗಲೆಂದು ಆಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರದ ಅಂಬಾಭವಾನಿ ಮಹಿಳಾ ಸಂಘದ ಅಧ್ಯಕ್ಷೆ ಸುಧಾ ಬಿಜ್ಜರಗಿ ಮಾತನಾಡಿ, ಜಿಲ್ಲೆಯ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿರುವ ಇಂದುಮತಿ ಲಮಾಣಿ ಅವರು ಇದುವರೆಗೂ ಒಳ್ಳೆಯ ಕೃತಿಗಳನ್ನು ನೀಡಿದ್ದಾರೆ. ಇವರಿಂದ ಉತ್ತಮ ಕೃತಿಗಳು ಮೂಡಿಬರುವಂತಾಗಲೆಂದರು.
ಸಾಹಿತಿ ಕಮಲಾ ಗೆಜ್ಜಿ ಕಾಡಿನ ಕರಡಿ ನಾಡಿಗೆ ಬಂತು ಶಿಶು ಕಥಾ ಸಂಕಲನ ಕೃತಿ ಪರಿಚಯಿಸಿದರು. ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ, ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ತಿನ ವಿಘ್ನೇಶ್ವರ ಮಾತನಾಡಿದರು.
ವೇದಿಕೆಯಲ್ಲಿ ಜನಪದ ಕಲಾವಿದರಾದ ವಸಂತ ಚವ್ಹಾಣ, ಆರ್.ಬಿ.ನಾಯಕ, ಡಾವಣಗೇರಿ ಡಿವೈಎಸ್ಪಿ ಬಿ.ಎಸ್.ಬಸವರಾಜ, ತುಕರಾಮ ರಜಪೂತ, ರಾಜು ರಾಠೋಡ, ಶಾಂತಾ ಪಾಟೀಲ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ಇತರರು ಇದ್ದರು. ವಿವೇಕಾನಂದ ಕಲ್ಯಾಣಶೆಟ್ಟಿ ಸ್ವಾಗತಿಸಿದರು. ಆರ್.ಜಿ.ಅಳ್ಳಗಿ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲೆಯ ಎಲ್ಲ ತಾಲೂಕುಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

