ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಾಸಕ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಿದ್ದಸಿರಿ ಆಡಳಿತ ಮಂಡಳಿಯ ನಿರ್ಣಯದಂತೆ, ನಗರದಲ್ಲಿ ಇದೇ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್-2024ಕ್ಕೆ ಸಿದ್ಧಸಿರಿ ಸೌಹಾರ್ದ್ ಸಹಕಾರಿ ವತಿಯಿಂದ ರೂ.10 ಲಕ್ಷ ದೇಣಿಗೆಯ ಚೆಕ್ ನ್ನು ಸೋಮವಾರ ಸಹಕಾರಿಯ ನಿರ್ದೇಶಕಿ ಶೈಲಜಾ ಪಾಟೀಲ ಯತ್ನಾಳ ರವರು ವೃಕ್ಷೋತ್ಥಾನ್ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು, ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ಜಿಲ್ಲೆ ಹಾಗೂ ನಗರ ಮತಕ್ಷೇತ್ರದಲ್ಲಿ ಅರಣ್ಯ ವೃದ್ಧಿಗಾಗಿ ಹಾಗೂ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ನಿರಂತರವಾಗಿ ವಿವಿಧ ರೀತಿಯಲ್ಲಿ ಸಹಾಯ ಸಹಕಾರ ನಡೆಯುತ್ತಲೇ ಇದೆ. ಕಳೆದ ಜುಲೈ ತಿಂಗಳಲ್ಲಿ ವಿಜಯಪುರ ನಗರ ಮತಕ್ಷೇತ್ರದಲ್ಲಿ ಸಸಿಗಳನ್ನು ಬೆಳೆಸಲು ಹಾಗೂ ಸಂರಕ್ಷಣೆಗಾಗಿ ರೂ.10 ಲಕ್ಷ, ಅದಕ್ಕಿಂತ ಮೊದಲು ಟ್ರೀಗಾರ್ಡ್ ವ್ಯವಸ್ಥೆ ಕಲ್ಪಿಸಲು ರೂ.10 ಲಕ್ಷ ಜಿಲ್ಲಾಡಳಿತಕ್ಕೆ ನೀಡಲಾಗಿತ್ತು. ಅದೇ ರೀತಿ ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮಹತ್ತರ ಕಾರ್ಯ ಮಾಡುತ್ತಿರುವ ವೃಕ್ಷೋತ್ಥಾನ್ ಹೆರಿಟೆಜಗೆ ಈ ಹಿಂದೆಯೂ ರೂ.10 ಲಕ್ಷ ದೇಣಿಗೆ ನೀಡಿದಂತೆ, ಪ್ರಸಕ್ತ ವರ್ಷ ಕೂಡ ಮತ್ತೆ ರೂ.10 ಲಕ್ಷ ನೀಡಲಾಗಿದೆ. ಪರಿಸರಕ್ಕೆ ಹೆಚ್ಚಿನ ಆದ್ಯತೆ ಹಾಗೂ ದೇಣಿಗೆ ಮೂಲಕ ಹಸರೀಕರಣಕ್ಕೆ ಪ್ರೋತ್ಸಾಹ ನೀಡಿದ ಫಲವಾಗಿ ಅತ್ಯುತ್ತಮ ವಾತಾವರಣ ಹೊಂದಿರುವ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ವಿಜಯಪುರ 3ನೇ ಸ್ಥಾನ ಪಡೆದಿದ್ದರೆ, ಕರ್ನಾಟಕ ದಲ್ಲಿ ನಂ.1 ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಹಕಾರಿಯ ನಿರ್ದೇಶಕರಾದ ಸಂಗನಬಸಪ್ಪ ಸಜ್ಜನ, ಶಿವಾನಂದ ಅಣೆಪ್ಪನವರ, ಸಾಯಿಬಾಬಾ ಸಿಂಧಗೇರಿ, ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ, ರಮೇಶ ಬಿರಾದಾರ, ವ್ಯವಸ್ಥಾಪಕ ನಿರ್ದೇಶಕರಾದ ಜೊತಿಬಾ ಖಂಡಾಗಳೆ, ಜನರಲ್ ಮ್ಯಾನೇಜರ್ ಗಳಾದ ಆರ್.ಟಿ.ಪಾಟೀಲ, ಈರೇಶ ಕೋರೆ, ವೃಕ್ಷೋತ್ಥಾನ ಪದಾಧಿಕಾರಿಗಳಾದ ಮುರಗೇಶ ಪಟ್ಟಣಶೆಟ್ಟಿ, ಶಿವನಗೌಡ ಪಾಟೀಲ, ರಾಜು ಯಲಗೊಂಡ, ಸಂತೋಷ ಔರಸಂಗ, ಪ್ರವೀಣ ಚೌರ್ ಮತ್ತಿತರರು ಇದ್ದರು.

