ವಿಜಯಪುರದಲ್ಲಿ ಸಿದ್ದೇಶ್ವರ ಸಂಕ್ರಮಣ ಜಾತ್ರೆ ಪೂರ್ವಭಾವಿ ಸಭೆ : ಶಾಸಕ ಯತ್ನಾಳ ಘೋಷಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುಗಾದಿಗೆ ಸಿದ್ದೇಶ್ವರ ಸಂಸ್ಥೆಯಿಂದ ನಿರಂತರ ಅನ್ನ ದಾಸೋಹ ಸೇವೆ ಆರಂಭಿಸಲಾಗುವುದು ಎಂದು ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷರು, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಘೋಷಿಸಿದರು.
ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಸಿದ್ದೇಶ್ವರ ಶಿವಾನುಭವ ಸಮುದಾಯ ಭವನದಲ್ಲಿ ರವಿವಾರ ಶ್ರೀ ಸಿದ್ದೇಶ್ವರ ಸಂಸ್ಥೆ ಸಂಕ್ರಮಣ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಸಿದ್ದೇಶ್ವರ ಶಿವಾನುಭವ ಸಮುದಾಯ ಭವನವನ್ನು ಹಿಂದೂಗಳ ಹೊಸ ವರ್ಷ ಇದೇ ಯುಗಾದಿ ದಿನ ಲೋಕಾರ್ಪಣೆ ಗೊಳಿಸಲಾಗುತ್ತಿದ್ದು, ಅಂದೇ ಅನ್ನ ದಾಸೋಹ ಸೇವೆ ಆರಂಭಿಸಲಾಗುವುದು. ಇದರಿಂದ ಪಾದಯಾತ್ರಿಗಳಿಗೆ, ಶೈಕ್ಷಣಿಕ ಪ್ರವಾಸಕ್ಕೆ ಬರುವ ಮಕ್ಕಳಿಗೆ, ಬೇರೆ ಬೇರೆ ಊರುಗಳಿಂದ ಬರುವ ಜನರಿಗೆ ಅನುಕೂಲವಾಗಲಿದೆ. ಶಿವಾನುಭವ ಸಮುದಾಯ ಭವನದ ಮೇಲೆ ಯಾತ್ರಿ ನಿವಾಸ ಕೂಡ ಆರಂಭಿಸಲಾಗುವುದು ಎಂದು ತಿಳಿಸಿದರು.
ದಾನಿಗಳು ಮತ್ತು ಪ್ರಾಮಾಣಿಕ ಆಡಳಿತ ಮಂಡಳಿಯ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತಿದೆ. ನಮ್ಮ ಹಿರಿಯರು ಮಾಡಿದ್ದ ಆಸ್ತಿಯ 10 ರಷ್ಟು ಸಂಸ್ಥೆಯ ಆಸ್ತಿಯನ್ನು ಹೆಚ್ಚಿಸಿರುವ ಹೆಮ್ಮೆ ನನಗಿದೆ. ಕರ್ನಾಟಕದಲ್ಲೇ ಅತ್ಯಂತ ದೊಡ್ಡ ಗೋಶಾಲೆ ಮಾಡಲಾಗಿದೆ. ಗೋ ಸೇವೆ ಜೊತೆಗೆ ಸಂಸ್ಥೆಯಿಂದ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಸೇವೆ ಕಲ್ಪಿಸಲಾಗುತ್ತಿದೆ. ಜೆಎಸ್ಎಸ್ ಆಸ್ಪತ್ರೆಯಲ್ಲಿ ಈ ವರ್ಷ ನರ್ಸಿಂಗ್ ಕಾಲೇಜು ಆರಂಭಗೊಂಡಿದ್ದು, ಮುಂದಿನ ಎರಡು ವರ್ಷದಲ್ಲಿ ಮೇಡಿಕಲ್ ಕಾಲೇಜು ಸಹ ಆರಂಭಿಸಲಾಗುವುದು ಎಂದರು.
ನಂದಿಕೋಲಗಳ ಮೇರವಣಿಗೆ ಅತ್ಯಂತ ಶಿಸ್ತಿನಿಂದ ಹಾಗೂ ಜನರು ಮರಳಿ ಮನೆಗೆ ಬೇಗ ತೆರಳಲು ಅನುಕೂಲವಾಗುವಂತೆ ರಾತ್ರಿ 10 ಗಂಟೆ ಒಳಗಾಗಿ ದೇವಸ್ಥಾನಕ್ಕೆ ಬರುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಜನರು ವೀಕ್ಷಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರೆ ಮೆರವಣಿಗೆಗೆ ಮೆರಗು ಬರುತ್ತದೆ ಎಂದು ಹೇಳಿದರು.
ಇದೇ ವೇಳೆ ಜಾತ್ರಾ ಸಮಿತಿಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸಿದ್ದೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ಸಿದ್ರಾಮಪ್ಪ ಉಪ್ಪಿನ, ಸಂಸ್ಥೆ ಪದಾಧಿಕಾರಿಗಳಾದ ಸಂಗನಬಸಪ್ಪ ಸಜ್ಜನ, ಸದಾನಂದ ದೇಸಾಯಿ, ಬಸವರಾಜ ಸುಗೂರ, ಮಲ್ಲಿಕಾರ್ಜುನ ಸಜ್ಜನ, ಶಿವಾನಂದ ನೀಲಾ, ನಿಂಗೊಂಡಪ್ಪ ಗೋಲಾಯಿ, ಮಡಿವಾಳಪ್ಪ ಕರಡಿ, ವಿಜಯಕುಮಾರ ಡೋಣಿ, ಸುಧೀರ ಚಿಂಚಲಿ, ಸದಾಶಿವ ಗುಡ್ಡೋಡಗಿ, ಚಂದ್ರಪ್ಪ ಹುಂಡೇಕಾರ, ನಾಗಪ್ಪ ಗುಗ್ಗರಿ, ಸಾಯಿಬಣ್ಣ ಭೋವಿ, ಮಲಕಪ್ಪ ಗಾಣಿಗೇರ, ರಮೇಶ ಹಳ್ಳದ, ರಾಮನಗೌಡ ಪಾಟೀಲ ಯತ್ನಾಳ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಮುಖಂಡರಾದ ಗುರು ಗಚ್ಚಿನಮಠ, ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ವಿಠ್ಠಲ ಹೊಸಪೇಟ, ಮಳುಗೌಡ ಪಾಟೀಲ, ಪಾಂಡುಸಾಹುಕಾರ ದೊಡಮನಿ, ವಿಕ್ರಮ ಗಾಯಕವಾಡ, ಬಸವರಾಜ ಬಿರಾದಾರ ಮತ್ತಿತರರು ಇದ್ದರು.
ವಿಜೃಂಭಣೆಯಿಂದ ಜಾತ್ರೆ
ಕೊರೊನಾ ಹಿನ್ನೆಲೆ ಕಳೆದ ಎರಡ್ಮೂರು ಜಾತ್ರೆಗಳನ್ನು ಸರಳವಾಗಿ ಮಾಡಬೇಕಾಯಿತು. ಮೊದಲಿನ ವೈಭವಕ್ಕೆ ಕೊಂಡೊಯ್ಯಲು, 107ನೇ ಸಿದ್ದೇಶ್ವರ ಸಂಕ್ರಮಣ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರ ದೇಣಿಯಿಂದ ಜಾತ್ರೆ ಮಾಡಿದರೆ, ನಿಜವಾಗಿಯೂ ನಮ್ಮೂರ ಜಾತ್ರೆ ಆಗಲಿದೆ. ಜನರ ಸಹಭಾಗಿತ್ವ ಇರಬೇಕು. ಹೀಗಾಗಿ ಎಲ್ಲರೂ ಸೇವೆಯಲ್ಲಿ ತೊಡಗಿಕೊಂಡು, ಪ್ರಾಮಾಣಿಕವಾಗಿ ಶ್ರಮವಹಿಸಿದರೆ ಪುಣ್ಯ ಪ್ರಾಪ್ತಿ ಆಗಲಿದೆ. ಜಾತ್ರೆಗಳಿಂದ ಧಾರ್ಮಿಕ ಕಾರ್ಯದ ಜತೆಗೆ ವ್ಯಾಪಾರ ಹೆಚ್ಚುತ್ತದೆ, ಜನರ ಸಂಪರ್ಕ ವೃದ್ಧಿ ಆಗಲಿದೆ. ಅದಕ್ಕೆ ಹಿರಿಯರು ಜಾತ್ರೆ, ಅಮಾವಾಸ್ಯೆ, ಹುಣ್ಣಿಮೆ, ಸಮಾರಂಭಗಳನ್ನು ಮಾಡಿದ್ದಾರೆ ಎಂದು ಶಾಸಕ ಯತ್ನಾಳ ತಿಳಿಸಿದರು.

