ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಜಾನಪದ ಒಂದೇ ದಿಸೆಯಲ್ಲಿ ನಡೆಯುವುದಿಲ್ಲ. ಅದರಲ್ಲಿ ಗೀಗಿ, ಲಾವಣಿ ಪದ ಹಾಗೂ ಜಾನಪದ ಗೀತೆಗಳ ಸೇರಿದಂತೆ ವಿವಿಧ ಪ್ರಕಾರಗಳಿವೆ ಎಂದು ಜಾನಪದ ವಿದ್ವಾಂಸ ಡಾ.ಸಂಗಮೇಶ ಬಿರಾದಾರ ಹೇಳಿದರು.
ಪಟ್ಟಣದ ಸಾರಂಗಮಠ ಆವರಣದಲ್ಲಿ ನೆಲೆ ಪ್ರಕಾಶನ ಸಂಸ್ಥೆ ಹಾಗೂ ಎಂ.ಎಂ.ಪಡಶೆಟ್ಟಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ೨೦೨೪ನೆಯ ಸಾಲಿನ ದೇಸಿ ಸನ್ಮಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆಗೆ ಜಾನಪದದ ಅರಿವು ಮೂಡಿಸುವುದು ತುಂಬಾ ಅವಶ್ಯಕವಾಗಿದೆ. ಜನಪದವು ಜನರಿಂದ ಜನರ ಮೂಲಕ ಜನರಿಗೆ ಸಾಗಿ ಬಂದ ಸಾಂಸ್ಕೃತಿಕ ಸೊಗಡಾಗಿದೆ. ಇರದಲ್ಲಿ ಬದುಕಿನ ಹಲವು ಆಯಾಮಗಳು ಅಡಗಿವೆ. ಈ ಸಾಹಿತ್ಯ ಪ್ರಕಾರವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ಪ್ರಸ್ತುತ ಸಾಹಿತ್ಯ ವಲಯದ ಮೇಲಿದೆ ಎಂದರು.
ಈ ವೇಳೆ ಜಾನಪದ ವಿದ್ವಾಂಸ ಡಾ.ಸಂಗಮೇಶ ಬಿರಾದಾರ ಅವರ ಬದುಕು ಬರಹ ಪುಸ್ತಕದ ಲೇಖಕ ಕಾಗವಾಡದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಬಿ.ಹೂಗಾರ ವಿಮರ್ಶಿಸಿ ಮಾತನಾಡಿ, ಲಾವಣಿ ಸಾಹಿತ್ಯದಲ್ಲಿ ಶಕ್ತಿಯಿದೆ. ಇಂತಹ ವಿಶಿಷ್ಟ ಶಕ್ತಿ ಇರುವ ಲಾವಣಿ ಗಾರುಡಿಗ ನನ್ನ ಗುರುವಿನ ಬಗ್ಗೆ ಬರೆಯುವ ಅವಕಾಶ ದೊರತದ್ದು ನನ್ನ ಪುಣ್ಯ. ಬದುಕು ಮತ್ತು ಬರಹದಲ್ಲಿ ಅವಿನಾಭಾವ ಸಂಬಂಧ ಕಾಣಬೇಕಾದರೆ ಬಿರಾದಾರ ಗುರುಗಳಲ್ಲಿ ಕಾಣಬಹುದು. ಪಾರಿಜಾತ ನಾಟಕ ಹುಟ್ಟಿದ್ದು ಬೆಳಗಾವಿಯಲ್ಲಿ ಬೆಳದದ್ದು ಜಮಖಂಡಿಯಲ್ಲಿ. ಅಪ್ಪಟ ದೇಸಿ ವ್ಯಕ್ತಿಗೆ ದೇಸಿ ಸನ್ಮಾನ ನವೆಯುತ್ತಿರುವುದು ಸಂತಸದ ಸಂಗತಿ. ಲಾವಣಿ ಛಂದಸ್ಸು ಕೇವಲ ಹೇಳದೆ ಅದನ್ನು ಬರೆದು ಬಿಟ್ಟಿದ್ದಾರೆ. ದೇಸಿಯ ಪರಂಪರೆ ಇಂದಿನ ಯುವ ಪೀಳಿಗೆಯಲ್ಲಿ ಬೆಳಸಬೇಕಿದೆ. ಅವರ ಸಾಹಿತ್ಯ ಅಪರೂಪ ಮತ್ತು ವಿಶಿಷ್ಟವಾದದ್ದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನ್ಯೂಜಿಲೆಂಡಿನ ಆಕ್ಲೆಂಡ್ ಬಸವ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಲಿಂಗಣ್ಣ ಕಲಬುರ್ಗಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ವಹಿಸಿ ಡಾ.ಎಂ.ಎಸ್.ಮದಭಾವಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಂಚಾಲಕ ಚನ್ನಪ್ಪ ಕಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯ ಮೇಲೆ ಡಾ.ಸಂಗಮೇಶ ಬಿರಾದಾರ, ಡಾ.ಲಿಂಗಣ್ಣ ಕಲಬುರ್ಗಿ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಡಾ.ಎಂ.ಬಿ.ಹೂಗಾರ, ಡಾ.ಎಂ.ಎಂ.ಪಡಶೆಟ್ಟಿ, ಸಂಚಾಲಕ ಡಾ.ಚನ್ನಪ್ಪ ಕಟ್ಟಿ ವೇದಿಕೆಯ ಮೇಲಿದ್ದರು.
ಇದೇ ಸಂದರ್ಭದಲ್ಲಿ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದ ವತಿಯಿಂದ ದೇಸಿ ಸನ್ಮಾನ ಪ್ರಶಸ್ತಿ ಪುರಸ್ಕೃತರಾದ ಡಾ.ಸಂಗಮೇಶ ಬಿರಾದಾರ ಅವರಿಗೆ ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಜಾಣಪದ ವಿದ್ವಾಂಸ ಡಾ.ಸಂಗಮೇಶ ಬಿರಾದಾರ ಅವರ “ಬದುಕ ಬರಹ” ಕೃತಿಯನ್ನು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಹೈಯಾಳಕರ, ಶಿವಲಿಂಗ ಕಲಬುರ್ಗಿ, ಬಿ.ಎಸ್.ಹಣಮಶೆಟ್ಟಿ, ಚಂದ್ರಶೇಖರ ಹರಿಹರ, ಗುರುರಾಜ ಪಡಶೆಟ್ಟಿ, ಚನ್ನು ಪಡಶೆಟ್ಟಿ, ಮಲ್ಲಿಕಾರ್ಜುನ ಪಡಶೆಟ್ಟಿ, ವಿ.ಡಿ.ವಸ್ತ್ರದ, ಹಿರಿಯ ಮಕ್ಕಳ ಸಾಹಿತಿ ಹ.ಮ.ಪೂಜಾರ, ಸರೋಜಾ ಕಟ್ಟಿ ಸೇರಿದಂತೆ ಸಾಹಿತ್ಯಭಿಮಾನಿಗಳು, ಪ್ರತಿಷ್ಠಾನದ ಸದಸ್ಯರು ಇದ್ದರು. ಶಕುಂತಲಾ ಹಿರೇಮಠ ಹಾಗೂ ಆರತಿ ಪಡಶೆಟ್ಟಿ ಪ್ರಾರ್ಥಿಸಿದರು. ಡಾ.ಶ್ರೀಶೈಲ ನಾಗರಾಜ ಸ್ವಾಗತಿಸಿದರು. ಮನು ಪತ್ತಾರ ನಿರೂಪಿಸಿದರು. ಮಲ್ಲಿಕಾರ್ಜುನ ಪಡಶೆಟ್ಟಿ ವಂದಿಸಿದರು.

