ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪಾಠಗಳಿಗೆ ಆಟಗಳೇ ಸ್ಪೂರ್ತಿಯಾಗಿವೆ ಎಂದು ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್ ಮತ್ತು ಖೇಲೋ ಇಂಡಿಯಾದ ಸ್ವರ್ಣ ಪದಕ ವಿಜೇತ ಚೈತ್ರಾ ವಿ. ಬೋರ್ಜಿ ಹೇಳಿದ್ದಾರೆ.
ಶನಿವಾರ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಪಾಠಗಳಿಗೆ ಸ್ಪೂರ್ತಿಯಾಗಿರುವ ಈ ಆಟಗಳು ನಮ್ಮನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತವೆ. ಸಶಕ್ತ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಕ್ರೀಡೆಗಳು ಕೇವಲ ರಂಜನೆಗಾಗಿ ಅಲ್ಲ. ನಮ್ಮ ದೇಶದ ಪ್ರತಿಷ್ಟೆಯನ್ನು ಹೆಚ್ಚಿಸುವಲ್ಲಿ ನಮಗೆ ಸ್ಪೂರ್ತಿ ನೀಡುತ್ತವೆ ಎಂದು ಅವರು ಹೇಳಿದರು.
ಶಾಲೆಯ ಪ್ರಾಚಾರ್ಯ ಡಾ. ಶೈಜೂ ಕೆ. ನಾಯರ ಮಾತನಾಡಿ, ನಮ್ಮ ಶಾಲೆಯಲ್ಲಿ ಆಟಗಳ ಜೊತೆಗೆ ಪಾಠಗಳಿಗೂ ಸಮನಾಗಿ ಪ್ರೋತ್ಸಾಹ ನೀಡಲಾಗುತ್ತದೆ. ಅಲ್ಲದೇ, ಅದಕ್ಕೆ ಬೇಕಾದ ಎಲ್ಲ ಪರಿಕರಗಳನ್ನು ಒದಗಿಸುವ ಮೂಲಕ ಕ್ರೀಡಾಪಟುಳಿಗೆ ಅನುಕೂಲ ಒದಗಿಸುತ್ತಿದ್ದೇವೆ ಎಂದು ಹೇಳಿದರು.
ಬಿ.ಎಲ್.ಡಿ.ಇ. ಸಂಸ್ಥೆಯ ಕ್ರೀಡಾ ನಿರ್ದೇಶಕ ಎಸ್. ಎಸ್. ಕೋರಿ ಕ್ರೀಡಾ ಧ್ವಜರೋಹಣ ಮಾಡಿದರು. ವಿಠ್ಠಲ್ ಬೋರ್ಜಿಯವರು ಕ್ರೀಡಾ ಮಹೋತ್ಸವಕ್ಕೆ ಚಾಲನೆಯನ್ನು ನೀಡಿ, ಶಾಲೆಯ ನಾಲ್ಕೂ ಸದನಗಳ ಪದ ಕವಾಯತುಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಮಕ್ಕಳ ಕರಾಟೆ, ಜುಂಬಾ, ಲೇಜಿಮ್, ಡಂಬಲ್ಸ್ ಯೋಗ ಪ್ರದರ್ಶನ ಹಾಗೂ ತರಬೇತಿಗಾತ್ರಿ ರಾಷ್ಟ್ರೀಯ ಯೋಗ ಪಟು ಶೀಫಾ ಅಕ್ಕಲಕೋಟ ವಿಶೇಷ ಯೋಗ ಪ್ರದರ್ಶನವನ್ನು ನೀಡಿ ಪ್ರೇಕ್ಷಕರನ್ನು ಮನಸೂರೆಗೊಂಡರು.
ಮಕ್ಕಳ ಕೊನೆಯ ಸುತ್ತಿನ ಓಟದ ಸ್ಪರ್ಧೆಗಳು ಮೈನವಿರೇಳಿಸುವಂತಿದ್ದವು. ಪಾಲಕರಿಗೂ ಕೆಲವು ಆಟಗಳ ಸ್ಪರ್ಧೆಗಳನ್ನು ಆಯೋಜಿಸಿ ಗೆದ್ದವರಿಗೆ ಬಹುಮಾನ ನೀಡಲಾಯಿತು.
ಈ ಕ್ರೀಡಾಮಹೋತ್ಸವದಲ್ಲಿ ನಗರದ ಜಲನಗರದಲ್ಲಿರುವ ಶ್ರೀ ಬಿ. ಎಂ. ಪಾಟೀಲ ಐ.ಸಿ.ಎಸ್.ಸಿ ಪಬ್ಲಿಕ್ ಸ್ಕೂಲ್ ನ ಪ್ರಾಚಾರ್ಯ ದರ್ಶನ ಹುನಗುಂದ, ಶಾಲೆಯ ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ, ಶಾಲೆಯ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

