ಕೈಗೆತ್ತಿಕೊಳ್ಳಲಾದ ೨೫೮೩ ಪ್ರಕರಣಗಳಲ್ಲಿ ೨೦೨೧ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ | ಪಕ್ಷಗಾರರು ಹರ್ಷ
ಉದಯರಶ್ಮಿ ದಿನಪತ್ರಿಕೆ
ವರದಿ: ಚೇತನ ಶಿವಶಿಂಪಿ
ಮುದ್ದೇಬಿಹಾಳ: ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಿ ಪಕ್ಷಗಾರರಿಗೆ ನ್ಯಾಯ ಒದಗಿಸಿಕೊಡಲು ನ್ಯಾಯಾಂಗ ಇಲಾಖೆ ಸಾಕಷ್ಟು ಪ್ರಯತ್ನ ಪಡುತ್ತಲೇ ಇದೆ. ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವ ಪಕ್ಷಗಾರರಿಗೆ ಸಧ್ಯ ಲೋಕ್‌ಅದಾಲತ್ ಸಾಕಷ್ಟು ಸಹಕಾರಿಯಾಗಿದ್ದು ಈ ಬಗ್ಗೆ ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ೧೩ ವರ್ಷಗಳಿಂದ ನಡೆಯುತ್ತಿದ್ದ ಸಿವಿಲ್ ವ್ಯಾಜ್ಯವೊಂದು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡು ಸಾಕ್ಷೀಕರಿಸಿದೆ.
ತಾಲೂಕಿನ ಹಡಲಗೇರಿ ಗ್ರಾಮದ ಅಂದಾಜು ೬ ಎಕರೆ ಜಮೀನು ಸೇರಿದಂತೆ ಪಟ್ಟಣದಲ್ಲಿನ ಎರಡು ಮನೆಗಳಿಗೆ ಸಂಬಂಧಿಸಿದಂತೆ ಅಂದಾಜು ೧೧ ವರ್ಷಗಳ ಹಿಂದೆ ಇಲ್ಲಿನ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಪ್ರಕರಣದಲ್ಲಿರುವ ೬ ಜನರ ಪೈಕಿ ಒಂದಿಬ್ಬರು ದೂರದ ಊರಿಂದ ಅಲೆದು ಸುಸ್ತಾಗಿ ಹೋಗಿದ್ದರು. ತಮ್ಮ ಜೀವಿತ ಕಾಲದಲ್ಲಿ ಈ ಆಸ್ತಿಯನ್ನು ಅನುಭವಿಸುತ್ತೇವೋ ಇಲ್ಲವೋ ಎಂಬ ಚಿಂತೆಗೀಡಾಗಿದ್ದರು. ಈ ಮಧ್ಯೆ ರಾಷ್ಟ್ರೀಯ ಲೋಕ್ ಅದಾಲತ್ ಬಂದಾಗ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಮತ್ತು ಹಿರಿಯ ನ್ಯಾಯವಾದಿಗಳಾದ ವಿ.ಎಂ.ನಾಗಠಾಣ ಮತ್ತು ಎಸ್.ಎಂ.ಪಟ್ಟಣಶೆಟ್ಟಿ ಅವರು ಪಕ್ಷಗಾರರಿಗೆ ತಿಳಿ ಹೇಳಲಾಗಿ ಪ್ರಕರಣ ರಾಜಿ ಅಂಧಾನದ ಮೂಲಕ ಇತ್ಯರ್ಥಗೊಂಡು ಎಲ್ಲ ಪಕ್ಷಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.
೨೦೨೧ ಪ್ರಕರಣಗಳು ಇತ್ಯರ್ಥ
ಸದರಿ ಲೋಕ ಅದಾಲತ್ ನಲ್ಲಿ ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಒಟ್ಟು ೭೬೩೧ ಬಾಕಿ ಇರುವ ಪ್ರಕರಣಗಳಲ್ಲಿ ೨೫೮೩ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ ಒಟ್ಟು ೨೦೨೧ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
“ಇವತ್ತು ಲೋಕ್‌ಅದಾಲತ್ ನಲ್ಲಿ ನಮ್ಮ ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದೆ. ಮಾನಸಿಕ ಚಿಂತೆ ದೂರವಾಗಿದೆ. ನ್ಯಾಯಾಲಯಕ್ಕೆ ಅಲೆಯೋದು ತಪ್ಪಿದೆ. ನಮಗೆ ಸಿಗಬೇಕಾದ ಪಾಲು ಸರಿಯಾಗಿ ಬಂದಿದೆ. ಇನ್ಮುಂದೆ ನೆಮ್ಮದಿಯಿಂದ ಜೀವಿಸಬಹುದು. ಲೋಕ್‌ಅದಾಲತ್ ನಮಗೆ ತುಂಬಾ ಸಹಕಾರಿಯಾಗಿದೆ.”
– ನಾಗೇಶ ನಂದರಗಿ
ಪಕ್ಷಗಾರ
“ಲೋಕ್‌ಅದಾಲತ್ ನಿಂದ ಶೀಘ್ರ ನ್ಯಾಯ ದೊರೆಯುವದರಲ್ಲಿ ಸಂಶಯವೇ ಇಲ್ಲ. ನಮಗೆ ಕೋರ್ಟ ಗೆ ಅಲೆದು ಅಲೆದೂ ಸಾಕಾಗಿ ಹೋಗಿತ್ತು. ಪ್ರಕರಣದ ಕೊನೆಯ ತೀರ್ಪು ಬಂದ ಮೇಲೆ ಸಂಬಂಧಗಳು ಹಾಳಾಗುವ ಭಯವಿತ್ತು. ಲೋಕ್ ಅದಾಲತ್ ನಲ್ಲಿ ನಮ್ಮೆಲ್ಲರಿಗೆ ಸಮನಾದ ಪಾಲು ದೊರೆತ ಖುಷಿಯಿದೆ. ನ್ಯಾಯಾಧೀಶರು ನಮಗೆ ಸರಿಯಾದ ಮಾರ್ಗದರ್ಶನ ನೀಡಿದ ಪರಿಣಾಮ ನಮ್ಮ ಪ್ರಕರಣ ಬೇಗ ಇತ್ಯರ್ಥಗೊಂಡಿದೆ. ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿಯವರಿಗೆ ಈ ಮೂಲಕ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ.”
– ಅನುರಾಧಾ ಪಂಡಿತ
ಪಕ್ಷಗಾರರು

