ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಕಾನೂನಿನ ಅರಿವಿರಬೇಕು ಇದರಿಂದ ಅಪರಾದ ಪ್ರಕರಣದಲ್ಲಿ ಭಾಗಿಯಾಗುವುದು ತಪ್ಪುತ್ತದೆ ಎಂದು ಬನಹಟ್ಟಿ ಠಾಣಾಧಿಕಾರಿ ಶಾಂತಾ ಹಳ್ಳಿ ಹೇಳಿದರು.
ಸ್ಥಳಿಯ ಸರಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಅಪರಾಧ ತಡೆ ಮಾಶಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಸಮಾಜದಲ್ಲಿ ಶಾಂತಿ, ನೆಮ್ಮದಿ ತರಲು ಪೋಲಿಸ್ ಇಲಾಖೆ ಹಗಲಿರುಳು ಶ್ರಮಿಸುತಿದ್ದು ಇದಕ್ಕೆ ಸಾರ್ವಜನಿಕರ ಸಹಕಾರವೂ ಅಷ್ಟೆ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ೧೮ ವರ್ಷ ವಯೋಮಾನ ಪೋರೈಸುವವರೆಗೂ ಯಾವುದೇ ವಾಹನ ಚಾಲನೆ ಮಾಡಬಾರದು, ಸಹಪಾಠಿ ವಿದ್ಯಾರ್ಥಿನಿಯರನ್ನು ಛೇಡಿಸುವುದಾಗಲಿ, ಹೆದರಿಸುವುದಾಗಲಿ ಮಾಡಿದಲ್ಲಿ ಪೋಸ್ಕೊದಂಥಹ ಕಠಿಣ ಕಾನೂನಿನ ಅಡಿ ಬಂಧಿತರಾಗಬೇಕಾಗುತ್ತದೆ, ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಸರಕಾರಿ ನೌಕರಿಯಿಂದ ವಂಚಿತರಾಗಬೇಕಾಗುತ್ತದೆ ಅದಕ್ಕೆ ಒಳ್ಳೆಯ ನಡತೆ, ಕಾನೂನು ಪಾಲನೆ ಪ್ರತಿಯೊಬ್ಬರ ಅಗತ್ಯ ಎಂದು ಹೇಳಿದ ಅವರು ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯುವ ಹಲವಾರು ಸೌಲಭ್ಯ, ಹೊಸ ಯೋಜನೆಗಳ ಕುರಿತು ಮಾಹಿತಿ ನೀಡಿದರು ಹಾಗೂ ವಿದ್ಯಾರ್ಥಿನಿಯರು ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕೃಮಗಳ ಕುರಿತು ಸಲಹೆ ನೀಡಿದರು.
ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ಎಂ.ಎಸ್. ಜಿಟ್ಟಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನನು ಎಸ್ಡಿಎಂಸಿ ಅಧ್ಯಕ್ಷ ಮಾರುತಿ ಮಮದಾಪೂರ ವಹಿಸಿದ್ದರು, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಮಹಾದೇವ ಪಾಲಭಾವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಬನಹಟ್ಟಿ ಠಾಣಾಧಿಕಾರಿ ಶಾಂತಾ ಹಳ್ಳಿಯವರನ್ನು ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಶಿಕ್ಷಕ ಜೆ.ಎಸ್ ಸನದಿ ಸ್ವಾಗತಿಸಿ ನಿರೂಪಿಸಿದರು. ಸಹ ಶಿಕ್ಷಕ ಎಂ.ಎಲ್ ಜಮಾದಾರ ವಂದಿಸಿದರು.

