ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ
ಉದಯರಶ್ಮಿ ದಿನಪತ್ರಿಕೆ
ಜಯದೇವಿತಾಯಿ ಲಿಗಾಡೆಯವರು ಜನಿಸಿದ್ದು ಜೂನ್ 23 1912ರಲ್ಲಿ. ಜಯದೇವಿತಾಯಿ ಅವರ ಅಜ್ಜ ಶ್ರೀ ವಾರದ ಮಲ್ಲಪ್ಪನವರು ದಾನ ಧರ್ಮಗಳ ಮಹಾನ್ ವ್ಯಕ್ತಿ. ಅವರು ಮಹಿಳಾ ಜ್ಞಾನ ಮಂದಿರವನ್ನು ಸ್ಥಾಪಿಸಿ ಮಹಿಳಾ ವ್ಯಾಸಂಗಕ್ಕೆ ಅಗತ್ಯವಾದ ವಾತಾವರಣ ನಿರ್ಮಿಸಿದ್ದರು. ಈ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಕಾರ್ಯಕ್ರಮಗಳು ಬಾಲ್ಯದಿಂದಲೇ ಜಯದೇವಿ ತಾಯಿಯವರನ್ನು ಪ್ರಭಾವಿತಗೊಳಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾದವು. ಜಯದೇವಿತಾಯಿಯವರ ತಂದೆ ಚೆನ್ನಮಲ್ಲಪ್ಪನವರು, ತಾಯಿ ಸಂಗವ್ವನವರು ಸ್ವತ: ಹಾಡುಗಾರ್ತಿ. ಒಳ್ಳೆಯ ವಾಗ್ಮಿ, ಸೇವಾಕಾoಕ್ಷಿ , ಪ್ರಶಾಂತ ಸ್ವಭಾವಿ. ವಾರದವರ ಮಹಿಳಾ ಜ್ಞಾನ ಮಂದಿರಕ್ಕೆ ಯಾವಾಗಲೂ ಹೋಗುತ್ತಿದ್ದ ಸಂಗವ್ವನವರಲ್ಲಿ ಒಂದು ಸುಸಂಸ್ಕೃತ ನಡವಳಿಕೆ ಇತ್ತು. ಇವೆಲ್ಲದರ ಕೆನೆಗಟ್ಟಿದಂತೆ ಮಗಳು ಜಯದೇವಿ ಬೆಳೆದಳು.
ಜಯದೇವಿತಾಯಿಯವರ ತವರು ಮನೆ ಹೆಸರು ಮಡಕಿ. ಶ್ರೀಮಂತ ಜೀವನವಾದರೂ ಮಗಳದು ನಿರಾಡಂಬರ ಜೀವನ. ಸೊಲ್ಲಾಪುರದಲ್ಲಿ ಕನ್ನಡ ಶಾಲೆಗಳು ಇರಲಿಲ್ಲವಾದ್ದರಿಂದ ಮರಾಠಿ ಶಾಲೆಯಲ್ಲಿ ಓದಬೇಕಾಯಿತು. ಆದರೆ ಮನೆಯಲ್ಲಿ ತಾಯಿಯ ಕೀರ್ತನೆ, ಬಡಜನ ಸೇವೆ ಮತ್ತು ಶರಣ ಭಾವದ ಭಕ್ತಿ ಶುದ್ದಿಗಳಲ್ಲಿ ಜಯದೇವಿ ಕನ್ನಡದ ಪ್ರಭಾವ ಮತ್ತು ಸಾಂಸ್ಕೃತಿಕ ಮನೋಭಾವಗಳನ್ನು ಮೈಗೂಡಿಸಿಕೊಂಡರು. ಜಯದೇವಿತಾಯಿಯವರ ಮದುವೆ ಅವರಿಗೆ 14 ವರ್ಷ ವಯಸ್ಸಾಗಿದ್ದಾಗ ವೈಭವದಿಂದ ನಡೆಯಿತು. ಮದುವೆಯಾಗಿ ಗಂಡನ ಮನೆಗೆ ಹೋದಾಗ ಗಂಡನ ಮನೆ ಹಲವು ಸಂಕೋಲೆಗಳ ಸೆರೆ ಯಂತಿತ್ತು. ಆದರೆ ಜಯದೇವಿಯವರ ಸಹನಶೀಲತೆ, ಶಾಂತ ಸ್ವಭಾವಗಳು ಮನೆಯವರನ್ನು ಗೆಲ್ಲುತ್ತಾ ಬಂದವು. ಮರಾಠಿಯಲ್ಲಿ ನಾಲ್ಕನೆಯ ವರ್ಗದವರೆಗೆ ಕಲಿತಿದ್ದ ಜಯದೇವಿತಾಯಿಯವರು ಇಬ್ಬರು ಮಕ್ಕಳಾದ ನಂತರ ಕನ್ನಡ ಕಲಿತು, ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದರು. ಮುಂದೆ ಅದೇ ಅವರ ಸಾಹಿತ್ಯ ರಚನೆಗೆ ದಾರಿ ದೀಪವಾಯಿತು. ಮನೆಯವರ ಪ್ರೋತ್ಸಾಹದಿಂದ ಲಿಂಗಾಯತ ಮಹಾಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೆ ಅನೇಕ ಸಲ ಅಧ್ಯಕ್ಷರೂ ಆಗಿದ್ದರು. ದಾಂಪತ್ಯವು 5 ಮಕ್ಕಳಿಂದ ಮಧುರವಾಯಿತು. ದೇಶಪ್ರೇಮ, ಶರಣ ನಿಷ್ಠೆ, ಕ್ರಾಂತಿವಾದಗಳು ಅವರ ಬದುಕಿನ ಗುರಿಗಳಾದವು. ಎಷ್ಟು ತಡವಾದರೂ ಸರಿ ಸೊಲ್ಲಾಪುರದ ಸಿದ್ಧರಾಮೇಶ್ವರ ಗುಡಿಗೆ ಹೋಗಿ ಬಂದ ಮೇಲೆಯೇ ಅವರು ಊಟ ಮಾಡುತ್ತಿದ್ದರು.
ಲಿಂಗಾಯತ ಮಹಾಸಭೆಗಳಲ್ಲಿ ಜಯದೇವಿತಾಯಿಯವರ ಭಾಷಣಗಳನ್ನು ಕೇಳಿದ ಬ್ರಿಟಿಷರು ಲಿಂಗಾಯತ ಬಟಾಲಿಯನ್ ಗಾಗಿ ಭಾಷಣ ಮಾಡಲು ಕೇಳಿಕೊಂಡಾಗ ತಾಯಿಯವರು ನಿರಾಕರಿಸಿದರು. ಇದರಿಂದ ಮನೆಯಲ್ಲಿ ವಿರಸ ಉಂಟಾದರೂ ಅವರು ಒಪ್ಪಲಿಲ್ಲ. ಬರಬರುತ್ತಾ ಮಹಿಳಾಧ್ಯಾನ ಮಂದಿರಕ್ಕೆ ಅನಿವಾರ್ಯವೆನಿಸುವಷ್ಟು ಅದರ ಕಾರ್ಯ ಕಲಾಪಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹೈದರಾಬಾದಿನಲ್ಲಿ ರಜಾಕಾರರ ಆಕ್ರಮಣದಿಂದ ಅನಾಥರಾದವರಿಗೆ, ನಿರಾಶ್ರಿತರಾದವರಿಗೆ ಪ್ರೀತಿಯ ಆಶ್ರಯ ನೀಡಿದ ಜಯದೇವಿತಾಯಿಯವರು ತಮ್ಮ ಸೇವಾಕಾರ್ಯದಿಂದಲೇ ತಾಯಿ ಅನಿಸಿಕೊಂಡು ಆಗಿನಿಂದ ಜಯದೇವಿ ತಾಯಿಯಾದರು. ಅವರ ಸಮಾಜ ಸೇವೆ ಹಲವಾರು ಕ್ಷೇತ್ರಗಳಲ್ಲಿ ಅವರ ದುಡಿಮೆಯನ್ನು ಗರಿಮೆಯನ್ನು ಗೌರವಿಸುವಂತಾಯ್ತು.
ಸೊಲ್ಲಾಪುರದಲ್ಲಿ ಒಮ್ಮೆ ಕಾಲರಾ ದಾಳಿ ಮಾಡಿದಾಗ ಜಯದೇವಿತಾಯಿಯವರು ಅಲ್ಲಲ್ಲಿ ನಾಗರಿಕರ ಸಭೆ ಕರೆದು ಭಾಷಣಗಳ ಮೂಲಕ ಜನರಲ್ಲಿ ಧೈರ್ಯ ತುಂಬಿ ಅಗತ್ಯ ಸೇವೆಯನ್ನು ಒದಗಿಸಿದರು. ಗಾಂಧೀಜಿಯವರ ತತ್ವಗಳಿಗೆ ಮಾರುಹೋಗಿ ನೂಲುವ, ಸ್ವದೇಶಿ ಬಟ್ಟೆಯನ್ನು ತೊಡುವ ವ್ರತ ತೊಟ್ಟು ಜ್ಞಾನ ಮಂದಿರದಲ್ಲೂ ಅದನ್ನು ಕಾರ್ಯರೂಪಕ್ಕೆ ತಂದರು. ಹಿಂದೂ ಮುಸಲ್ಮಾನ ಬಂಧುಗಳನ್ನೆಲ್ಲ ಒಂದೇ ರೀತಿಯಲ್ಲಿ ಕಾಣುತ್ತಿದ್ದ ಹೃದಯವಂತಿಕೆ ಮೆರೆದರು.
ಸ್ತ್ರೀ ಶಿಕ್ಷಣದ ಕುರಿತು ಜಯದೇವಿ ತಾಯಿಯವರು ಅಪಾರ ಆಸಕ್ತಿ ಕಾಳಜಿ ಹೊಂದಿದ್ದರು. ಸುವ್ಯವಸ್ಥಿತ ಸಮಾಜ ರಚನೆಗೆ ಸುಸಂಸ್ಕೃತ ಜನಾಂಗಬೇಕು. ಸುಸಂಸ್ಕೃತಿ ಸ್ತ್ರೀ ಶಿಕ್ಷಣದ ತವರು ಮನೆ. ಸುಖ ಶಾಂತಿ ನೆಲೆಸುವಂತೆ ಮಾಡುವುದು ಧರ್ಮದ ಗುರಿ. ದುಃಖಕ್ಕೆ ಅಜ್ಞಾನ, ಬಡತನ ವರ್ಗ ಕಲಹ ಕಾರಣ.ಇವೆಲ್ಲ ಇಲ್ಲದಂತೆ ಸಮಾಜ ರಚನೆಯಾಗಲು ಶಿಕ್ಷಣ ಹೆಚ್ಚು ಮುಖ್ಯ ಎಂದು ಜಯದೇವಿ ತಾಯಿಯವರು ತಮ್ಮ ಭಾಷಣಗಳಲ್ಲಿ ಯಾವಾಗಲೂ ಪ್ರಸ್ತಾಪಿಸುತ್ತಿದ್ದರು. ಮಹಿಳಾದ್ಯಾನ ಮಂದಿರದ ಜಯದೇವಿ ಕನ್ಯಾ ಶಾಲಾ ಸ್ಥಾಪಿತವಾಗಿ ಅಲ್ಲಿ ಮರಾಠಿ ಬದಲು ಕನ್ನಡ ಕಲಿಯಲು ಹೆಣ್ಣು ಮಕ್ಕಳಿಗೆ ಸಾಧ್ಯವಾದದ್ದು ತಾಯಿಯವರ ಪ್ರಯತ್ನದಿಂದ. ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲು ಶಾಲೆ ಕಾಲೇಜುಗಳಲ್ಲಿ ನಗದು ಬಹುಮಾನ, ಪರ್ಯಾಯ ಫಲಕಗಳನ್ನು ಕೂಡಾ ಮಾಡಿದ್ದರು. ಅವರ ಧನ ಸಹಾಯದಿಂದ ಸ್ಥಾಪಿತವಾದ ಧಾರವಾಡದ ಜಯದೇವಿತಾಯಿ ಮಾಧ್ಯಮಿಕ ಶಾಲೆ ಮತ್ತು ಹುಬ್ಬಳಿಯ ಭಾರತಿ ಹೈಸ್ಕೂಲ್ ಗಳು ಈಗಲೂ ಇವೆ.
ಔದ್ಯೋಗಿಕ ಕೇಂದ್ರ ಸಂಸ್ಥೆಗಳಲ್ಲಿ ಸಾಕ್ಷರತಾ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಜಯದೇವಿ ತಾಯಿಯವರು ನೇತೃತ್ವ ವಹಿಸಿದ್ದರು. ಸುಮಾರು ಇನ್ನೂರಕ್ಕೂ ಹೆಚ್ಚು ಅಂತಹ ಕೇಂದ್ರಗಳ ಸ್ಥಾಪನೆಗಳಾಗಿದ್ದವು, ಎಂದರೆ ಅದರ ವ್ಯಾಪ್ತಿಯ ಮಹತ್ವ ತಿಳಿಯುತ್ತದೆ. ಕನ್ನಡದ ಈ ಅಭಿವೃದ್ಧಿಯ ಬಗ್ಗೆ ವಿಶೇಷವಾದ ಮರಾಠಿ ಪರ ಆಡಳಿತಗಾರರು ಕನ್ನಡ ಸಾಕ್ಷರತಾ ಕೇಂದ್ರಗಳಿಗೆ ಬೆಂಬಲವಾಗಿದ್ದ ಅಧಿಕಾರಿಗಳನ್ನು ಎತ್ತoಗಡಿ ಮಾಡಿಸಿ ಕಿರುಕುಳ ಕೊಡುತ್ತಿದ್ದರು. ಆದರೂ ಜಯದೇವಿ ತಾಯಿಯವರು ತಮ್ಮ ಪ್ರಯತ್ನ ಮುಂದುವರೆಸಿದರು. ಕಾರ್ಮಿಕರಲ್ಲದ ವ್ಯಾಪಾರಸ್ಥರಿಗೆ ಓದುವ ಆಸಕ್ತಿ ಬೆಳೆಸಲು ತಮ್ಮ ಸ್ವಂತ ಖರ್ಚಿನಲ್ಲಿ ಪುಸ್ತಕ ಪತ್ರಿಕೆಗಳನ್ನು ತರಿಸಿಕೊಡುತ್ತಿದ್ದರು. ವರದಕ್ಷಿಣೆ ಪದ್ಧತಿಯನ್ನು ಅವರು ಪ್ರತಿಭಟಿಸುತ್ತಿದ್ದರು. ಜಾಹೀರಾತುಗಳಲ್ಲಿ ಅಸಭ್ಯತೆಯ ಬಗ್ಗೆ ಧನಿಯೆತ್ತುತ್ತಿದ್ದರು.
ಬಸವ ಮತ್ತು ಗಾಂಧಿ ತತ್ವಗಳ ಅನುಸರಣೆಗಾಗಿ ಅಸ್ಪೃಶ್ಯರ ಸೇವೆಯನ್ನು ತಾಯಿ ಮನ ಮುಟ್ಟಿ ಮಾಡಿದ್ದಾರೆ. ಸೊಲ್ಲಾಪುರ ಮತ್ತು ಬಾರ್ಶಿ ಗಳಲ್ಲಿದ್ದ ರಿಮ್ಯಾಂಡ್ ಹೋಂ, ಹರಿಜನ ಸಂಘ, ಗಾಂಧಿ ವಸ್ತ್ರಾಲಯಗಳಿಗೆ ಜಯದೇವಿ ತಾಯಿಯವರ ಪ್ರೇರಣೆ ಬೆಂಬಲಗಳು ಮುಖ್ಯವಾಗಿದ್ದವು. ಯಾವ ಊರಿಗೇ ಹೋಗಲಿ ಹರಿಜನಕೇರಿಯನ್ನು ಭೇಟಿಯಾಗಿ ಬರುತ್ತಿದ್ದರು. ಅಸ್ಪೃಶ್ಯತೆ ನಿವಾರಣೆಗಾಗಿ ಶರಣ ಸಮಾಜವೆಂಬ ಸಂಘವನ್ನು ಸ್ಥಾಪಿಸಿದರು. ಅಂತರ್ಜಾತಿಯ ವಿವಾಹಗಳನ್ನು ಪ್ರೋತ್ಸಾಹಿಸಿದರು.
ರಜಾಕಾರರ ದೌರ್ಜನ್ಯದ ದಿನಗಳಲ್ಲಿ ನಿರಾಶ್ರಿತರಿಗಾಗಿ ಅವರು ತಮ್ಮ 40 ಎಕರೆಯ ಹೊಲದಲ್ಲಿ ಶಿಬಿರಗಳನ್ನು ಹಾಕಿಕೊಟ್ಟರು. ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ಶಾಲೆ ಪ್ರಾರಂಭಿಸಿದರು.ಡಾಕ್ಟರ್ ಮೋದಿ ಅವರನ್ನು ಕರೆಸಿ ಸಾಮೂಹಿಕ ಶಸ್ತ್ರ ಕ್ರಿಯೆಗಳ ಸಂದರ್ಭದಲ್ಲಿ ರೋಗಿಗಳ ಮತ್ತು ಅವರ ಸಹಾಯಕರಿಗಾಗಿ ಸಕಲ ವಸತಿ ವ್ಯವಸ್ಥೆಗಳನ್ನು ತಾವೇ ಮಾಡಿದರು.ಸಹಕಾರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು
ಜಯದೇವಿ ತಾಯಿಯವರ ಚೈತನ್ಯ ಅವರನ್ನು ಸಾಹಿತ್ಯ ರಚನೆಗೂ ಪ್ರೇರೇಪಿಸಿತು. ಕನ್ನಡ ಮರಾಠಿಗಳಲ್ಲೂ ಅವರು ಸಿದ್ಧ ಹಸ್ತರು. ಅವರು ಒಟ್ಟು 14 ಕೃತಿಗಳನ್ನು ಪ್ರಕಟಿಸಿದ್ದಾರೆ. ಜಯಗೀತೆ, ತಾಯಿಯ ಪದಗಳು, ಶ್ರೀ ಸಿದ್ದರಾಮ ಪುರಾಣ, ತಾರಕ ತಂಬೂರಿ, ಬಂದೇವು ಕಲ್ಯಾಣಕೆ, ಸಾವಿರದ ಪದಗಳು, ಅರುವಿನಾ ಗರದಲ್ಲಿ, ಸಿದ್ಧವಾಣಿ, ಬಸವ ದರ್ಶನ, ಸಂಪೂರ್ಣ ಕರ್ನಾಟಕಾಂಬೆ ರೂಪರೇಷೆ, ಸಿದ್ದರಾಮಾಂಚಿತ್ರಿವಧಿ, ಬಸವ ವಚನಾಮೃತ, ಶೂನ್ಯ ಸಂಪಾದನೆ.
ತಾಯಿಯವರು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ವಹಿಸಿ ಕಾರ್ಯನಿರತರಾಗಿದ್ದರು. ಅವರ ಸಾಧನೆಯ ಹೆಗ್ಗುರುತು ಸಾಹಿತ್ಯ ಕ್ಷೇತ್ರ, ಮಹಿಳಾ ಸಂಘಟನೆಗಳು, ಸೇವಾದಳ, ಲಿಂಗಾಯತ ಪರಿಷತ್ತು, ಸಾಕ್ಷರತಾ ಮಂಡಳಿ, ಕರ್ನಾಟಕದ ವಿದ್ಯಾವರ್ಧಕ ಸಂಘ ಮತ್ತು ವಿಶ್ವವಿದ್ಯಾಲಯಗಳಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಕ್ರಿಯಾಶೀಲರಾಗಿದ್ದರು. ರಾಜ್ಯ ಸಾಹಿತ್ಯ ಮತ್ತು ಲಲಿತಕಲಾ ಅಕಾಡೆಮಿಗಳ ಪ್ರಶಸ್ತಿ, 1974ರಲ್ಲಿ ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕದ ವಿಶ್ವವಿದ್ಯಾಲಯದ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ವಿಶ್ವವಿದ್ಯಾನಿಲಯದ ಡಿ.ಲಿಟ್ ಪದವಿ ಮೊದಲಾದ ಪ್ರಶಸ್ತಿ ಗೌರವಗಳು ತಾಯಿಯವರಿಗೆ ಸಂದಿವೆ.
ಜಯದೇವಿತಾಯಿಯವರು ಕುಟುಂಬ ವತ್ಸಲೆ, ಸಾಹಿತ್ಯ ಸಾಧಕಿ, ಸಮಾಜ ಸೇವಕಿ, ಹೀಗೆ ತ್ರಿವೇಣಿ ಸಂಗಮವಾಗಿದ್ದ ಈ ಜಂಗಮ ತಾಯಿ, ತಾಯ್ನುಡಿಯ ಸೇವೆಗಾಗಿ ಸವೆದರು. ಕನ್ನಡ ನುಡಿಗೆ, ಕನ್ನಡ ನಾಡಿಗೆ ತಮ್ಮನ್ನು ಅರ್ಪಿಸಿಕೊಂಡು ಅಜರಾಮರ ಕೀರ್ತಿ ಪಾತ್ರರಾದ ಶ್ರೀಮತಿ ಜಯದೇವಿತಾಯಿ ಅವರ ಜೀವನ ದರ್ಶನವೆಂದರೆ ಅದೊಂದು ಯಶೋಗಾಥೆ. ಹೆಣ್ಣು ಮಕ್ಕಳ ಕುರಿತಾದ ಅವರ ಕಾಳಜಿ ಅವರಿಗೆ ಸಹಜವಾಗಿ ರಕ್ತಗತವಾಗಿತ್ತು ಗಂಭೀರವರ್ಚಸ್ಸು, ಅಸ್ಖಲಿತವಾಗಿ, ರೂಪುಗೊಂಡ ಒಬ್ಬ ತಪಸ್ವಿನಿಯ ಚಿತ್ರ ಅವರನ್ನು ನೆನೆದಾಗಲಿಲ್ಲ ಕಣ್ಮುಂದೆ ನಿಂತoತಾಗುತ್ತದೆ.
ಒಬ್ಬಳು ಹೆಣ್ಣು ಮಗಳು ಒಂದು ಜೀವಮಾನದಲ್ಲಿ ಅದು ತನ್ನ ಇತಿಮಿತಿಗಳಲ್ಲಿ ಇಷ್ಟೊಂದು ಬಗೆಯ ಸಾಧನೆಗಳನ್ನು ಸಾಧಿಸಿದ್ದು ಇತಿಹಾಸದಲ್ಲಿ ಅಪರೂಪವೆನ್ನಬಹುದು. ಅವರ ಶ್ರಮಕ್ಕೆ ತಕ್ಕ ಫಲವನ್ನು ಅವರು ಕಾಣಲಿಲ್ಲ, ಯಾವ ಅಧಿಕಾರವನ್ನೂ ಬಯಸಲಿಲ್ಲ. ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯಲಿಲ್ಲ. ನಾಡಿಗಾಗಿ, ನುಡಿಗಾಗಿ, ಮಹಿಳೆಯರಿಗಾಗಿ, ಕಾರ್ಮಿಕರಿಗಾಗಿ, ಅಸ್ಪೃಶ್ಯರಿಗಾಗಿ , ಮಾಡಿದ ಅವರ ಸೇವೆ ಚಿಂತನೆಗಳು ಸ್ಮರಣೆಯವಾಗಿವೆ. ತಾಯಿಯವರು ಜುಲೈ 25 1986ರಲ್ಲಿ ಲಿಂಗೈಕ್ಯರಾದರು.