ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಜ್ಞಾನವಿಕಾಸ ವಾತ್ಸಲ್ಯ ಕಾರ್ಯಕ್ರಮ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಬಡವರ ಪಾಲಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ಗ್ರಾಪಂ ಉಪಾಧ್ಯಕ್ಷ ಯುಸುಫ್ ಮುಲ್ಲಾ ಹೇಳಿದರು.
ಸಿಂದಗಿ ಮತಕ್ಷೇತ್ರದ ಮೋರಟಗಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಜ್ಞಾನವಿಕಾಸ ಯೋಜನೆಯ ಅಡಿಯಲ್ಲಿ ಕುಷ್ಠ ರೋಗ ಫಲಾನುಭವಿ ಮಸಾಶನ ಹಾಗೂ ಕಿಟ್ ನೀಡಿ ವಿತರಿಸಿ ಮಾತನಾಡಿದರು.
ಧರ್ಮಸ್ಥಳ ಸಂಸ್ಥೆಯು ಅಸಹಾಯಕರ ನೇರವಿಗಾಗಿ ಹೊಸ ಯೋಜನೆಗಳನ್ನು ತರುತ್ತಾ ವೃದ್ಧರ, ಅಂಗವಿಕಲರ ಸಹಾಯಕ್ಕಾಗಿ ಸದಾ ಮಿಡಿಯುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ರೈತರಿಗೆ ಹಾಗೂ ಕೂಲಿ ಕಾರ್ಮಿಕ ವರ್ಗಕ್ಕೆ ಮತ್ತು ಬಡ ಜನರಿಗೆ ಸಾಕಷ್ಟು ಸಹಾಯಕಾರಿಯಾಗಿದೆ. ಬಂಗಾರ ಅಡವಿಟ್ಟರು ನಮ್ಮ ಸಮಯಕ್ಕೆ ಹಣ ಸಿಗದ ಸಂದರ್ಭದಲ್ಲಿ ತಮ್ಮ ಮೇಲೆ ವಿಶ್ವಾಸಯಿಟ್ಟು ಕೇವಲ ತಮ್ಮ ಆಧಾರ ಕಾರ್ಡ ಮೇಲೆ ಸಾಲದ ಮೂಲಕ ಲಕ್ಷ ಲಕ್ಷ ಹಣ ತಮ್ಮ ಖಾತೆಗೆ ಜಮಾ ಮಾಡುತ್ತಾರೆ. ತಾವೆಲ್ಲರೂ ಸಮಯಕ್ಕೆ ಸರಿಯಾಗಿ ಹಣ ಭರಣೆ ಮಾಡಿ ಸಂಘ ಸಂಸ್ಥೆಗಳು ಬೆಳೆಯುವಲ್ಲಿ ಸಹಕಾರ ನೀಡಬೇಕು ಎಂದರು.
ಈ ವೇಳೆ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯ ಮಾತನಾಡಿ, ಯೋಜನೆಯ ವಾತ್ಸಲ್ಯ ಕಾರ್ಯಕ್ರಮ, ಜನ ಮಂಗಲ ಕಾರ್ಯಕ್ರಮದಲ್ಲಿ ಅಂಗವಿಕಲರಿಗಾಗಿ ವೀಲ್ ಚೇರ್, ಸ್ಟಾಂಡ್, ವಾಟರ್ ಬೆಡ್, ಮತ್ತು ಪ್ರತಿ ತಿಂಗಳು ದುಡಿಯಲು ಶಕ್ತಿ ಇಲ್ಲದೆಯಿರುವ, ನೋಡಿಕೊಳ್ಳಲು ಯಾವುದೇ ಪೋಷಕರಿಲ್ಲದೆ ಇರುವ ಹಿರಿಯ ಜೀವಿಗಳಿಗೆ ಪ್ರತಿ ತಿಂಗಳು ೧೦೦೦/ರೂ ಮಾಶಾಸನ ನೀಡುವ ಮೂಲಕ ಅವರ ಜೀವನಕ್ಕೆ ಬೆಂಗಾವಲಾಗಿ ಯೋಜನೆ ಕರ್ತವ್ಯ ನಿರ್ವಹಿಸುತ್ತಿದೆ. ಹೀಗೆ ಸದಾ ನಿರ್ಗತಿಕರ ಪಾಲಿಗೆ ಧರ್ಮಸ್ಥಳ ಯೋಜನೆ ಒಂದು ಕುಟುಂಬ ಇದ್ದಂತೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕ ರವಿಕುಮಾರ, ಪತ್ರಕರ್ತ ಸಿದ್ದು ಕೆರಿಗೊಂಡ, ಗ್ರಾಪಂ ಸದಸ್ಯ ನೂರಮಹಮದ್ ಕಣ್ಣಿ, ಸಿದ್ದಪ್ಪ ಚೌಡಾಪುರ ಸೇರಿದಂತೆ ಅನೇಕರು ಇದ್ದರು.

