ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಲಿಂಗಾಯತ ಸಮಾಜ ಬಾಂಧವರ ಮೇಲೆ ಲಾಠಿ ಪ್ರಹಾರ ನಡೆಸಿ, ಸ್ವಾಮೀಜಿಗಳನ್ನು, ಶಾಸಕರು, ಸಂಸದರು, ಮುಖಂಡರು ಗಳನ್ನು ಬಂಧಿಸಿರುವ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ ಶುಕ್ರವಾರ ಪಕ್ಷಾತೀತವಾಗಿ ವಿವಿಧ ಸಮುದಾಯ ಬಾಂಧವರು ನಗರದ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿಯ ರಾಷ್ಟೀಯ ಹೆದ್ದಾರಿಯಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು, ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಹೆದ್ದಾರಿ ಬಂದ್ ಮಾಡಿದರು. ನಂತರ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯುದ್ದಕ್ಕೂ ಲಿಂಗಾಯತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಪಂಚಮಸಾಲಿ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ಸರ್ವಾಧಿಕಾರಿ ಧೋರಣೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧಿಕ್ಕಾರ, ಬೊಲೋ ಭಾರತ್ ಮಾತಾಕಿ ಜೈ, ಪಂಚಮಸಾಲಿ ಸಮಾಜಕ್ಕೆ ಜಯವಾಗಲಿ, ಹಿಂದೂ ಹುಲಿ ಬಸನಗೌಡ ಪಾಟೀಲ ಯತ್ನಾಳ ರವರಿಗೆ ಜಯವಾಗಲಿ, ಸಮಾಜಕ್ಕೆ ಅನ್ಯಾಯ ಮಾಡುತ್ತಿರುವ ಶಾಸಕ ವಿಜಯಾನಂದ ಕಾಶಪನವರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕಿತ್ತಾಕಲೇಬೇಕು ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ರಾಮನಗೌಡ ಪಾಟೀಲ ಯತ್ನಾಳ, ಸಮಾಜದ ಬಡ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಅಗತ್ಯವಿದೆ. ಅದನ್ನು ಪಡೆದುಕೊಳ್ಳಲು ಸರ್ಕಾರದ ಗಮನಸೆಳೆಯಲು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಏಕಾಏಕಿ ವೃದ್ಧರು ಎನ್ನದೆ ಎಲ್ಲರ ಮೇಲೆಯೂ ಲಾಠಿ ಪ್ರಹಾರ ಮಾಡಿಸಿರುವ ಕಾಂಗ್ರೆಸ್ ಸರ್ಕಾರದ ದೌರ್ಜನ್ಯದ ನಡೆ ಖಂಡನೀಯ. ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಸೇರಿದಾಗಲೂ ಶಾಂತ ರೀತಿಯಲ್ಲಿ ಹೋರಾಟ ಮಾಡಿದ ಸಮಾಜ ನಮ್ಮದು. ಈ ಹೋರಾಟ ಹತ್ತಿಕ್ಕುವ ಹುನ್ನಾರದಿಂದಲೇ ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರು ಏನೇ ಮಾಡಿದರೂ ನಮ್ಮ ಸಮಾಜದ ಬಡ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮೀಸಲಾತಿಗಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಅದನ್ನು ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಅಧಿವೇಶನದಲ್ಲಿಯೂ ಸಹ ನಮ್ಮ ತಂದೆಯವರಾದ ಶ್ರೀ ಬಸನಗೌಡ ರಾ.ಪಾಟೀಲ ಯತ್ನಾಳ ರವರು, ಸರ್ಕಾರದ ಗಮನಸೆಳೆದು, ಮೀಸಲಾತಿ ನೀಡುವಂತೆ ಹಾಗೂ ಅಮಾಯಕರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮತ್ತೆ ಬರುತ್ತೇವೆ ಎನ್ನುವ ಮಹಾನುಭಾವರು, ಅಧಿಕಾರ ಸಿಕ್ಕ ಮೇಲೆ ದಾರಿ ತಪ್ಪಿಸುತ್ತಿದ್ದಾರೆಂದು ಕಿಡಿಕಾರಿದರು.
ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಸ್.ರುದ್ರಗೌಡ್ರ ಮಾತನಾಡಿ, ಸಮಾಜದ ಬಡವರ ಮಕ್ಕಳ ಭವಿಷ್ಯಕ್ಕಾಗಿ ಬಸವ ಜಯಮೃತ್ಯುಂಜ ಶ್ರೀಗಳ ನೇತೃತ್ವದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತವಾಗಿ ವಿವಿಧ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದೇವೆ. ಎಂದೂ ಕೂಡ ಶಾಂತಿ ಕದಡಲು ಯತ್ನಿಸಿಲ್ಲ. ಆದರೆ, ಬೆಳಗಾವಿಯಲ್ಲಿ ಹೋರಾಟ ದಿಕ್ಕು ತಪ್ಪಿಸಲೆಂದೇ, ಕಾಂಗ್ರೆಸ್ ಅಮಾಯಕರ ಮೇಲೆ ಪೊಲೀಸರ ಮೂಲಕ ಮನಬಂದಂತೆ ದೌರ್ಜನ್ಯ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಕ್ಕಾಗಿ ಸಮಾಜ ಬಳಸಿಕೊಂಡ ಶಾಸಕ ವಿಜಯಾನಂದ ಕಾಶಪ್ಪನವರ, ಶಾಸಕನಾದ ಮೇಲೆ ಈಗ ಕಾಂಗ್ರೆಸ್ ಪಕ್ಷ ಆಡಿಸಿದಂತೆ ಆಡುತ್ತಿದ್ದು, ಹೋರಾಟದ ದಾರಿ ತಪ್ಪಿಸುವ ಹುನ್ನಾರ ನಡೆಸಿದನ್ನು ಸಮಾಜ ಗಮನಿಸುತ್ತಿದೆ. ಅಧಿಕಾರ ಇಲ್ಲದಾಗ ಮೀಸಲಾತಿಗಾಗಿ ಪ್ರಾಣ ಕೊಡುತ್ತೇನೆ ಎನ್ನುವ ನಿನ್ನ ಮಾತು ನೆನಪಿಲ್ಲವೆ? ನಿನ್ನ ಸ್ವಾರ್ಥಕ್ಕಾಗಿ ಸಮಾಜಕ್ಕಾಗಿ ಅವಿರತ ಶ್ರಮಿಸುತ್ತಿರುವ ಸ್ವಾಮೀಜಿಗಳು ಹಾಗೂ ಯತ್ನಾಳರ ಬಗ್ಗೆ ಮಾತನಾಡಿದರೆ ಸಮಾಜ ಸುಮ್ಮನಿರುವುದಿಲ್ಲ. ನಿನ್ನ ಸಮಾಜ ವಿರೊಧಿ ಧೋರಣೆ ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಸಮಾಜದ ಮತ ಪಡೆದು ಅಧಿಕಾರ ಅನುಭವಿಸುತ್ತಿರುವ ಸಚಿವರು, ಶಾಸಕರು ಬಾಯಿ ಬಿಟ್ಟು ಮಾತನಾಡಿ. ಇಲ್ಲದಿದ್ದರೆ, ರಾಜಿನಾಮೆ ಕೊಟ್ಟು ಸಮಾಜದ ಮತ ಪಡೆಯದೆ ಗೆದ್ದು ಬನ್ನಿ ಎಂದು ಸವಾಲು ಹಾಕಿದರು.
ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ಮಳುಗೌಡ ಪಾಟೀಲ, ಪಂಚಮಸಾಲಿ ರಾಜ್ಯ ವಕೀಲರ ಪರಿಷತ್ ಸದಸ್ಯ ಶ್ರೀಶೈಲ ಮುಳಜಿ ಮಾತನಾಡಿದರು. ಪಂಚಮಸಾಲಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಸೋಲಾಪುರ, ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬುಕ್ಕಣಿ, ಪಂಚಸೈನ್ಯ ಜಿಲ್ಲಾಧ್ಯಕ್ಷ ಶರಣಬಸಪ್ಪ ಗಂಗಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ್ ಜಾಧವ, ಪ್ರೇಮಾನಂದ ಬಿರಾದಾರ, ಕಿರಣ ಪಾಟೀಲ, ಮಳುಗೌಡ ಬಿರಾದಾರ, ರಾಜಶೇಖರ ಕುರಿಯವರ, ಗಿರೀಶ ಪಾಟೀಲ, ಮುಖಂಡರಾದ ಪಾಂಡುಸಾಹುಕಾರ ದೊಡ್ಡಮನಿ, ಅನೀಲ ಪಾಟೀಲ, ವಿಶ್ವನಾಥ ಸಾರವಾಡ, ನಿತೀಶ ಬಿರಾದಾರ, ಉಮೇಶ ಕೊಳಕೂರ, ಕಿರಣ ಉಳ್ಳಾಗಡ್ಡಿ, ಶಂಕರಗೌಡ ಹೊನಗನಹಳ್ಳಿ, ಸಾಹೇಬಗೌಡ ಬಿರಾದಾರ, ಸಿದ್ದು ಬಿರಾದಾರ, ದಾನೇಶ ಅವಟಿ ಮತ್ತಿತರರು ಇದ್ದರು.

