ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಆರೋಗ್ಯದ ದೇಹ ಆತ್ಮದ ಅರಮನೆಯಾದರೆ ಅನಾರೋಗ್ಯದ ದೇಹ ಆತ್ಮದ ಸೆರೆಮನೆ. ಜೀವನದಲ್ಲಿ ಆಸ್ತಿ, ಅಂತಸ್ತು, ಅಧಿಕಾರ ಯಾವುದೂ ನಮ್ಮೊಟ್ಟಿಗೆ ಇರಲಾರದು. ಸ್ಥಿರವಾಗಿ ಇರುವದು ಆರೋಗ್ಯ ಮಾತ್ರ ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕ, ಖ್ಯಾತ ನೇತೃ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.
ಪಟ್ಟಣದ ಹುಡ್ಕೋ ಬಡವಾಣೆಯ ಗವಿಸಿದ್ದೇಶ್ವರ ವೇದಿಕೆಯಲ್ಲಿ ಹಿಮಾಲಯನ್ ಧ್ಯಾನಯೋಗಿ ಮತ್ತು ಆಧ್ಯಾತ್ಮಿಕ ಪ್ರವಚನಕಾರ ಪ.ಪೂ.ನಿರಂಜನ ಮಹಾಸ್ವಾಮಿಗಳು ೧೧ ದಿನಗಳ ಕಾಲ ನಿರಂತರವಾಗಿ ನಡೆಸಿಕೊಟ್ಟ ಯೋಗಾಭ್ಯಾಸ ಮತ್ತು ಆಧ್ಯಾತ್ಮಿಕ ಪ್ರವಚನದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹುಟ್ಟುವಾಗ ದೇವರು ಎಲ್ಲರಿಗೂ ಒಂದೇ ತರನಾದ ದೇಹದ ಜೊತೆಗೆ ವಾರಂಟಿ ಕೊಟ್ಟಿರುತ್ತಾನೆ. ಆದರೆ ಗ್ಯಾರಂಟಿ ಕೊಟ್ಟಿರುವದಿಲ್ಲ. ನಾವು ಒಳ್ಳೆಯ ಆಚಾರ, ವಿಚಾರ, ಅಹಾರ ಪದ್ಧತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮತ್ತು ಯಾವ ವ್ಯಕ್ತಿ ಸಂತೃಪ್ತಿಯಿಂದ ಜೀವಿಸುತ್ತಾನೋ ಆ ವ್ಯಕ್ತಿ ಮಾತ್ರ ಆರೋಗ್ಯವಂತನಾಗಿ ಜೀವಿಸಲು ಸಾಧ್ಯ, ಆ ಸಂತೃಪ್ತಿ ಆಧ್ಯಾತ್ಮದಲ್ಲಿ ಮಾತ್ರ ಇರೋದು. ಎಲ್ಲರೂ ಯೋಗವನ್ನು ಕಲಿತು ಆರೋಗ್ಯವಂತರಾಗಿ ಬದುಕಬೇಕು ಎಂದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ ಬಹಳಷ್ಟು ಕಾರ್ಯಕ್ರಮಗಳು ಪೂಜ್ಯರ ಅಣತೆಯಂತೆ ನಡೆಯುವ ಸಧ್ಯದ ದಿನಮಾನದಲ್ಲಿ ಯಾವುದೇ ಅಪೇಕ್ಷೆ, ಫಲಾಪೇಕ್ಷೆ ಇಲ್ಲದೇ ನಮಗೆಲ್ಲ ಯೋಗಾಭ್ಯಾಸ ಮತ್ತು ಆಧ್ಯಾತ್ಮದ ಅಂಮೃತವನ್ನು ಉಣಬಡಿಸಿದ ಪ.ಪೂ.ನಿರಂಜನ ಮಹಾಸ್ವಾಮಿಗಳ ಕಾರ್ಯ ಶ್ಲಾಘನೀಯ ಎಂದರು.
ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಶಿಕ್ಷಕ ರುದ್ರೇಶ ಕಿತ್ತೂರ ಸೇರಿದಂತೆ ಮತ್ತೀತರರು ಮಾತನಾಡಿದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ, ವಿಕ್ರಂ ಓಸ್ವಾಲ ಸೇರಿದಂತೆ ಮತ್ತೀತರರು ಇದ್ದರು. ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಶಿಕ್ಷಕ ಬೇವಿನಗಿಡದ ನಿರೂಪಿಸಿದರು. ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ವಂದಿಸಿದರು.

