ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜಾತಿಗಿಂದ ನೀತಿ ಪ್ರಧಾನವಾದದ್ದು. ಮಕ್ಕಳಿರುವಾಗಲೇ ಸಾಮರಸ್ಯದ ಬದುಕನ್ನು ಕಲಿಸಲು ಎಲ್ಲ ಪಾಲಕರು ಮುಂದಾಗಬೇಕಿದೆ ಎಂದು ೧೦ನೇ ತರಗತಿ ವಿದ್ಯಾರ್ಥಿನಿ ಅಪ್ಸರಾ ಅವಟಿ ಹೇಳಿದಳು.
ತಾಲೂಕಿನ ಹಡಲಗೇರಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವದ್ಗೀತಾ ಜಯಂತಿ ಮತ್ತು ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವಳು ಮಾತನಾಡಿದಳು.
ಭಗವದ್ಗೀತಾ ಅಭಿಯಾನದ ಮೂಲಕ ಜನರಲ್ಲಿ ಸಾಮರಸ್ಯತೆ ಮತ್ತು ದೇಶದ ಸಮಗ್ರತೆ ಬೆಳೆಸಲಾಗುತ್ತಿದೆ. ಶಾಂತಿಯುತ ಸಹಬಾಳ್ವೆಯ ಅಭಿವೃಧ್ಧಿಯುತ ದೇಶ ನಿರ್ಮಾಣದ ಉದ್ದೇಶದಿಂದಲೇ ಸ್ವಾಮೀಜಿಯವರು ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಉತ್ತಮ ಗ್ರಂಥಗಳ ಉತ್ತಮಾಂಶಗಳನ್ನು ಎಲ್ಲರು ಅನುಸರಿಸುವಂತಾಗ ಬೇಕು. ಶಿಕ್ಷಣದ ಪಠ್ಯಕ್ರಮದಲ್ಲೂ ಜನ ಪ್ರತಿನಿಧಿಗಳು ಪಠ್ಯಪುಸ್ತಕದ ರಚನೆಯಲ್ಲಿ ಮಾನವೀಯ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂದಳು.
ಪ್ರಮುಖರಾದ ಪ್ರಾಣೇಶ ಜೋಶಿ ಮಾತನಾಡಿ ಮನಸ್ಥೈರ್ಯ ಮತ್ತು ಧರ್ಮವನ್ನು ಬೆಳೆಸುವ ಘನ ಉದ್ದೇಶದಿಂದ ಭಗವದ್ಗೀತೆ ತಲೆ ಎತ್ತಿ ನಿಂತಿದೆ. ಅದೊಂದು ದಿವ್ಯ ಔಷಧವಾಗಿದೆ. ಸಮಾಜ ಜಾಗೃತಮಾಡುವ ಶಕ್ತಿ ಹೊಂದಿದೆ. ಭಕ್ತಿಗೆ ಅನುರೂಪವೆಂದರೆ ಕನಕದಾಸರೆಂದು ನಿದರ್ಶಿಸುವುದು ಇದೆ. ಹಾಗಾದರೆ ಆ ಮಟ್ಟದ ಭಕ್ತಿ ಪರವಶತೆ ನಮ್ಮೆಲ್ಲರಲ್ಲಿ ಬರಬೇಕಾಗಿದೆ. ತಾಳ್ಮೆ, ಸಹನೆ ನಮ್ಮಲ್ಲಿ ಸದಾ ರೂಢಿಸಿ ಕೊಳ್ಳ ಬೇಕಾಗಿದೆ. ತಾಯಂದಿರು ಮಕ್ಕಳನ್ನು ಕಣ್ಮುಚ್ಚಿ ಬೆಳೆಸ ಬಾರದು. ಪಾಲಕರು ಅನುಸರಿಸುವ ರೀತಿ ನೀತಿಗಳು ಸದಾ ಮಕ್ಕಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ ಎಂದರು.
ಗ್ರಾಮಸ್ಥರಾದ ಸಿದ್ದಣ್ಣ ಕುಂಟೋಜಿ ಮಾತನಾಡಿ ಹಳ್ಳಿಹಳ್ಳಿಗಳಲ್ಲಿ ಭಗವದ್ಗೀತೆಯ ಜ್ಞಾನ ಸತ್ರಗಳು ಏರ್ಪಡಬೇಕಾಗಿದೆ. ಕೃಷ್ಣನ ಆದರ್ಶಗಳಿಗೆ ಮೈಸೋತು ಕನಕದಾಸರು ಭೂಲೋಕದಲ್ಲಿಯೆ ಇದ್ದುಕೊಂಡು ಭಗವಂತನನ್ನು ಕಂಡುಕೊಂಡಂತೆ ನಾವು ಭಗವಂತನಲ್ಲಿ ದೃಢ ಚಿತ್ತವನ್ನು ಇಡಬೇಕು. ಗುರುವಿನ ಮಾತಿನಲ್ಲಿ ದೃಢನಂಬಿಕೆ ಇಟ್ಟಕೊಳ್ಳಬೇಕು ಎಂದರು.
ಮುಖ್ಯಗುರು ಎಚ್.ಬಿ.ಪಾಟೀಲ್, ಅಧ್ಯಕ್ಷತೆ ವಹಿಸಿಕೊಂಡಿದ್ದ ನಿವೃತ್ತ ಶಿಕ್ಷಕ ಎಸ್.ಎಚ್.ಮುದ್ನಾಳ ಮಾತನಾಡಿದರು. ಎಸ್.ಜಿ.ಹರಿಂದ್ರಾಳ, ನಾಗರಾಜ ಕುಲಕರ್ಣಿ, ಎ.ಕೆಪಡೇಕನೂರ, ಎಸ್.ಎಸ್.ಹೆಬ್ಬಾರ, ವಿಠ್ಠಲ ಕಿಲಾರೆಟ್ಟಿ, ಬಿ.ಎಸ್.ಬಿರಾದಾರ, ಅಭಿಯಾನದ ತಾಲೂಕು ಸಂಚಾಲಕ ರಾಮಚಂದ್ರ ಹೆಗಡೆ, ಭೀಮಣ್ಣ ಪಡೇಕನೂರ, ಸಂಗಣ್ಣ ಮುದ್ನಾಳ, ಎಸ್.ವಾಯ್.ಹರಿಂದ್ರಾಳ ಸೇರಿದಂತೆ ಮತ್ತೀತರರು ಇದ್ದರು.
ಶಿಕ್ಷಕ ಎಮ್.ಎ.ತಳ್ಳಿಕೇರಿ ಸ್ವಾಗತಿಸಿದರು. ಪ್ರಶಿಕ್ಷಕಿ ಪ್ರಭಾ ಹೆಬ್ಬಾರ ಗೀತೆಯ ಸಾಮೂಹಿಕ ಪಠಣ ನೆರವೇರಿಸಿದರು. ವಿದ್ಯಾರ್ಥಿ ಅಭಿರಾಮ ಹೆಗಡೆ ಮಂಗಲ ಗೀತೆ ಹಾಡಿದನು.

