ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ಯಡ್ರಾಮಿ ತಾಲೂಕಿನ ನಾಗರಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಮೇಲಾದ ಲಾಠಿ ಚಾರ್ಜ್ ವಿರೋಧಿಸಿ ಶಹಾಪುರ ಸಿಂದಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಗುರುವಾರ ಪ್ರತಿಭಟನೆ ಮಾಡಲಾಯಿತು .
ಈ ವೇಳೆ, ಪಂಚಮಸಾಲಿ ಕಲಬುರಗಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಲ್ಲನಗೌಡ ಪಾಟೀಲ ಕುಳಗೇರಿ ಮಾತನಾಡಿ, ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಆಗ್ರಹಿಸಿದ ಲಿಂಗಾಯತ ಪಂಚಮಸಾಲಿ ಸಮುದಾಯದ 2- ಎ ಮೀಸಲಾತಿ ಹೋರಾಟವನ್ನು ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆ ನಿಯಂತ್ರಿಸಲು ದುರುದ್ದೇಶದಿಂದ ಲಾಠಿಚಾರ್ಜ್ ನೆಪದಲ್ಲಿ ಸಮಾಜ ಬಾಂಧವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸರ್ಕಾರದ ಕ್ರಮ ಅತ್ಯಂತ ಹೀನ ಕೃತ್ಯವಾಗಿದೆ . ಪ್ರತಿಯೊಬ್ಬರಿಗೂ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಸ್ವಾತಂತ್ರ್ಯ ಇದೆ. ಆದರೆ ಸರ್ಕಾರಕ್ಕೆ ಹೋರಾಟದ ಬಿಸಿ ಅರಗಿಸಿಕೊಳ್ಳಲು ಆಗದೇ ಇರುವುದರಿಂದ ನ್ಯಾಯಯುತ ಬೇಡಿಕೆಯನ್ನೇ ಹತ್ತಿಕ್ಕುವ ಹೇಡಿತನದ ಕೆಲಸ ಮಾಡಹತ್ತಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ನಮ್ಮ ಪಂಚಮಸಾಲಿ ಸಮಾಜದ ಮೀಸಲಾತಿ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದರು. ಪ್ರತಿಭಟನೆ ವೇಳೆ ಸುಖಾ ಸುಮ್ಮನೆ ಸಮಾಜದ ಮುಖಂಡರ ಮೇಲೆ ಮಾಡಿದ ಕೇಸುಗಳನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಬಂದ ತಹಸಿಲ್ದಾರ್ ಶಶಿಕಲಾ ಪಾದಗಟ್ಟಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಾಬುಗೌಡ ಪಾಟೀಲ, ಜಿ ಬಿ ಪಾಟೀಲ, ಮಳ್ಳಿ ಗ್ರಾಪಂ ಅಧ್ಯಕ್ಷ ಬಸನಗೌಡ ಮಾಲಿಪಾಟೀಲ, ನಾನಾಗೌಡ ಪಾಟೀಲ, ಮಲ್ಲನಗೌಡ ಮಾಲಿಪಾಟೀಲ, ರಮೇಶ ಸಾಹು ಸೂಗೂರ, ಭೀಮನಗೌಡ ಪಾಟೀಲ, ರುದ್ರಗೌಡ ಬಿರಾದಾರ, ಅನಿಲಗೌಡ ಪಾಟೀಲ, ಪರುತ ಮಡಿವಾಳಕರ, ಶಾಂಭವಶಿವ ಹಿರೇಮಠ, ಸಾಹೇಬಗೌಡ. ಬಿ. ದೇಸಾಯಿ , ದೇವನಗೌಡ ಬಿರಾದಾರ, ಪ್ರಕಾಶ ಕಿರಣಗಿ, ಶಾಂತಗೌಡ ಬಿರಾದಾರ, ಗಿರಿಮಲ್ಲಪ್ಪಗೌಡ ಮಾಲಿಪಾಟೀಲ, ಬಾಬುಗೌಡ ಭೀಮನಗೌಡ ಬಿರಾದಾರ, ಸಾಹೇಬಗೌಡ ಬಿರಾದಾರ , ಅಶೋಕ ಗೌಡ ಪಾಟೀಲ , ರುದ್ರಗೌಡ ಎಸ್ ಬಿರಾದಾರ, ಸಿದ್ದನಗೌಡ ಬಿ ಪಾಟೀಲ, ಮಲ್ಲನಗೌಡ ಬಿರಾದಾರ, ಸೋಮಶೇಖರಯ್ಯ ಚಿಕ್ಕಮಠ, ಸಿದ್ದು ಆಂದೋಲ, ಸಂತೋಷ ಸಾಸನೂರ, ಬಸವರಾಜ ನಾಲವಾರ, ಸಮಾಜಬಾಂಧವರು , ಇತರರಿದ್ದರು.

