ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ತಾಲೂಕಿನ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಗುರುವಾರ ಜಮಾಯಿಸಿ ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರ ಮೇಲೆ ನಡೆದ ಲಾಠಿ ಜಾರ್ಜ ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬಸವೇಶ್ವರ ವೃತ್ತದವರೆಗೂ ಮೆರವಣಿಗೆ ಮೂಲಕ ಆಗಮಿಸಿದ ನಂತರ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರ್ಧ ಗಂಟೆ ಕಾಲಕ್ಕೂ ಹೆಚ್ಚು ರಸ್ತೆ ತಡೆದು ಟೈಯರ್ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ ಮಾತನಾಡಿ, ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಮೀಸಲಾತಿಗಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ಮಾಡಿದರುವದು ಅನ್ನದಾತರಿಗೆ ಮಾಡಿರುವ ಹಲ್ಲೆಯಾಗಿದೆ. ಇದು ನಮ್ಮ ಸಮಾಜಕ್ಕೆ ಮಾಡಿರುವ ಅವಮಾನವಾಗಿದೆ. ನಮ್ಮ ಬಾಂಧವರು ಸಮಾಜದ ಬಡ ವಿದ್ಯಾರ್ಥಿಗಳ ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿಗಾಗಿ ಹಲವಾರು ವರ್ಷಗಳಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ನಮ್ಮ ಹೋರಾಟ ಎಂದಿಗೂ ಹಿಂಸಾರೂಪಕ್ಕೆ ಹೋಗಿಲ್ಲ. ಬೆಳಗಾವಿಯಲ್ಲಿಯೂ ಶಾಂತಿಯುತವಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ಮಾಡಲಾಗುತ್ತಿತ್ತು. ಶಾಂತಿಯನ್ನು ಕಾಪಾಡಬೇಕಾದ ಪೊಲೀಸರು ಅಮಾಯಕರ ಮೇಲೆ ಲಾಠಿ ಜಾರ್ಜ್ ಮಾಡಿ ಸಮಾಜ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿಯವರನ್ನು ಬಂಧಿಸಿರುವುದು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸರ್ಕಾರ ಅವಮಾನ ಮಾಡಿದೆ. ಕೂಡಲೇ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು.
ಹಿಂದಿನ ಬಿಜೆಪಿ ಸರ್ಕಾರವು ನಮ್ಮ ಸಮಾಜಕ್ಕೆ ಮೋಸ ಮಾಡಿದೆ. ಈಗಿರುವ ಕಾಂಗ್ರೆಸ್ ಸರ್ಕಾರವು ಅದೇ ದಾರಿಯಲ್ಲಿ ಸಾಗುತ್ತಿರುವದನ್ನು ನೋಡಿದರೆ ನಮ್ಮ ಸಮಾಜಕ್ಕೆ ನ್ಯಾಯ ಸಿಗುವ ಭರವಸೆ ಇಲ್ಲದಂತಾಗಿದೆ. ಇಂದು ರಸ್ತೆ ತಡೆ ಮಾಡುವ ಮೂಲಕ ಲಾಠಿ ಜಾರ್ಜ್ ಘಟನೆಯನ್ನು ಖಂಡಿಸಿದ್ದೇವೆ. ಮುಂಬರುವ ದಿನಗಳಲ್ಲಿ ನಮ್ಮ ಹೋರಾಟ ಉಗ್ರಸ್ವರೂಪದಲ್ಲಿ ಇರಲಿದೆ ಎಂದು ಎಚ್ಚರಿಸಿದರು.
ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಲಾಠಿ ಜಾರ್ಜ್ ಸಮಯದಲ್ಲಿ ಅನೇಕ ವಕೀಲರಿಗೆ,ರೈತರಿಗೆ,ಯುವಕರಿಗೆ ಗಂಭೀರವಾದ ಗಾಯಗಳಾಗಿವೆ. ಹೋರಾಟದಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರ ಮೇಲೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಕೂಡಲೇ ಎಲ್ಲ ಹೋರಾಟಗಾರರ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಬೇಕು. ಮುಖಂಡರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಸಿದ್ದಣ್ಣ ಕಲ್ಲೂರ, ಶ್ರೀಶೈಲ ಮಾಳಜಿ, ರವಿಗೌಡ ಚಿಕ್ಕೊಂಡ, ಸದಾನಂದ ಬಶೆಟ್ಟಿ ಇತರರು ಮಾತನಾಡಿದರು.

