ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ಅಖಂಡ ೧೮೮ ದಿನದ ಹೋರಾಟದ ಫಲವಾಗಿ ಬಸವನಬಾಗೇವಾಡಿ ವಿದ್ಯುತ್ ವಿಭಾಗೀಯ ಕಚೇರಿ ದಿ.12.12.2012 ರಂದು ಆದೇಶ ಸಿಕ್ಕಿತು. ಇದರಿಂದಾಗಿ 297 ಗ್ರಾಮಗಳ ಜನರು ವಿಜಯಪುರಕ್ಕೆ ಹೋಗಿ ಬರುವುದನ್ನು ತಪ್ಪಿಸಿದಂತಾಗಿದೆ. ಇಂದಿಗೆ ಈ ಕಚೇರಿಯು ಹತ್ತು ವರ್ಷದ ಹಿಂದೆ ಆದೇಶದೊಂದಿಗೆ ಆರಂಭವಾಗಿ ಇಂದಿಗೆ ಹನ್ನೊಂದು ವರ್ಷಕ್ಕೆ ಕಾಲಿಡುತ್ತಿದ್ದರೂ ಜನರಿಗೆ ಈ ಕಚೇರಿಯ ಸೌಲಭ್ಯಗಳು ಸರಿಯಾಗಿ ಜನರಿಗೆ ಸಿಗುತ್ತಿಲ್ಲ ಎಂದು ರೈತಪರ, ಜನಪರ ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಹೇಳಿದರು.
ಗುರುವಾರ ದೂರವಾಣಿ ಮೂಲಕ ಮಾತನಾಡಿದ ಅವರು, ಪಟ್ಟಣದಲ್ಲಿ ವಿದ್ಯುತ್ ವಿಭಾಗೀಯ ಕಚೇರಿ ಇಲ್ಲದ ಪರಿಣಾಮವಾಗಿ ಜನರು ಜಿಲ್ಲಾ ಕೇಂದ್ರ ವಿಜಯಪುರಕ್ಕೆ ತಮ್ಮ ಕೆಲಸಗಳಿಗಾಗಿ ಅಲೆದಾಡುವ ಪರಿಸ್ಥಿತಿಯಿತ್ತು. ಅಲ್ಲದೇ ದೂರದ ತಾಳಿಕೋಟಿ, ಮುದ್ದೇಬಿಹಾಳ, ನಿಡಗುಂದಿ, ಕೊಲ್ಹಾರ ತಾಲೂಕಿನ ಸೇರಿದಂತೆ ಇದರ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಜನರು ವಿದ್ಯುತ್ ಕೆಲಸಗಳಿಗಾಗಿ ವಿಜಯಪುರದಲ್ಲಿರುವ ವಿಭಾಗೀಯ ಕಚೇರಿಗೆ ಹೋಗುವ ಪರಿಸ್ಥಿತಿಯಿತ್ತು. ಜನರ ಅಲೆದಾಡುವದನ್ನು ಮನಗಂಡು ಅವರ ಕೆಲಸಗಳು ಸುಲಭವಾಗಿ ಬೇಗನೇ ಆಗುವ ಉದ್ದೇಶದಿಂದ ಹೆಸ್ಕಾಂ ಇಲಾಖೆಯು ಬಸವನಬಾಗೇವಾಡಿಯಲ್ಲಿ ವಿದ್ಯುತ್ ವಿಭಾಗೀಯ ಕಚೇರಿ ಆರಂಭಿಸುವಂತೆ ಆಗ್ರಹಿಸಿ 188 ದಿನಗಳ ಕಾಲ ಹೋರಾಟ ಮಾಡಿದ ಫಲವಾಗಿ ಇಲಾಖೆಯು ಕಚೇರಿ ಸ್ಥಾಪನೆಗೆ ಆದೇಶ ನೀಡಿತು. ಜನರಿಗೆ ತುಂಬಾ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಾನು ನಿರಂತರವಾಗಿ ಹೋರಾಟ ಮಾಡಿದ ಫಲವಾಗಿ ಕಚೇರಿ ಆರಂಭವಾಗಿ ಹನ್ನೆರಡು ವರ್ಷ ಗತಿಸಿದರೂ ಇಂಧನ ಇಲಾಖೆಯ ಸಚಿವರು, ಜನಪ್ರತಿನಿಧಿಗಳ, ಅಧಿಕಾರಿಗಳ ಬೇಜಬ್ದಾರಿಯಿಂದ ರೈತರಿಗೆ ಸಿಗಬೇಕಾದ ಮೂಲ ಸೌಕರ್ಯಗಳನ್ನು ಸರಿಯಾಗಿ ಸಿಗುತ್ತಿಲ್ಲ. ರೈತರು ಅಕ್ರಮ-ಸಕ್ರಮ ಯೋಜನೆಯಲ್ಲಿ ಹಣ ತುಂಬಿದರೂ ಇದುವರೆಗೂ ಸರಿಯಾಗಿ ಮೂಲಭೂತ ಸೌಲಭ್ಯ ಸಿಕ್ಕಿಲ್ಲ. ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಇದರಿಂದಾಗಿ ಇಲಾಖೆಗೆ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಹಲವಾರು ಅಧಿಕಾರಿಗಳು ಸ್ಥಾನಿಕ ಸ್ಥಳದಲ್ಲಿ ಇರದೇ ಬೇರೆಡೆಯಿಂದ ಬಂದು ಹೋಗುವದರಿಂದಾಗಿ ರೈತರಿಗೆ, ಜನರಿಗೆ ಬಹಳ ಅನಾನೂಕೂಲತೆಯಾಗುತ್ತಿದೆ. ಇಲಾಖೆಯ ಸಿಬ್ಬಂದಿಗಳು ಸಹ ರೈತರಿಗೆ, ಜನರಿಗೆ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಇದರಿಂದಾಗಿ ಅವರ ಕೆಲಸಗಳು ನೆನೆಗುದಿಗೆ ಬೀಳುತ್ತಿವೆ. ಈಚೆಗೆ ಬಂದ ಹಿರಿಯ ಅಧಿಕಾರಿಗಳು ಕುರ್ಚಿಗಳನ್ನು ಖರೀದಿ ಮಾಡಿಕೊಂಡಯ ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಕೂಡಲೇ ಇಂಧನ ಸಚಿವರು, ಮೇಲಾಧಿಕಾರಿಗಳು, ಸ್ಥಳೀಯ ಶಾಸಕರು ಇದರ ಕಡೆಗೆ ಗಮನ ಹರಿಸಬೇಕಿದೆ ಎಂದ ಅವರು, 22.09.2023 ರಂದು ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನದನ್ವಯ ರೈತರಿಗೆ ಸಿಗಬೇಕಾದ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ. ಕೂಡಲೇ ರೈತರಿಗೆ ನ್ಯಾಯಯುತ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ನ್ಯಾಯ ಒದಗಿಸಬೇಕು. ಈ ಕುರಿತು ಬೆಳಗಾವಿಯ ಅಧಿವೇಶನದಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ಆಗ್ರಹಿಸಿದರು.

